ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಪ್‌ಕಾಮ್ಸ್, ಕೆವಿಕೆ ಉತ್ಪನ್ನ ಮಾರಾಟ ಮಳಿಗೆ ನಿರ್ಮಾಣಕ್ಕೆ ಸಲಹೆ

ಸ್ಮಾರ್ಟ್ ಸಿಟಿ: ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರಿಂದ ಜೂನಿಯರ್ ಕಾಲೇಜು ಮೈದಾನ ಕಾಮಗಾರಿ ಪರಿಶೀಲನೆ
Last Updated 24 ಜೂನ್ 2019, 16:24 IST
ಅಕ್ಷರ ಗಾತ್ರ

ತುಮಕೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿ ಕುರಿತಂತೆ ಸೋಮವಾರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳು, ಗುತ್ತಿಗೆ ಏಜೆನ್ಸಿಯ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ಅಂದಾಜು 9.5 ಕೋಟಿ ಮೊತ್ತದಲ್ಲಿ ಕೈಗೊಂಡಿರುವ ಕಾಮಗಾರಿಗಳ ಕುರಿತು ಮಾಹಿತಿ ಪಡೆದರು. ಕಬಡ್ಡಿ ಮೈದಾನದಲ್ಲಿ ರಬ್ಬರ್ ಮ್ಯಾಟ್, ಮಣ್ಣಿನ ಕೊಕ್ಕೊ ಮೈದಾನ ರೂಪಿಸುವುದು, ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಗ್ಯಾಲರಿ ನಿರ್ಮಾಣ ಮಾಡುವುದು, ಶೌಚಾಲಯ ನಿರ್ಮಾಣ, ಮೂತ್ರ ವಿಸರ್ಜನಾಲಯಗಳನ್ನು ಪ್ರಸ್ತಾವನೆಯಲ್ಲಿರುವುದಕ್ಕಿಂತ ಹೆಚ್ಚು ನಿರ್ಮಾಣ ಮಾಡಲು ಸಲಹೆ ನೀಡಿದರು.

ಹಾಪ್‌ಕಾಮ್ಸ್, ಕೆಎಂಎಫ್‌, ಕೃಷಿ ವಿಜ್ಞಾನ ಕೇಂದ್ರ, ಸಾವಯವ, ಸಿರಿಧಾನ್ಯ ಸೇರಿದಂತೆ ವಿಶೇಷ ಸಂಸ್ಥೆಗಳಿಗೆ ಉತ್ಪನ್ನ ಮಾರಾಟಕ್ಕೆ ವ್ಯಾಪಾರಿ ಮಳಿಗೆ ನಿರ್ಮಾಣ ಮಾಡುವುದು, ಕಬಡ್ಡಿ, ಕ್ರಿಕೆಟ್, ಕೊಕ್ಕೊ, ಅಥ್ಲಿಟ್‌ ಸೇರಿದಂತೆ ಎಲ್ಲ ಕ್ರೀಡಾಪಟುಗಳಿಗೆ ಒಂದೇ ಕಡೆ ಜಿ ಪ್ಲಸ್ 2 ಕಟ್ಟಡ ಗ್ಯಾಲರಿ ನಿರ್ಮಾಣ ಮಾಡಬೇಕು, ಸದ್ಯ ಈಗ ಮೈದಾನದಲ್ಲಿರುವ ವೇದಿಕೆಯನ್ನು ವಿಸ್ತರಣೆ ಮಾಡಿ ಅಭಿವೃದ್ಧಿ ಪಡಿಸಬೇಕು ಎಂದು ಹೇಳಿದರು.

ಜನರೇಟರ್ ಕೊಠಡಿ ನಿರ್ಮಾಣ, ಅತ್ಯಾಧುನಿಕ ರೀತಿಯಲ್ಲಿ ಬ್ಯಾಸ್ಕೆಟ್ ಬಾಲ್ ಅಂಕಣ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.
ಕ್ರೀಡಾಂಗಣದಲ್ಲಿ ಆಲಂಕಾರಿಕ ಗಿಡಗಳನ್ನು ನೆಡುವ ಯೋಜನೆಯನ್ನು ಕೈ ಬಿಡಬೇಕು. ಅವು ಸಾರ್ವಜನಿಕ ಕ್ರೀಡಾಂಗಣದಲ್ಲಿ ಉಳಿಯುವುದೂ ಇಲ್ಲ ಎಂದು ಸೂಚಿಸಿದರು.

ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಬಿಸಿಯೂಟ ಮಾಡಲು ಮಕ್ಕಳಿಗೆ ಊಟದ ಹಾಲ್ ನಿರ್ಮಾಣ ಮಾಡಿಕೊಡಲು ಮನವಿ ಮಾಡಿದರು. ಅಲ್ಲದೇ, ಶಾಲೆಗೆ ಹೋಗಿ ಬರುವ ಮಾರ್ಗ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಸಾಗಿ ಹೋಗಿ ಬರಬೇಕಾಗಿದೆ. ಪ್ರತ್ಯೇಕ ಮಾರ್ಗ ಕಲ್ಪಿಸಿಕೊಡಬೇಕು. ಕುಡಿಯುವ ನೀರಿನ ಸಮಸ್ಯೆ ಪರಿಹರಿಸಬೇಕು ಎಂದು ಕೋರಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಲತಾಕುಮಾರಿ ಮಾತನಾಡಿ, ‘ಪಿಯು ಡಿಡಿಪಿಐ ಕಚೇರಿಯೂ ಕಿರಿದಾಗಿದೆ. ದುರಸ್ತಿಯಾಗಬೇಕಿದೆ. ಹೀಗಾಗಿ, ಹೊಸ ಕಚೇರಿಯನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ನಿರ್ಮಿಸಿಕೊಡಬೇಕು’ ಎಂದು ಮನವಿ ಮಾಡಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಸ್ಥಳೀಯ ಕ್ರೀಡಾಪಟುಗಳು, ಉದಯೋನ್ಮುಖ ಆಟಗಾರರು ಹಾಗೂ ಸರ್ಕಾರಿ ಜೂನಿಯರ್ ಕಾಲೇಜು, ಪ್ರೌಢಶಾಲೆಯ ಒಟ್ಟು 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಕೈಗೊಂಡಿದ್ದು, ಈ ಆಶಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕು. ಸ್ಥಳೀಯ ಕ್ರೀಡಾ ಪ್ರತಿನಿಧಿಗಳ ಸಲಹೆ ಪಡೆಯಲು ಸೂಚಿಸಿದರು.

ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ಜಂಟಿ ವ್ಯವಸ್ಥಾ‍ಪಕ ಅಜಯ್ ವಿಠಲ್, ಯೋಜನೆ ಮುಖ್ಯಸ್ಥ (ಪ್ರೊಜೆಕ್ಟ್ ಹೆಡ್) ಪವನಕುಮಾರ್ ಸೈನಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT