ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾರ್ ಸಿಟಿಯಲ್ಲೂ ಕತ್ತಲು

ಬೆಳಗದ ಬೀದಿ ದೀಪಗಳು: ಸೂರ್ಯ ಮರೆಯಾದ ಕೂಡಲೇ ಕತ್ತಲಲ್ಲಿ ಮುಳುಗುವ ಪಟ್ಟಣ
Last Updated 26 ಏಪ್ರಿಲ್ 2021, 6:07 IST
ಅಕ್ಷರ ಗಾತ್ರ

ಪಾವಗಡ: ಸೋಲಾರ್ ಪಾರ್ಕ್‌ನಿಂದಾಗಿ ವಿಶ್ವದ ಗಮನ ಸೆಳೆದು, ದೇಶದ ಮೂಲೆ ಮೂಲೆಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ತಾಲ್ಲೂಕು ಕೇಂದ್ರ ಸೂರ್ಯ ಮರೆಯಾದ ಕೂಡಲೇ ಕತ್ತಲಲ್ಲಿ ಮುಳುಗುತ್ತದೆ.

ಸುಮಾರು 2 ಸಾವಿರ ಮೆಗಾ ವ್ಯಾಟ್ ಉತ್ಪಾದಿಸುವ ಸೋಲಾರ್ ಪಾರ್ಕ್ ಅನ್ನು ಒಡಲಲ್ಲಿ ಇಟ್ಟುಕೊಂಡಿರುವ ತಾಲ್ಲೂಕು ಕೇಂದ್ರ ರಾತ್ರಿಯಾದ ಕೂಡಲೇ ಕತ್ತಲ ಕೂಪದಂತೆ ಭಾಸವಾಗುತ್ತದೆ.

ಪುರಸಭೆಗೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಆದಾಯ ಇದೆ. ಆಯವ್ಯಯದಲ್ಲಿ ಪಟ್ಟಣದ ಅಭಿವೃದ್ಧಿಯ ಚಿತ್ರಣವನ್ನು ಕಟ್ಟಿಕೊಡುವ ಅಧಿಕಾರಿಗಳು, ಅನುಷ್ಠಾನದಲ್ಲಿ ವಿಫಲರಾಗುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ಪಟ್ಟಣದ ಪ್ರಮುಖ ಸ್ಥಳಗಳಾದ ಶನೈಶ್ಚರ ವೃತ್ತ, ಸರ್ಕಾರಿ ಆಸ್ಪತ್ರೆ ಮುಂಭಾಗ, ಗುರು ಭವನದ ಬಳಿ, ನ್ಯಾಯಾಲಯ, ಬಸ್ ನಿಲ್ದಾಣ, ಎಸ್‌ಎಸ್‌ಕೆ ಸಮುದಾಯ ಭವನದ ವೃತ್ತ, ನಾಗರಕಟ್ಟೆ ಇತ್ಯಾದಿ ಪ್ರದೇಶಗಳಲ್ಲಿ ಬೀದಿ ದೀಪಗಳಿಲ್ಲ.

ಪಟ್ಟಣದ ಪ್ರಮುಖ ರಸ್ತೆಗಳು ಸದಾ ಕತ್ತಲಿನಿಂದ ಆವರಿಸಿರುತ್ತವೆ. ವಾಹನ ದಟ್ಟಣೆ ಇರುವ ರಸ್ತೆ ಬದಿಯಲ್ಲಿ ಬೀದಿ ದೀಪಗಳಿಲ್ಲದ ಕಾರಣ ವಾಹನ ಸವಾರರಿಗೆ ರಸ್ತೆ ಸರಿಯಾಗಿ ಕಾಣುವುದಿಲ್ಲ. ಇದರಿಂದ ಅಪಘಾತಗಳು ಹೆಚ್ಚುತ್ತಿವೆ. ಸಾಕಷ್ಟು ಮಂದಿ ಅಪಘಾತದಿಂದ ಜೀವ ಕಳೆದುಕೊಂಡಿದ್ದಾರೆ.

ರಾತ್ರಿಯ ವೇಳೆ ಮಹಿಳೆಯರು ಸಂಚರಿಸಲು ಯೋಚಿಸಬೇಕು. ಸರಗಳ್ಳತನ, ವಾಹನ ಕಳವು, ಕಳ್ಳತನ ಹೆಚ್ಚಲು ಪರಸಭೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ದೂರುಗಳು ಕೇಳಿ ಬರುತ್ತಿವೆ.

ಬಹುತೇಕ ಬಡಾವಣೆಗಳಲ್ಲಿ ಬೀದಿ ದೀಪಗಳು ಬೆಳಗುವುದಿಲ್ಲ. ರಾತ್ರಿ ಮೆನಯಿಂದ ಹೊರ ಬರಲು ಮಹಿಳೆಯರು, ವೃದ್ಧರು ಭಯಪಡುವಂತಿದೆ. ಬಡಾವಣೆ ಸದಸ್ಯರಿಗೆ ಸಮಸ್ಯೆ ಬಗ್ಗೆ ಹೇಳಿ, ಹೇಳಿ ಜನತೆ ಬೇಸತ್ತಿದ್ದಾರೆ. ಮತ ಪಡೆದು ಬಡಾವಣೆ ಜನತೆ ಸಮಸ್ಯೆ ಬಗೆಹರಿಲಾಗುತ್ತಿಲ್ಲವಲ್ಲಾ ಎಂಬ ಬೇಸರದಿಂದ ಈಚೆಗೆ ಪುರಸಭೆ ಸದಸ್ಯರೊಬ್ಬರು ಬೀದಿ ದೀಪ ಅಳವಡಿಸುವ ವಾಹನದ ಗಾಜು ಜಖಂ ಗೊಳಿಸಿದ್ದಾರೆ. ನೌಕರರ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೀದಿ ದೀಪ ನಿರ್ವಹಣೆ ಹೊಣೆ ಹೊತ್ತ ಗುತ್ತಿಗೆದಾರ ಕಡಿಮೆ ಮೊತ್ತಕ್ಕೆ ಟೆಂಡರ್ ಕೂಗಿ ನೌರರಿಗೆ ಸರಿಯಾಗಿ ವೇತನ ನೀಡುತ್ತಿಲ್ಲ. ಸುಮಾರು 3 ವರ್ಷದಿಂದ ಒಬ್ಬ ಗುತ್ತಿಗೆದಾರ ನಿರ್ವಹಣೆ ಜವಬ್ದಾರಿ ತೆಗೆದುಕೊಂಡಿದ್ದಾನೆ. ಹೀಗಾಗಿ ಅಧಿಕಾರಿಗಳು, ಜನಪ್ರತಿನಿಧಿಗಳ ಮಾತಿಗೆ ಸ್ಪಂದಿಸದೆ ಬೇಜವಾಬ್ದಾರಿ ಪ್ರದರ್ಶಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೊರಟಗೆರೆ, ಮಧುಗಿರಿ, ಆಂಧ್ರದ ಮಡಕಶಿರಾ ಇತರೆಡೆ ರಸ್ತೆ ಬದಿಗಳಲ್ಲಿ ಬೀದಿ ದೀಪ ಅಳವಡಿಸಲಾಗಿದೆ. ಪಟ್ಟಣದಲ್ಲಿ ಅಳವಡಿಸಲು ರಸ್ತೆ ಕಾಮಗಾರಿ ಮಾಡಿರುವವರಿಗೆ ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆ ಜನತೆಯದ್ದು.

‘ಈ ಹಿಂದೆ ಪಟ್ಟಣ 5 ಕಿ.ಮೀ ದೂರದಿಂದಲೇ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು. ಬೇರೆಡೆಯಿಂದ ಬರುವವರಿಗೆ ವಿದ್ಯುತ್ ದೀಪಗಳು ಕಂಡೊಡನೆ ಸಂತಸವಾಗುತ್ತಿತ್ತು. ಆದರೆ ಇದೀಗ ಕತ್ತಲಿರುವುದರಿಂದ ಪಟ್ಟಣದ ಒಳ ಬಂದರೂ ಗೊತ್ತಾಗುವುದಿಲ್ಲ’ ಎಂದು ಪಟ್ಟಣದ ನಿವಾಸಿ ಯೂನಸ್ ಬೇಸರ ವ್ಯಕ್ತಪಡಿಸಿದರು.

ಸೋಲಾರ್ ಪಾರ್ಕ್ ಅಧಿಕಾರಿಗಳಿಂದ ಬೀದಿ ದೀಪಗಳಿಗಾಗಿ ಅನುದಾನ ಮಂಜೂರು ಮಾಡಲು ಮನವಿ ನೀಡಲಾಗಿದೆ. ಶಾಸಕರ ಗಮನಕ್ಕೂ ತರಲಾಗಿದೆ. ರಸ್ತೆ ಬದಿ ದೀಪಗಳನ್ನು ಅಳವಡಿಸುವ ಯೋಜನೆ ಇದೆ ಎಂದು ಪುರಸಭೆ ಅಧ್ಯಕ್ಷರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT