ಮಂಗಳವಾರ, ಸೆಪ್ಟೆಂಬರ್ 22, 2020
20 °C
ಇತರರರಿಗೆ ಮಾದರಿಯಾದ ದೊಡ್ಡಮಾಲೂರು ಗ್ರಾಮದ ಕೆ.ಅಂಜಿನಪ್ಪ

ದೊಡ್ಡಮಾಲೂರು ಗ್ರಾಮದಲ್ಲಿದೆ ಕೋಟಿ ಲೀಟರ್ ಸಾಮಾರ್ಥ್ಯದ ಕೃಷಿಹೊಂಡ

ಗಂಗಾಧರ್ ವಿ. ರೆಡ್ಡಿಹಳ್ಳಿ Updated:

ಅಕ್ಷರ ಗಾತ್ರ : | |

Prajavani

ಕೊಡಿಗೇನಹಳ್ಳಿ (ಮಧುಗಿರಿ ತಾ): ಮಳೆಗಾಲದಲ್ಲಿ ಮಳೆ ನೀರು ಪೋಲಾಗದೆ, ಎಲ್ಲ ಕಾಲಕ್ಕೂ ಅನುಕೂಲವಾಗಲೆಂದು ಕೋಟಿ ಲೀಟರ್‌ ಸಾಮರ್ಥ್ಯದ ಕೃಷಿ ಹೊಂಡ ನಿರ್ಮಿಸಿ ರೈತರ ಗಮನ ಸೆಳೆಯುತ್ತಿದ್ದಾರೆ ರೈತ ಕೆ.ಅಂಜಿನಪ್ಪ.

ಮಧುಗಿರಿ ತಾಲ್ಲೂಕು ಕೊಡಿಗೇನಹಳ್ಳಿ ಹೋಬಳಿಯ ದೊಡ್ಡಮಾಲೂರು ಗ್ರಾಮದ ಹೊರವಲಯದ ಕುರೂಡಿ ರಸ್ತೆಯಲ್ಲಿ ವಾಸವಾಗಿರುವ ಕೆ.ಅಂಜಿನಪ್ಪ ಮೂಲತಃ ಬೆಂಗಳೂರು ಸಮೀಪದ ದೇವನಹಳ್ಳಿಯವರು. ಅಲ್ಲಿದ್ದ ಜಮೀನನ್ನು ವಿಮಾನ ನಿಲ್ದಾಣ ನಿರ್ಮಿಸುವ ಸಂದರ್ಭದಲ್ಲಿ ಕಳೆದುಕೊಂಡಾಗ ವಿಧಿಯಿಲ್ಲದೆ ಈ ಭಾಗಕ್ಕೆ ಬಂದು ನೆಲೆಸಿದ್ದಾರೆ.

ದೇವನಹಳ್ಳಿಯಲ್ಲಿ ಉದ್ಯಮಿಯಾಗಿದ್ದ ಅಂಜಿನಪ್ಪ 2002ರಲ್ಲಿ ಇಲ್ಲಿಗೆ ಬಂದರು. ದೊಡ್ಡಮಾಲೂರಿನಲ್ಲಿ ಸುಮಾರು 40 ಎಕರೆ ಜಮೀನನ್ನು ಖರೀದಿ ಮಾಡಿದರು. ಆ ಭೂಮಿ ದಿಣ್ಣೆ ಮತ್ತು ಹೆಚ್ಚು ಕಲ್ಲುಗಳಿಂದ ಕೂಡಿದ್ದರಿಂದ ಹೊಂದಿಕೆಯಾಗದ ಬೆಳೆಗಳನ್ನು ಬೆಳೆದು ಕೈಸುಟ್ಟುಕೊಳ್ಳುವ ಬದಲು ಮಾವು ಬೆಳೆಯಲು ನಿರ್ಧರಿಸಿದರು.

ಅಂಜಿನಪ್ಪ ಅವರಿಗೆ ನಿರಂತರ ಹೊಸತನದ ತುಡಿತ ಹಾಗೂ ಹೆಚ್ಚು ಲಾಭಗಳಿಸಬೇಕೆಂಬ ಉದ್ದೇಶವಿದ್ದುದ್ದರಿಂದ ಮೊದಲಿಗೆ ವಿವಿಧ ಮಾವಿನ ತಳಿಗಳಾದ ಬದಾಮಿ, ಮಲ್ಲಿಕಾ, ದಶೇರಿ, ಕೇಸರ್, ರತ್ನ, ರಸಪೂರಿ, ಬೆನಿಶ್ ಸಸಿಗಳನ್ನು ನಾಟಿ ಮಾಡಿಸಿದ್ದರು. ಕೆಲ ವರ್ಷಗಳ ನಂತರ ಫಲಕ್ಕೆ ಬಂದ ಬೆಳೆಗೆ ಬೇಡಿಕೆ ಹೆಚ್ಚಿತು. ಹಣ ಕೈಸೇರ ತೊಡಗಿತು.

ಆದರೆ, ಈ ಭಾಗದಲ್ಲಿನ ಮಳೆ ಕೊರತೆ ಇನ್ನಿಲ್ಲದಂತೆ ಕಾಡಿತು. ಇರುವ 4 ಕೊಳವೆ ಬಾವಿಗಳಲ್ಲಿ ಎರಡು ಕೊಳವೆ ಬಾವಿಗಳಲ್ಲಿನ ನೀರು ಬೇಸಿಗೆ ಕಾಲದಲ್ಲಿ ಒಮ್ಮೆಲೆ ನಿಂತಿತು. ಮತ್ತೆ ಕೊಳವೆ ಬಾವಿಗಳನ್ನು ಕೊರೆಯಿಸಿದರೂ ನೀರು ಸಿಗಲಿಲ್ಲ. ಇದಕ್ಕೆ ಪರ್ಯಾಯವಾಗಿ ಯೋಚಿಸಿದ ಅಂಜಿನಪ್ಪ ತಮ್ಮ ಜಮೀನಿನಲ್ಲೇ ಒಂದು ಎಕರೆ ಪ್ರದೇಶದಲ್ಲಿ ಕೃಷಿಹೊಂಡ ನಿರ್ಮಿಸಿಕೊಳ್ಳಲು ನಿರ್ಧರಿಸಿದರು. ಸರ್ಕಾರದ ಸಹಾಯಧನದಲ್ಲಿ ಕೃಷಿ ಹೋಡ ನಿರ್ಮಿಸಿದರು.

ಈ ಕೃಷಿಹೊಂಡ ಸುಮಾರು 1 ಕೋಟಿ ಲೀಟರ್ ನೀರಿನ ಸಾಮಾರ್ಥ್ಯ ಹೊಂದಿದ್ದು, 52 ಮೀಟರ್ ಉದ್ದ, 52 ಮೀಟರ್ ಅಗಲ ಹಾಗೂ 3 ಮೀಟರ್‌ನಷ್ಟು ಆಳ ಹೊಂದಿದೆ. ಕೃಷಿ ಹೊಂಡದ ತಳದಲ್ಲಿ ನೀರು ಇಂಗದಂತೆ ಟಾರ್ಪಲ್ ಅಳವಡಿಸಲಾಗಿದೆ.

ಹಾಗೆಯೇ ನೀರು ಹರಿಯುವ ಜಾಗದಲ್ಲಿ ಗಿಡಗಳ ಮಧ್ಯೆ ನೀರು ತುಂಬಿಕೊಂಡು ಮುಂದಕ್ಕೆ ಹರಿಯುವ ವ್ಯವಸ್ಥೆ ಮಾಡಲಾಗಿದೆ.

‘ಒಟ್ಟಾರೆ ಕೃಷಿ ಹೊಂಡದ ಖರ್ಚು ₹ 11 ಲಕ್ಷದಿಂದ ₹ 12 ಲಕ್ಷವಾಗುತ್ತದೆ. ಕಾಮಗಾರಿ ಮುಗಿದ ನಂತರ ಇದಕ್ಕೆ ತೋಟಗಾರಿಕೆ ಇಲಾಖೆಯಿಂದಲೂ ಸುಮಾರು ₹ 5 ಲಕ್ಷದಷ್ಟು ಸಹಾಯಧನ ಬರುತ್ತದೆ. ನಾನು ಮಳೆಗಾಲದ ಮುಂಚೆಯೇ ಈ ಕಾಮಗಾರಿ ಪೂರ್ಣಗೊಳಿಸಿದ್ದರೆ ಈ ವರ್ಷ ಕೃಷಿ ಹೊಂಡ ತುಂಬಿ ತುಳುಕುತ್ತಿತ್ತು. ರೈತರು ನೀರಿಲ್ಲವೆಂದು ಎದೆಗುಂದದೆ ಇಂತಹ ಯೋಜನೆಗಳನ್ನು ಬಳಸಿಕೊಳ್ಳುವುದರ ಜತೆಗೆ ಹನಿ ನೀರಾವರಿ ಪದ್ಧತಿಯನ್ನು ರೂಢಿಸಿಕೊಂಡು ಬದುಕ ಕಟ್ಟಿಕೊಳ್ಳಬೇಕು’ ಎನ್ನುವರು ಅಂಜಿನಪ್ಪ.

ಸಂಪರ್ಕ ಸಂಖ್ಯೆ: 8453062399

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು