ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಭಾರಿಗಳಂತೆ ಕೆಲಸ ಮಾಡಲು ಸಲಹೆ

Last Updated 13 ಏಪ್ರಿಲ್ 2021, 5:08 IST
ಅಕ್ಷರ ಗಾತ್ರ

ತುಮಕೂರು: ಕೇಂದ್ರ ಮತ್ತು ರಾಜ್ಯ ಸರ್ಕಾರದ ನಡುವೆ ರಾಯಭಾರಿಗಳಂತೆ ಕೆಲಸ ಮಾಡಬೇಕು ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಶಿವಪ್ರಸಾದ್ ಸಲಹೆ ನೀಡಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿ, ‘ಕೇಂದ್ರ, ರಾಜ್ಯ ಸರ್ಕಾರದ ಜನಪರ, ರೈತಪರ ಯೋಜನೆಗಳನ್ನು ರೈತ ಮೋರ್ಚಾ ಕಾರ್ಯಕರ್ತರು ಪ್ರತಿ ಮನೆಗೂ ತಲುಪುವಂತೆ ಮಾಡಬೇಕು’ ಎಂದರು.

ದೇಶದ ಒಟ್ಟು ಜನರಲ್ಲಿ ಶೇ 40ರಷ್ಟು ರೈತರಿದ್ದಾರೆ. ಕಾಂಗ್ರೆಸ್ ಆಡಳಿತದಲ್ಲಿ ಶೇ 11ರಷ್ಟಿದ್ದ ಜಿಡಿಪಿಯು ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ 18ಕ್ಕೆ ಏರಿಕೆಯಾಗಿದೆ. ಮನಮೋಹನ್‍ ಸಿಂಗ್ ಪ್ರಧಾನಿಯಾಗಿದ್ದ ಸಮಯದಲ್ಲಿ ಸ್ವಾಮಿನಾಥನ್ ವರದಿಗೆ ಅನುಮೋದನೆ ನೀಡಿದ್ದರೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದನ್ನು ಕಾರ್ಯರೂಪಕ್ಕೆ ತರಲು ಪ್ರಧಾನಿ ನರೇಂದ್ರ ಮೋದಿ ಅವರೇ ಬರಬೇಕಾಯಿತು. ರೈತರ ಆದಾಯವನ್ನು ದ್ವಿಗುಣಗೊಳಿಸುವ ನಿಲುವುಗಳನ್ನು ಬಿಜೆಪಿ ಸರ್ಕಾರ ಹೊಂದಿದೆ. ಹಾಗಾಗಿ ಕೃಷಿ ಮಸೂದೆಗಳ ಬಗ್ಗೆ ತಿಳಿಸಿಕೊಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಸರ್ಕಾರದ ಸುದೀರ್ಘ ಅವಧಿಯಲ್ಲಿ ಕೇವಲ ಒಮ್ಮೆ ಮಾತ್ರ ದೇಶದ ರೈತರ ₹70 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದು ಬಿಟ್ಟರೆ ರೈತರ ಆದಾಯ ದ್ವಿಗುಣಕ್ಕೆ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತಂದಿಲ್ಲ. ಇದರಿಂದ ರೈತರು ಕೃಷಿ ಕ್ಷೇತ್ರದಿಂದ ವಿಮುಖರಾಗತೊಡಗಿದ್ದರು ಎಂದು ಆರೋಪಿಸಿದರು.

ಕೃಷಿ ಸಮ್ಮಾನ್, ಕೃಷಿ ಸಿಂಚಾಯಿ, ಫಸಲ್ ಭಿಮಾ, ಮಣ್ಣು ಆರೋಗ್ಯ ಕಾರ್ಡ್ ಯೋಜನೆ, ಗುಣಮಟ್ಟದ ಬೀಜಗಳ ಉತ್ಪಾದನೆ, ರಸಗೊಬ್ಬರ, ನೀರಾವರಿ, ಮಾರುಕಟ್ಟೆ ವ್ಯವಸ್ಥೆ, ಬೆಂಬಲ ಬೆಲೆಗಳನ್ನು ರೈತರಿಗೆ ಸಕಾಲದಲ್ಲಿ ನೀಡುವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಮಾಡಿದೆ ಎಂದು ವಿವರಿಸಿದರು.

ಕೇಂದ್ರ ಜಲಶಕ್ತಿ ಸಚಿವಾಲಯವು ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಿದೆ. ಈ ಯೋಜನೆಯ ಅಂದಾಜು ವೆಚ್ಚ ₹21,473 ಕೋಟಿ. ರಾಜ್ಯದ ಮೊಟ್ಟಮೊದಲ ರಾಷ್ಟ್ರೀಯ ನೀರಾವರಿ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ನಂದೀಶ್, ರೈತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಎಸ್. ಶಿವಶಂಕರ್, ಮುಖಂಡರಾದ ಲಕ್ಷ್ಮಿಶ್, ಸ್ನೇಕ್ ನಂದೀಶ್, ಶ್ರೀಧರ್, ಕೆ.ಎಸ್. ಮಹೇಶ್, ಎಂ.ಎಸ್. ರಮೇಶ್, ಕೆ.ಸಿ. ಹರೀಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT