ಅವ್ಯವಸ್ಥೆಯ ಆಗರವಾದ ಶಿಶು ಯೋಜನಾಭಿವೃದ್ಧಿ ಕಚೇರಿ

7
ಅಸಮಾಧಾನ ವ್ಯಕ್ತ ಪಡಿಸಿದ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು

ಅವ್ಯವಸ್ಥೆಯ ಆಗರವಾದ ಶಿಶು ಯೋಜನಾಭಿವೃದ್ಧಿ ಕಚೇರಿ

Published:
Updated:
Prajavani

ಕುಣಿಗಲ್: ಪಟ್ಟಣದ ಚೌಡೇಶ್ವರಿ ರಸ್ತೆಯಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಅವ್ಯವಸ್ಥೆ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ ಸಂಘದ ಪದಾಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಚೇರಿಯಲ್ಲಿ ಶುಕ್ರವಾರ ಅಂಗನವಾಡಿ ಕಾರ್ಯಕರ್ತೆಯರ ಸಭೆ ಆಯೋಜಿಸಲಾಗಿತ್ತು. ಸಭೆಗೆ ಬಂದಿದ್ದ ಕಾರ್ಯಕರ್ತೆಯರು ಕಚೇರಿಯ ಅವ್ಯವಸ್ಥೆ ಕಂಡು ಅಧಿಕಾರಿಗಳ ನಿರ್ಲಕ್ಷಕ್ಕೆ ಬೇಸರ ವ್ಯಕ್ತಪಡಿಸಿದರು.

ಕಾರ್ಯಕರ್ತೆ ಸಂಘದ ಅಧ್ಯಕ್ಷೆ ಶಾಂತಕುಮಾರಿ ಮಾತನಾಡಿ, ತಾಲ್ಲೂಕಿನಲ್ಲಿ 398 ಅಂಗನವಾಡಿ ಕೇಂದ್ರಗಳಿವೆ. 14 ವೃತ್ತಗಳಿವೆ. ಪ್ರತಿ ವೃತ್ತದ ಕಾರ್ಯಕರ್ತೆಯರ ಸಭೆಯನ್ನು ತಿಂಗಳಿಗೆ ನಾಲ್ಕು ಬಾರಿ ಮಾಡಬೇಕಿದೆ. ಸಭೆಗೆ ವಿವಿಧ ಗ್ರಾಮಾಂತರ ಪ್ರದೇಶದಿಂದ ಕಾರ್ಯಕರ್ತೆಯರು ಬರುತ್ತಾರೆ. ಕಚೇರಿಯಲ್ಲಿ ಸಭಾಂಗಣ ಇದ್ದರೂ ಅರ್ಧಭಾಗ ನಿರುಪಯುಕ್ತ ವಸ್ತುಗಳಿಂದ ತುಂಬಿ ಉಳಿದ ಅರ್ಧಭಾಗದಲ್ಲಿ ಸಭೆ ನಡೆಸಲಾಗುತ್ತದೆ. ಸ್ಥಳದ ಅಭಾವ ಇರುವುದರಿಂದ ಕಾರ್ಯಕರ್ತೆಯರ ಶೌಚಾಲಯದ ಪಕ್ಕದಲ್ಲಿ ನೆಲದಲ್ಲಿ ಕುಳಿತು ಸಭೆಯಲ್ಲಿ ಭಾಗವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.

ಗ್ರಾಮೀಣ ಪ್ರದೇಶದಿಂದ ಬರುವ ನೂರಾರು ಕಾರ್ಯಕರ್ತೆಯರಿಗೆ ಒಂದು ಶೌಚಾಲಯ ಇದ್ದರೂ, ನೀರಿಲ್ಲದ ಕಾರಣ ಇದ್ದೂ ಇಲ್ಲದಂತಾಗಿದೆ. ಮಹಿಳೆಯರ ಬವಣೆ ನೀಗಿಸುವ ಕಚೇರಿಯಲ್ಲಿಯೇ ಮಹಿಳೆಯರಿಗೆ ಮೂಲಸೌಕರ್ಯದ ಕೊರತೆ ಉಂಟಾಗಿದೆ. ಗಮನ ಸೆಳೆಯಲು ಕಚೇರಿಯಲ್ಲಿ ಅಧಿಕಾರಿವರ್ಗದವರಾರು ಇಲ್ಲ ಎಂದು ಆರೋಪಿಸಿದ್ದಾರೆ.

ಕಾರ್ಯದರ್ಶಿ ಗೌರಮ್ಮ ಮಾತನಾಡಿ, ಕಾರ್ಯಕರ್ತೆಯರ ಸಮಸ್ಯೆಗಳನ್ನು ಆಲಿಸಬೇಕಾದ ಮೇಲ್ವಿಚಾರಕಿಯರು ದೂರವಾಣಿ ಸಂಪರ್ಕಕ್ಕೆ ಸಿಗುವುದಿಲ್ಲ. ಅನಿವಾರ್ಯ ಕಾರಣಗಳಿಂದ ಗೈರಾದರೆ ಗೌರವಧನ ಕಡಿತಗೊಳಿಸುವ ಮೂಲಕ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !