ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಗುರಿ’

Last Updated 30 ಸೆಪ್ಟೆಂಬರ್ 2020, 1:50 IST
ಅಕ್ಷರ ಗಾತ್ರ

ತುಮಕೂರು: ಚಾರಿತ್ರ್ಯ ನಿರ್ಮಾಣ ಶಿಕ್ಷಣದ ಗುರಿಯಾಗಬೇಕು. ಅದಕ್ಕೆ ಎನ್‌ಸಿಸಿ, ಎನ್‌ಎಸ್‌ಎಸ್‌ನಂತಹ ಕಾರ್ಯಕ್ರಮಗಳು ಪೂರಕವಾಗಿವೆ ಎಂದು ತುಮಕೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ ಇಲ್ಲಿ ಮಂಗಳವಾರ ಅಭಿಪ್ರಾಯಪಟ್ಟರು.

ಎನ್‌ಸಿಸಿ ಕರ್ನಾಟಕ– ಗೋವಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್‌ಕಮಾಂಡರ್ ಎಲ್.ಕೆ.ಜೈನ್ ಅವರಿಂದ ‘ಗೌರವ ಕರ್ನಲ್’ ಪದವಿ ಸ್ವೀಕರಿಸಿ ಮಾತನಾಡಿದರು.

ಪ್ರಸ್ತುತ ಯುವಜನಾಂಗಕ್ಕೆ ಬುದ್ಧಿಮತ್ತೆ ಇದ್ದರೆ ಸಾಲದು. ಭಾವನಾತ್ಮಕತೆ ಕೂಡ ಅತ್ಯವಶ್ಯಕ. ಪಠ್ಯಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಅದನ್ನು ಬೆಳೆಸಿಕೊಳ್ಳಬಹುದು ಎಂದು ಸಲಹೆ ಮಾಡಿದರು.

‘ವಿದ್ಯಾರ್ಥಿಯಾಗಿದ್ದಾಗ ಪೊಲೀಸ್ ಅಧಿಕಾರಿಯಾಗಬೇಕೆಂಬ ಆಸೆ ಇತ್ತು. ಅದಕ್ಕಾಗಿ ಪದವಿಯಲ್ಲಿ ಅಪರಾಧಶಾಸ್ತ್ರವನ್ನೂ ಓದಿದೆ. ಆದರೆ ಶಿಕ್ಷಣ ಕ್ಷೇತ್ರ ಪ್ರವೇಶಿಸಬೇಕಾಯಿತು. ಈಗ ಕರ್ನಲ್ ಗೌರವ ಪದವಿ ಪಡೆಯುವ ಮೂಲಕ ಖಾಕಿ ಧರಿಸುವ ಕನಸು ನನಸಾಗಿದೆ’ ಎಂದು ಸ್ಮರಿಸಿದರು.

ಪದವಿ ಪ್ರದಾನ ಮಾಡಿದ ಎನ್‌ಸಿಸಿ ಕರ್ನಾಟಕ– ಗೋವಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್ ಕಮಾಂಡರ್ ಎಲ್.ಕೆ.ಜೈನ್, ‘ದೇಶಕ್ಕೆ ಹೊಸ ಚಿಂತನೆ, ಆವಿಷ್ಕಾರಗಳ ಅಗತ್ಯವಿದೆ. ಗುಮಾಸ್ತರನ್ನು ಸೃಷ್ಟಿಸುವ ಬ್ರಿಟಿಷ್ ಪ್ರಣೀತ ಶಿಕ್ಷಣ ಬೇಕಾಗಿಲ್ಲ. ಜಗತ್ತಿಗೆ ಹೊಸ ಜ್ಞಾನವನ್ನು ನೀಡುವವರು ಬೇಕು. ಈ ನಿಟ್ಟಿನಲ್ಲಿ ಅಧ್ಯಾಪಕರು, ವಿದ್ಯಾರ್ಥಿಗಳು ಯೋಚಿಸಬೇಕು’ ಎಂದು ಹೇಳಿದರು.

ಪ್ರಾಮಾಣಿಕತೆ, ಪರಿಶ್ರಮ, ಶಿಸ್ತು, ಸಹಾನುಭೂತಿಯ ಗುಣಗಳನ್ನು ಪಾಠಮಾಡಿ ವಿದ್ಯಾರ್ಥಿಗಳಲ್ಲಿ ತುಂಬಲಾಗದು. ಇನ್ನೊಬ್ಬರ ವರ್ತನೆಯನ್ನು ನೋಡಿ ರೂಢಿಸಿಕೊಳ್ಳಬೇಕು. ಎನ್‌ಸಿಸಿಯಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಇದಕ್ಕೆ ಪೂರಕ ಎಂದರು.

ವಿ.ವಿ ಕುಲಸಚಿವ ಪ್ರೊ.ಕೆ.ಎನ್.ಗಂಗಾನಾಯಕ್, ಕರ್ನಾಟಕ– ಗೋವಾ ಎನ್‌ಸಿಸಿ ನಿರ್ದೇಶನಾಲಯದ ಕರ್ನಲ್ ಜೈ ಗೋವಿಂದ್, ಬೆಂಗಳೂರು–ಎ ವಿಭಾಗದ ಆಫೀಶಿಯೇಟಿಂಗ್ ಗ್ರೂಪ್ ಕಮಾಂಡರ್ ಕರ್ನಲ್ ಪಂಕಜ್ ಶರ್ಮಾ, ತುಮಕೂರು ವಿಭಾಗದ ಕಮಾಂಡಿಂಗ್ ಆಫೀಸರ್ ಕರ್ನಲ್ ಶೈಲೇಶ್ ಶರ್ಮಾ, ಎನ್‌ಸಿಸಿ ಅಧಿಕಾರಿಗಳಾದ ಡಾ.ಡಿ.ಬಿ.ಅರುಣ್ ಕುಮಾರ್, ಮೋಹನ್ ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT