ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಲೆಮಾರಿ ‘ಬ್ಯಾಂಕ್‌’ಗೆ ಚಿಂತನೆ

ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಂಗೇಗೌಡ ಹಾಗೂ ಸ್ನೇಹಿತರಿಂದ ನೆರವು
Last Updated 12 ಆಗಸ್ಟ್ 2020, 16:26 IST
ಅಕ್ಷರ ಗಾತ್ರ

ತುಮಕೂರು: ಲಾಕ್‌ಡೌನ್ ಅವಧಿ ಹಾಗೂ ಲಾಕ್‌ಡೌನ್ ನಂತರವೂ ಜಿಲ್ಲೆಯಲ್ಲಿ ಅಲೆಮಾರಿ ಸಮುದಾಯಗಳ ಪರಿಸ್ಥಿತಿ ಶೋಚನೀಯವಾಗಿದೆ. ರಾಜ್ಯದಲ್ಲಿಯೇ ಹೆಚ್ಚು ಅಲೆಮಾರಿ ಸಮುದಾಯಗಳು ಇರುವ ಜಿಲ್ಲೆಗಳಲ್ಲಿ ತುಮಕೂರು ಪ್ರಮುಖವಾದುದು. ಇಂತಹ ಸಂದರ್ಭದಲ್ಲಿ ಮಾದರಿ ಎನ್ನುವಂತೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ರಂಗೇಗೌಡ ಅವರ ನೇತೃತ್ವದಲ್ಲಿ ಸಮಾನ ಮನಸ್ಕ ಸ್ನೇಹಿತರು ತಂಡ ಕಟ್ಟಿಕೊಂಡು ವೈಯಕ್ತಿಕವಾಗಿ ಈ ಸಮುದಾಯಗಳಿಗೆ ನೆರವಾಗುತ್ತಿದ್ದಾರೆ.

ಅಲೆಮಾರಿಗಳಗೆ ಅಗತ್ಯ ವಸ್ತುಗಳನ್ನು ಸಂಗ್ರಹಿಸಲು ಬ್ಯಾಂಕ್ ಮಾದರಿಯ ಘಟಕ ಸ್ಥಾಪಿಸುವ ಉದ್ದೇಶವನ್ನೂ ಈ ತಂಡ ಹೊಂದಿದೆ.

ಕೆಲ ಅಲೆಮಾರಿ ಸಮುದಾಯಗಳು ಊರೂರು ಸುತ್ತಿ ವ್ಯಾಪಾರಮಾಡಿ ಜೀವನ ಸಾಗಿಸುತ್ತವೆ. ಆದರೆ ಕೊರೊನಾ ಕಾರಣದಿಂದ ಜನರು ಇವರನ್ನು ಗ್ರಾಮಕ್ಕೆ ಸೇರಿಸುತ್ತಿಲ್ಲ. ಇದರಿಂದ ಸಹಜವಾಗಿ ಈ ಸಮುದಾಯಗಳ ಆರ್ಥಿಕ ಬದುಕಿನ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಸರ್ಕಾರಗಳು ಬೇರೆ ಬೇರೆ ಕುಲ ಕಸುಬು ಮಾಡುವ ಸಮುದಾಯಗಳಿಗೆ ₹ 5 ಸಾವಿರ ನೆರವು ಘೋಷಿಸಿದೆ. ಆದರೆ ತೀರಾ ಹಿಂದುಳಿದ ಅಲೆಮಾರಿ ಸಮುದಾಯಗಳಿಗೆ ಮಾತ್ರ ಯಾವುದೇ ಪ್ಯಾಕೇಜ್ ಘೋಷಿಸಿಲ್ಲ.

ಈ ಸಮುದಾಯಗಳ ಮುಖಂಡರು ಸಮಸ್ಯೆಗಳನ್ನು ಜಿಲ್ಲಾ ಅಲೆಮಾರಿ ಅಭಿವೃದ್ಧಿ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆದ ರಂಗೇಗೌಡ ಅವರ ಗಮನಕ್ಕೆ ತಂದರು. ಸಮಸ್ಯೆಗೆ ಸ್ಪಂದಿಸುವಂತೆ ಒತ್ತಾಯಿಸಿ ಕೆಲವು ವಿಡಿಯೊಮಾಡಿ ಕಳಿಹಿಸಿದ್ದರು. ರಂಗೇಗೌಡರು ಸೌಲಭ್ಯಕ್ಕೆ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದರು. ಮತ್ತೊಂದು ಕಡೆ ಅಲೆಮಾರಿಗಳು ವಾಸಿಸುತ್ತಿರುವ ಸ್ಥಳಗಳಿಗೆ ಖುದ್ದು ಭೇಟಿ ನೀಡಿದರು.

ಸಮಸ್ಯೆಗಳನ್ನು ಮನಗಂಡು ಸ್ನೇಹಿತರ ಜತೆ ಚರ್ಚಿಸಿದರು. ಊಟ, ಬಟ್ಟೆ, ಔಷಧಗಳಿಗೆ ಸಹಾಯ ಮಾಡಲು ಈ ಸ್ನೇಹಿತರು ನಿರ್ಧರಿಸಿದರು. ಅದರಂತೆ ಸದ್ಯ 150ಕ್ಕೂ ಹೆಚ್ಚು ಕುಟುಂಬಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಮನೆಕಟ್ಟಿಕೊಳ್ಳಲು ಬೇಕಾದ ವಸ್ತುಗಳನ್ನು ವಿತರಿಸಲು ನಿರ್ಧರಿಸಿದ್ದಾರೆ.

ರಂಗೇಗೌಡರು ₹ 40 ಸಾವಿರ ನೀಡಿದರು. ಹೀಗೆ ಸಮಾನ ಮನಸ್ಕರಿಂದ ₹ 1.50 ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಿದೆ. ತುಮಕೂರಿನ ಅಮಲಾಪುರ, ಗುಬ್ಬಿ ಬಳಿಯ ಹಕ್ಕಿಪಿಕ್ಕಿ, ಹೆಳವ ಜನರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ್ದಾರೆ.

ಚಿಕ್ಕನಾಯಕನಹಳ್ಳಿ, ತಿಪಟೂರು ಮುಂತಾದ ಕಡೆ ನೆಲೆಸಿರುವ ಅಲೆಮಾರಿಗಳಿಗೆ ಅವಶ್ಯ ವಸ್ತುಗಳನ್ನು ವಿತರಿಸಲು ಈ ತಂಡ ನಿರ್ಧರಿಸಿದೆ. ದಾನಿಗಳಿಂದ ಸಂಗ್ರಹವಾಗುವ ಹಣವನ್ನು ಒಂದು ಕಡೆ ಇಟ್ಟು ಮುಂದೆ ತುರ್ತು ಇದ್ದಾಗ ಉಪಯೋಗಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

***

ಸಂಪರ್ಕಕ್ಕೆ ದಾನಿಗಳಿಗೆ ಮನವಿ

ಈ ಜನರಿಗೆ ಸಹಾಯ ಆಗುವಂತೆ ದಾನಿಗಳು ಹಾಗೂ ಸ್ನೇಹಿತರ ಸಹಾಯದಿಂದ ಮುಂದಿನ ದಿನಗಳಲ್ಲಿ ಒಂದು ಅವಶ್ಯ ವಸ್ತುಗಳ ಸಂಗ್ರಹಕ್ಕೆ ಬ್ಯಾಂಕ್ (Essential commodity Bank) ಸ್ಥಾಪಿಸಲು ಚಿಂತನೆ ನಡೆಸಿದ್ದೇವೆ ಎಂದು ರಂಗೇಗೌಡ ಅವರು ತಿಳಿಸಿದರು. ದಾನಿಗಳು ಮೊ 9964331318 ಸಂಪರ್ಕಿಸುವಂತೆ ಕೋರಿದರು.

ಈ ಸಮುದಾಯಗಳಿಗೆ ಹೆಚ್ಚು ಅನುದಾನ ಕೊಡಿಸುವಂತೆ ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮೂಲಕ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಿರ್ಧರಿಸಲಾಗಿದೆ. ಈಗಾಗಲೇ ಈ ಸಮುದಾಯಗಳಿಗೆ ನಿವೇಶನ ನೀಡಲು 6 ತಾಲ್ಲೂಕುಗಳಲ್ಲಿ ಜಮೀನು ಗುರುತಿಸಿ ನಿವೇಶನ ವಿಂಗಡಣೆಯ ಕೆಲಸಕ್ಕೆ ಉಸ್ತುವಾರಿ ಸಚಿವರು ಹಾಗೂ ಆಯಾ ಶಾಸಕರ ಅಧ್ಯಕ್ಷತೆಯಲ್ಲಿ ಚಾಲನೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT