ಕೃಷಿ ಉತ್ಪನ್ನ ಮಾರುಕಟ್ಟೆ ರಸ್ತೆಯಲ್ಲಿ ಗುಂಡಿ; ಸಾರ್ವಜನಿಕರ ಪರದಾಟ

ಪಾವಗಡ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮಧ್ಯದಲ್ಲಿ ಗುಂಡಿ ಬಿದ್ದಿದೆ. ಕಬ್ಬಿಣದ ಸಲಾಕೆಗಳು ರಸ್ತೆಗೆ ಹರಡಿವೆ. ಸಂಚರಿಸಲು ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ತಾಲ್ಲೂಕಿನ ಎಪಿಎಂಸಿ ಮಾರುಕಟ್ಟೆ ಗೇಟ್ ಬಳಿ ರಸ್ತೆ ಕಾಮಗಾರಿ ನಡೆಸಿದ ಕಂಪನಿಯವರು ಚರಂಡಿ ನಿರ್ಮಿಸಿದ್ದಾರೆ. ಆದರೆ, ಮುಖ್ಯ ರಸ್ತೆಯಿಂದ ಮಾರುಕಟ್ಟೆಗೆ ಪ್ರವೇಶಿಸುವ ಕಡೆ ಬೃಹತ್ ಗುಂಡಿ ನಿರ್ಮಾಣವಾಗಿದೆ. ಗುಂಡಿಯ ಸುತ್ತಲೂ ಕಬ್ಬಿಣದ ಸರಳುಗಳು ಹೊರಬಂದಿವೆ.
ನಿತ್ಯ ಮಾರುಕಟ್ಟೆಗೆ ನೂರಾರು ರೈತರು ಬರುತ್ತಾರೆ. ಸೋಮವಾರ ಕುರಿ, ತರಕಾರಿ ಸಂತೆ ಇದೇ ಸ್ಥಳದಲ್ಲಿ ನಡೆಯುತ್ತದೆ. ತರಕಾರಿ, ಹಣ್ಣು, ಹಂಪಲು ತರುವ ನೂರಾರು ವಾಹನಗಳು ಇದೇ ಮಾರ್ಗದಲ್ಲಿ ಬರಬೇಕು. ಸಾವಿರಾರು ಸಾರ್ವಜನಿಕರು ಸಂತೆ ದಿನದಂದು ಇದೇ ಮಾರ್ಗದಲ್ಲಿ ಸಂಚರಿಸುತ್ತಾರೆ. ಗುಂಡಿಯಿಂದ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ರೈತ ಮುಖಂಡ ನಾಗರಾಜು ಆರೋಪಿಸಿದರು.
ಸಂಜೆ ವೇಳೆ ಸರಳುಗಳು ತಗುಲಿ ಮಹಿಳೆಯರು, ವೃದ್ಧರು ಗಾಯಗೊಂಡಿದ್ದಾರೆ. ರಸ್ತೆ ಮಧ್ಯದಲ್ಲಿಯೇ ಗುಂಡಿ ಇರುವುದರಿಂದ ವಾಹನ ಸವಾರರು, ಪಾದಚಾರಿಗಳಿಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಗುಂಡಿಯೊಳಗೆ ಸಿಲುಕಿ ವಾಹನಗಳು ಜಖಂಗೊಂಡಿರುವ ನಿದರ್ಶನಗಳಿವೆ ಎಂದು ಇಲ್ಲಿನ ವ್ಯಾಪಾರಿ ವೆಂಕಟೇಶ್ ತಿಳಿಸಿದರು.
‘ಸಮಸ್ಯೆ ಬಗ್ಗೆ ಅಧಿಕಾರಿಗಳು, ಸಂಬಂಧಿಸಿದವರಿಗೆ ತಿಳಿದಿದ್ದರೂ ಸುಮ್ಮನಿರುತ್ತಾರೆ. ಯಾರಾದರೂ ಪ್ರತಿಭಟನೆ ನಡೆಸಿದರೆ, ಪತ್ರಿಕೆಗಳಲ್ಲಿ ಪ್ರಕಟವಾದರೆ ಮಾತ್ರ ಸಮಸ್ಯೆ ಪರಿಹರಿಸುತ್ತಾರೆ. ಇಂತಹ ಅಮಾನವೀಯ ಸ್ಥಿತಿಯಲ್ಲಿ ನಾವಿದ್ದೇವೆ’ ಎಂದು ಪಟ್ಟಣದ ಶ್ರೀಧರ್ ಬೇಸರ ವ್ಯಕ್ತಪಡಿಸಿದರು.
ಬರಹ ಇಷ್ಟವಾಯಿತೆ?
0
0
0
0
0
0 comments
View All