ಇತಿಹಾಸ ಬದಲಿಸಿದ ಚೇತನ ಅಂಬೇಡ್ಕರ್‌

ಶನಿವಾರ, ಏಪ್ರಿಲ್ 20, 2019
27 °C
ಅಂಬೇಡ್ಕರ್, ಜಗಜೀವನ್ ರಾಂ ಜಯಂತಿಯಲ್ಲಿ ಜಿನರಾಳ್ಕರ್‌ ಅಭಿಪ್ರಾಯ

ಇತಿಹಾಸ ಬದಲಿಸಿದ ಚೇತನ ಅಂಬೇಡ್ಕರ್‌

Published:
Updated:
Prajavani

ತುಮಕೂರು: ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸಮಾನತೆ ಮತ್ತು ಭ್ರಾತೃತ್ವ ಸಿದ್ಧಾಂತಗಳ ಮೂಲಕ ಪ್ರತಿಯೊಬ್ಬರೂ ಆತ್ಮಾಭಿಮಾನದಿಂದ ಬದುಕುವ ಅವಕಾಶವನ್ನು ಕಲ್ಪಿಸಿದ್ದಾರೆ ಎಂದು ನ್ಯಾಯಾಧೀಶರಾದ ಬಿ.ಎಲ್.ಜಿನರಾಳ್ಕರ್ ನುಡಿದರು.

ನಗರದ ಅಂಬೇಡ್ಕರ್‌ ಭವನದಲ್ಲಿ ದಲಿತ ಸಂಘರ್ಷ ಸಮಿತಿ, ಜಿಲ್ಲಾ ಪೌರ ಕಾರ್ಮಿಕ ಸಂಘ ಹಾಗೂ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಆಯೋಜಿಸಿದ್ದ ಡಾ.ಅಂಬೇಡ್ಕರ್‌ ಹಾಗೂ ಡಾ.ಬಾಬು ಜಗಜೀವನ್ ರಾಂ ‌ಜಯಂತಿ ಉದ್ಘಾಟಿಸಿ ಮಾತನಾಡಿದರು.

ಮಾರ್ಕ್ಸ್‌ವಾದ, ಗಾಂಧಿವಾದಗಳು ಇಂದು ವಿಫಲಗೊಳ್ಳುತ್ತಿರುವ ಕಾಲದಲ್ಲಿ ಅಂಬೇಡ್ಕರ್ ವಾದವೊಂದೆ ಸಮಕಾಲೀನ ವ್ಯವಸ್ಥೆಗೆ ಪೂರಕವಾಗಿದೆ. ಆದ್ದರಿಂದ ವಿಶ್ವದ ಬಹುತೇಕ ರಾಷ್ಟ್ರಗಳು ಇವರ ವಾದ ಒಪ್ಪಿಕೊಳ್ಳುತ್ತಿರುವುದರಿಂದ ಅವರು ವಿಶ್ವಮಾನವರಾಗುತ್ತಿದ್ದಾರೆ. ಹಾಗಾಗಿ ಭಾರತದ ಇತಿಹಾಸ ಬದಲಾಯಿಸಿದ ಮಹಾನ್ ಚೇತನ್ ಆಗಿದ್ದಾರೆ ಎಂದು ನುಡಿದರು.

ಸಾಮಾಜಿಕ ಹೋರಾಟಗಾರ ಪ್ರೊ.ಕೆ.ದೊರೈರಾಜ್ ಮಾತನಾಡಿ, ದಲಿತರು ಅಂಬೇಡ್ಕರ್ ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕಿದೆ. ದುಡಿಯುವ ಜನ, ಮಾನವೀಯ ಸಮಾಜವನ್ನು ಕಟ್ಟುವ ಜನ ಏಕತೆಯಿಂದ ಮುನ್ನಡೆಯಬೇಕು ಎಂದು ಹೇಳಿದರು.

ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿಯ ಸದಸ್ಯ ನರಸಿಂಹಯ್ಯ ಮಾತನಾಡಿದರು.

ಸಿಐಟಿಯುನ ಜಿಲ್ಲಾ ಘಟಕದ ಅಧ್ಯಕ್ಷ ಸೈಯದ್ ಮುಜೀಬ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ.ಜಿ.ಪಿ.ದೇವರಾಜ್, ಪರಿಶಿಷ್ಟ ಪಂಗಡಗಳ ಜಿಲ್ಲಾ ಅಧಿಕಾರಿ ರಾಜ್ ಕುಮಾರ್, ವಿಶೇಷ ಭೂಸ್ವಾಧಿನ ಅಧಿಕಾರಿ ಶೇಖರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ರಂಗೇಗೌಡ, ಡಿಎಸ್‌ಎಸ್ ಸಂಚಾಲಕ ಕೇಬಲ್ ರಘು ಇದ್ದರು.

ನಿವೃತ್ತ ಪೌರ ಕಾರ್ಮಿಕರಾದ ಕೋರ್ಟ್ ಹನುಮಂತಯ್ಯ, ಹುಚ್ಚಯ್ಯ, ವೆಂಕಟರಾಮಯ್ಯ, ಸಿದ್ದಪ್ಪ ಮತ್ತು ಹನುಮಯ್ಯ ಅವರನ್ನು ಅಭಿನಂದಿಸಲಾಯಿತು.

ಸಂವಿಧಾನ ಹತ್ತಿಕ್ಕುವ ಮೋದಿ

ಸ್ಲಂ ಜನಾಂದೋಲನಾ ಕರ್ನಾಟಕದ ಸಂಚಾಕ ಎ.ನರಸಿಂಹಮೂರ್ತಿ ಮಾತನಾಡಿ, ‘ಅಂಬೇಡ್ಕರ್ ಮನುವಾದಿಗಳಿಗೆ ಸಂವಿಧಾನ ರಚಿಸುವ ಮೂಲಕ ಪ್ರತಿ ಕ್ರಾಂತಿ ಮಾಡಿದ್ದರು. ಅಂತಹ ಕ್ರಾಂತಿಯನ್ನು ಹತ್ತಿಕ್ಕಿ ಮನು ಸಿದ್ಧಾಂತ ಜಾರಿಗೊಳಿಸಲು ಮೋದಿ ಮುಂದಾಗಿದ್ದಾರೆ. ಇಂತಹವರನ್ನು ಕಿತ್ತೆಸೆಯಲು ಮತದಾನದ ಹಕ್ಕನ್ನು ಜಾಗೃತಿಯಿಂದ ಚಲಾಯಿಸಬೇಕು’ ಎಂದು ಸಲಹೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !