ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸಾಕ್ಷರತೆಗೆ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಸಲಹೆ

Last Updated 15 ನವೆಂಬರ್ 2021, 6:40 IST
ಅಕ್ಷರ ಗಾತ್ರ

ತಿಪಟೂರು: ‘ಉಚಿತ ಕಾನೂನು ಸಲಹೆ ಹಾಗೂ ಕಾನೂನು ಸಹಾಯದ ಜೊತೆಗೆ ಜನಸಾಮಾನ್ಯರಲ್ಲಿ ಅವರ ಹಕ್ಕುಗಳು, ಕರ್ತವ್ಯದ ಬಗ್ಗೆ ಅರಿವು ಮೂಡಿಸುವುದು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಅತಿಮುಖ್ಯ ಕರ್ತವ್ಯವಾಗಿದೆ’ ಎಂದು ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಬಿ. ಶಿವಕುಮಾರ್ ತಿಳಿಸಿದರು.

ನಗರದ ಕಲ್ಪತರು ಸಭಾಂಗಣದಲ್ಲಿ ಭಾನುವಾರ ಕಾನೂನು ಸೇವಾ ಪ್ರಾಧಿಕಾರದಿಂದ ಆಯೋಜಿಸಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದ ಸಮಾರೋಪ ಉದ್ಘಾಟಿಸಿ ಅವರು ಮಾತನಾಡಿದರು.

ಕಾನೂನು ಸಾಕ್ಷರತೆಯು ಜನಸಾಮಾನ್ಯರು, ಹಿಂದುಳಿದ ವರ್ಗಗಳಿಗೆ ಸೇರಿದ ಜನರನ್ನು ಶೋಷಣೆ ವಿರುದ್ಧ ಹೋರಾಡಲು ಶಕ್ತರಾಗುವಂತೆ ಮಾಡಲು ಇರುವ ಸಾಧನಗಳಲ್ಲಿ ಅತ್ಯುತ್ತಮವಾದುದು. ಇದರಿಂದ ಸಂವಿಧಾನ ಹಾಗೂ ಅನೇಕ ಕಾನೂನುಗಳು ಅವರಿಗೆ ಕೊಡಮಾಡಿದ ಹಕ್ಕುಗಳನ್ನು ರಕ್ಷಿಸಿಕೊಳ್ಳಲು ಅವರು ಸಮರ್ಥರಾಗುತ್ತಾರೆ ಎಂದರು.

ಕಾನೂನಿನ ಜ್ಞಾನವನ್ನು ನಾಡಿನಾದ್ಯಂತ ಪ್ರಸಾರ ಮಾಡಲು ಸ್ವಾತಂತ್ರ್ಯ ವರ್ಷವನ್ನು ಅಮೃತ ಮಹೋತ್ಸವವನ್ನಾಗಿ ಆಚರಣೆ ಮಾಡಲಾಗುತ್ತಿದೆ. ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ತೆರಳಿ ಕಾನೂನಿನ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಇದ್ದ ಅನೇಕ ಸಮಸ್ಯೆಗಳನ್ನು ಖುದ್ದಾಗಿ ನ್ಯಾಯಾಧೀಶರ ತಂಡ ಬಗೆಹರಿಸಿ ರಾಜ್ಯದಾದ್ಯಂತ ಸಂಚಲನ ಸೃಷ್ಟಿಸಿದೆ ಎಂದು ಹೇಳಿದರು.

ಕಾನೂನಿನ ಜ್ಞಾನವಿಲ್ಲದ ವಿದ್ಯಾವಂತರು ಅನೇಕ ಬಾರಿ ಶೋಷಣೆಗೊಳಗಾಗುವುದನ್ನು ನಾವು ಕಾಣುತ್ತೇವೆ. ಇಂತಹ ಶೋಷಣೆಗಳು ನಿಲ್ಲಬೇಕಾದರೆ ಜನಸಾಮಾನ್ಯರು ಕಾನೂನಿನ ಜ್ಞಾನ ಹೊಂದುವುದು ಅಪೇಕ್ಷಣೀಯ. ಇನ್ನೂ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಜೀವಂತವಿರುವಂತಹ ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ಅರಿವು ಹೊಂದಬೇಕಿದೆ ಎಂದು ತಿಳಿಸಿದರು.

ಡಿವೈಎಸ್‌ಪಿ ಸಿದ್ಧಾರ್ಥ ಗೋಯಲ್ ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದ ಮೂಲಕ ಸ್ಥಳೀಯ ಜನರಲ್ಲಿ ಕಾನೂನಿನ ಜ್ಞಾನ ತಿಳಿಸುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಇದರಿಂದಾಗಿ ಕೆಲವು ಪ್ರಕರಣಗಳು ಜರುಗದಂತೆ ತಡೆಗಟ್ಟಲು ಸಹಕಾರಿಯಾಗಲಿದೆ. ಜನರಲ್ಲಿಯೂ ಕಾನೂನಿನ ಕಾರ್ಯವೈಖರಿ ಬಗ್ಗೆ ತಿಳಿದುಕೊಂಡು ಎಚ್ಚೆತ್ತುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ನಗರಸಭೆ ಪೌರಾಯುಕ್ತ ಉಮಾಕಾಂತ್ ಮಾತನಾಡಿ, ಪ್ರತಿಯೊಬ್ಬರಿಗೂ ಕಾನೂನು ಅಗತ್ಯವಾಗಿದೆ. ಅವರವರ ಮಟ್ಟಿಗೆ ಜನರು ಸಾರ್ವಜನಿಕವಾಗಿ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಪಾಲನೆ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಕಾನೂನು ಸೇವಾ ಪ್ರಾಧಿಕಾರ ಮಹತ್ತರ ಕಾರ್ಯವನ್ನು ನಿರ್ವಹಣೆ ಮಾಡಿದೆ ಎಂದು
ಹೇಳಿದರು.

ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ನೂರುನ್ನಿಸ್ಸಾ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ದಾಸರಿ ಕ್ರಾಂತಿ ಕಿರಣ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಎಸ್. ಚಂದನ್, ತಹಶೀಲ್ದಾರ್ ಆರ್.ಜಿ. ಚಂದ್ರಶೇಖರ್, ವಕೀಲರ ಸಂಘದ ಅಧ್ಯಕ್ಷ ಕೆ.ಆರ್. ದಯಾನಂದ್, ಶಿಶು ಯೋಜನಾಭಿವೃದ್ಧಿ ಅಧಿಕಾರಿ ಪಿ. ಓಂಕಾರಪ್ಪ, ಜಿಲ್ಲಾ ಕಾರಾಗೃಹದ ಅಧೀಕ್ಷಕ ಗುರುರಾಜ್ ಎನ್. ಹುಯಿಲ್ ಗೋಳ್, ನಗರ ಠಾಣೆಯ ಇನ್‌ಸ್ಪೆಕ್ಟರ್ ಶ್ರೀಶೈಲಮೂರ್ತಿ, ಗ್ರಾಮಾಂತರ ಠಾಣೆಯ ವೃತ್ತ ನಿರೀಕ್ಷಕಿ ಜಯಲಕ್ಷ್ಮಮ್ಮ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜೆ. ಪ್ರಭುಸ್ವಾಮಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT