ಗುರುವಾರ , ಸೆಪ್ಟೆಂಬರ್ 23, 2021
21 °C
ವೈದ್ಯರ ತಪ್ಪಿಲ್ಲ: ವೈದ್ಯಾಧಿಕಾರಿ ಸ್ಪಷ್ಟನೆ

ವೈದ್ಯರ ನಿರ್ಲಕ್ಷ್ಯ ಆರೋಪ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಬ್ಬಿ: ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಹೆರಿಗೆ ಸಮಯದಲ್ಲಿ ನವಜಾತ ಶಿಶು ಮೃತಪಟ್ಟಿದೆ ಎಂದು ಆರೋಪಿಸಿದ ಸಂಬಂಧಿಕರು ಆಸ್ಪತ್ರೆ ಮುಂಭಾಗ ಮಂಗಳವಾರ ಪ್ರತಿಭಟಿಸಿದರು.

ತಾಲ್ಲೂಕಿನ ಕೋಣನಕೆರೆಯ ಮಂಜಮ್ಮ ಅವರನ್ನು ಸೋಮವಾರ ತಡರಾತ್ರಿ ಹೆರಿಗೆಗಾಗಿ ತಾಲ್ಲೂಕು ಆಸ್ಪತ್ರೆಗೆ ಕರೆ ತಂದಾಗ ನರ್ಸ್‌ ಹೊರತುಪಡಿಸಿದರೆ ಆಸ್ಪತ್ರೆಯಲ್ಲಿ ಯಾವ ವೈದ್ಯರೂ ಇರಲಿಲ್ಲ ಎಂದು ಪೋಷಕರು ಆರೋಪಿಸಿದರು.

ಮಂಗಳವಾರ ಬೆಳಿಗ್ಗೆ ಹೆರಿಗೆ ತಜ್ಞೆ ಆಸ್ಪತ್ರೆಗೆ ಬಂದು ಶಸ್ತ್ರಚಿಕಿತ್ಸಾ ಕೊಠಡಿಗೆ ಕರೆದುಕೊಂಡು ಹೋಗಿದ್ದಾರೆ. ಹೆರಿಗೆ ಸಂದರ್ಭದಲ್ಲಿ ಮಗು ಮೃತಪಟ್ಟಿದೆ. ಸರಿಯಾದ ವೇಳೆಗೆ ವೈದ್ಯರು ಚಿಕಿತ್ಸೆ ನೀಡಿದ್ದರೆ ಮಗು ಬದುಕುತ್ತಿತ್ತು ಎಂದು ಮಹಿಳೆಯ ಸಂಬಂಧಿಕರು ದೂರಿದರು.

‘ಈ ಬಗ್ಗೆ ಸಂಬಂಧಪಟ್ಟ ವೈದ್ಯರನ್ನು ಕರೆದು ವಿಚಾರಿಸಲಾಗಿದೆ. ಇದರಲ್ಲಿ ವೈದ್ಯರ ತಪ್ಪಿಲ್ಲ ಎನ್ನುವುದು ತಿಳಿದು ಬಂದಿದೆ. ಗರ್ಭಿಣಿಯ ಸಂಬಂಧಿಕರಿಗೆ ಇದನ್ನು ತಿಳಿಸಿದಾಗ ಅವರು ಒಪ್ಪಿಕೊಂಡು ಮಗುವಿನ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಕೆಟ್ಟ ಹೆಸರು ತರುವ ಉದ್ದೇಶದಿಂದ ಮುರನೇ ವ್ಯಕ್ತಿಗಳು ಇಂತಹ ಪ್ರತಿಭಟನೆಗೆ ಕುಮ್ಮಕ್ಕು ನೀಡಿರುವಂತೆ ಕಂಡುಬರುತ್ತಿದೆ’ ಎಂದು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ದಿವಾಕರ್ ಹೇಳಿದರು.

ಹೆರಿಗೆ ತಜ್ಞೆ ಡಾ.ರೇಖಾ ಪ್ರತಿಕ್ರಿಯಿಸಿ, ‘ಗರ್ಭಿಣಿ ಮಂಜಮ್ಮನಿಗೆ ಹೆರಿಗೆ ಕಷ್ಟಕರ ಆಗಬಹುದು ಎಂದು ಈ ಮೊದಲೇ ತಿಳಿಸಿದ್ದೆ. ಆದರೂ ಆಕೆಯ ಹಾಗೂ ಪೋಷಕರ ಒತ್ತಾಯದ ಮೇರೆಗೆ ಹೆರಿಗೆ ಮಾಡಿಸಲು ಸೂಕ್ತ ವ್ಯವಸ್ಥೆ ಮಾಡಿಕೊಂಡಿದ್ದೆ. ಆದರೆ ಹೊಟ್ಟೆಯಲ್ಲಿಯೇ ಗರ್ಭಪಾತವಾಗಿ ಮಗು ಸಾವನಪ್ಪಿದೆ. ಇದರಲ್ಲಿ ನಮ್ಮ ತಪ್ಪೇನೂ ಇಲ್ಲ. ಈ ಎಲ್ಲ ಮಾಹಿತಿಯನ್ನು ದಾಖಲಿಸಲಾಗಿದೆ. ಯಾವುದೇ ನಿರ್ಲಕ್ಷ್ಯ ತೋರಿಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು