ಸೋಮವಾರ, ಆಗಸ್ಟ್ 2, 2021
28 °C
ಪಶು ವೈದ್ಯರಿಗೆ ಪಶುಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ್ ಸೂಚನೆ

ಪಶು ಚಿಕಿತ್ಸೆಗೆ ಆಂಬುಲೆನ್ಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪಶು ಚಿಕಿತ್ಸೆಗೆ ಆಂಬುಲೆನ್ಸ್ ಸೌಲಭ್ಯ ಕಲ್ಪಿಸಲಾಗುವುದು. ಈಗಾಗಲೇ ಖರೀದಿಸಿದ್ದು, ಶೀಘ್ರ ಹಸ್ತಾಂತರಿಸಲಾಗುವುದು ಎಂದು ಪಶುಸಂಗೋಪನೆ, ಹಜ್ ಮತ್ತು ವಕ್ಫ್ ಸಚಿವ ಪ್ರಭು ಬಿ ಚವ್ಹಾಣ್ ತಿಳಿಸಿದರು.

ನಗರದ ಪಶುಪಾಲನೆ ಮತ್ತು ಪಶು ವೈದ್ಯ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಸೋಮವಾರ ನಡೆದ ಇಲಾಖೆಯ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿ, ‘ಪಶು ವೈದ್ಯರು ಹಳ್ಳಿಗಳಿಗೆ ತೆರಳಿ ರೈತರ ಸಮಸ್ಯೆಗಳನ್ನು ಆಲಿಸಿ, ಪರಿಹಾರಕ್ಕೆ ಮುಂದಾಗಬೇಕು. ಕಚೇರಿಯಲ್ಲಿ ಕುಳಿತುಕೊಳ್ಳದೆ ಹಳ್ಳಿಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು’ ಎಂದು ತಾಕೀತು ಮಾಡಿದರು.

ನಿತ್ಯ ಹಳ್ಳಿಗಳಿಗೆ ಭೇಟಿ ನೀಡಿದ ಕೆಲಸದ ಫೋಟೊ, ವಿವರವನ್ನು ವಾಟ್ಸ್ ಆ್ಯಪ್ ಮೂಲಕ ತಮಗೆ ಕಳುಹಿಸಬೇಕು. ಸದ್ಯದಲ್ಲೆ ಪಶುಸಂಗೋಪನೆ ಇಲಾಖೆಯ ವಾರ್ ರೂಮ್ ಸ್ಥಾಪನೆ ಮಾಡುವ ಆಲೋಚನೆ ಇದೆ. ಜಾನುವಾರುಗಳಿಗೆ ನಿಯಮಿತವಾಗಿ ವ್ಯಾಕ್ಸಿನ್ ನೀಡುವುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು ಎಂದು ಹೇಳಿದರು.

ಕಸಾಯಿಖಾನೆಗಳಿಗೆ ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿರುವ ಬಗ್ಗೆ ದೂರುಗಳು ಬಂದಿವೆ. ಅಧಿಕಾರಿಗಳು ಜಿಲ್ಲೆಯಲ್ಲಿ ಹದ್ದಿನ ಕಣ್ಣಿಟ್ಟು ಅಕ್ರಮ ಸಾಗಣೆ ತಡೆಯುವ ನಿಟ್ಟಿನಲ್ಲಿ ಸದಾ ಸಜ್ಜಾಗಿರಬೇಕು ಎಂದು ತಿಳಿಸಿದರು.

ತುಮಕೂರು ನಗರದಲ್ಲಿ ಹಂದಿಗಳ ಸಂಖ್ಯೆ ಹೆಚ್ಚಾಗಿದ್ದು, ಇಲಾಖೆಯಿಂದ ಅವುಗಳ ಪುನರ್ವಸತಿಗೆ ಕ್ರಮಕೈಗೊಳ್ಳುವಂತೆ ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್ ಸಚಿವರಿಗೆ ಮನವಿ ಮಾಡಿದರು.

ಸಭೆಯಲ್ಲಿ ಉಪನಿರ್ದೇಶಕ (ಪ್ರಭಾರಿ) ಡಾ.ನಂದೀಶ್, ಪ್ರಮುಖರಾದ ಜಯಪ್ರಕಾಶ್, ಡಾ.ನಾಗಣ್ಣ, ಸುರೇಶ್ ಗೌಡ ಇದ್ದರು.

ಹುದ್ದೆ ಭರ್ತಿಗೆ ಕ್ರಮ

ವೈದ್ಯರು ಹಳ್ಳಿಗಳಿಗೆ ತೆರಳಿ ಉತ್ತಮ ಚಿಕಿತ್ಸೆ ನೀಡಬೇಕು ಎಂಬುದೇ ನಮ್ಮ ಗುರಿಯಾಗಿದೆ. ಹಾಗಾಗಿ ಪಶುಪಾಲನೆ ಹಾಗೂ ಪಶು ವೈದ್ಯಕೀಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ವಧಾಗಾರಕ್ಕೆ ಭೇಟಿ

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದಿಂದ ಶಿರಾ ತಾಲ್ಲೂಕಿನ ಚೀಲನಹಳ್ಳಿಯಲ್ಲಿ ಆಧುನಿಕವಾಗಿ ನಿರ್ಮಣಗೊಳ್ಳುತ್ತಿರುವ ವಧಾಗಾರಕ್ಕೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

₹44.63 ಕೋಟಿ ವೆಚ್ಚದಲ್ಲಿ ವಧಾಗಾರ ನಿರ್ಮಾಣವಾಗುತ್ತಿದ್ದು, ಮುಂಬರುವ ಡಿಸೆಂಬರ್– ಜನವರಿಯಲ್ಲಿ ಕಾರ್ಯಾರಂಭ ಮಾಡಲಿದೆ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು