ಗುರುವಾರ , ಜೂಲೈ 9, 2020
29 °C

ತುಮಕೂರು | ಅರೆವಾದ್ಯದ ಹುಡುಗರಿಂದ ಲಾಕ್‌ಡೌನ್‌ ಅವಧಿ ಸದ್ಬಳಕೆ

ಡಿ.ಎಂ.ಕುರ್ಕೆ ಪ್ರಶಾಂತ್ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಲಾಕ್‌ಡೌನ್ ಅವಧಿಯಲ್ಲಿ ಒಬ್ಬರದ್ದು ಒಂದೊಂದು ಕಥೆ–ವ್ಯಥೆ. ಈ ಅವಧಿಯನ್ನು ‘ಅರೆವಾದ್ಯ’ ಕಟ್ಟುವ ರೀತಿಯನ್ನು ತಿಳಿಯಲು ಸದ್ಬಳಕೆ ಮಾಡಿಕೊಂಡು ಗಮನ ಸೆಳೆದಿದ್ದಾರೆ ಶಿರಾ ತಾಲ್ಲೂಕಿನ ಬೇವಿನಹಳ್ಳಿ ಹುಡುಗರು.

ಬೇವಿನಹಳ್ಳಿಯ ಬಿ.ಕೆ.ನರಸಿಂಹರಾಜು ನೇತೃತ್ವದ ಅರೆವಾದ್ಯದ ತಂಡ ಈಗಾಗಲೇ ಹಂಪಿ ಉತ್ಸವ, ಮೈಸೂರು ದಸರಾ, ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ (ಕೆಪಿಎಲ್) ಪ್ರದರ್ಶನ ನೀಡಿ ಮೆಚ್ಚುಗೆ ಗಳಿಸಿದೆ. ಹೊರ ರಾಜ್ಯಗಳಲ್ಲಿಯೂ ಪ್ರದರ್ಶನ ನೀಡಿದೆ. ಈ ತಂಡದಲ್ಲಿ 10 ಜನರು ಇದ್ದಾರೆ. ಇವರಲ್ಲಿ ನಾಲ್ಕೈದು ಮಂದಿ ಬೆಂಗಳೂರಿನಲ್ಲಿ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆದಿಮ ಚರ್ಮವಾದ್ಯ ಪರಿಕರ ಅರೆಯನ್ನು ರೂಪಿಸುವುದು ಬಹುಕಷ್ಟದ ಕೆಲಸ. ಮೇಕೆ ಚರ್ಮದಿಂದ ಅರೆ ರೂಪುತಾಳುತ್ತದೆ. ಇದನ್ನು ರೂಪಿಸಲು ಸೂಕ್ಷ್ಮ ನೈಪುಣ್ಯ ಅಗತ್ಯ. ಹದವಾದ ಚರ್ಮವನ್ನು ಹುಡುಕುವುದು, ಬಿಸಿಲಿನಲ್ಲಿ ಒಣಗಿಸುವುದು, ಚರ್ಮವನ್ನು ಸೂಕ್ಷ್ಮವಾಗಿ ಎರೆಯುವುದು, ಬಿಸಿಯಲ್ಲಿ ಕಾಯಿಸುವುದು, ತಂಪಾದ ದಿನಗಳಲ್ಲಿ ಅರೆ ಕಟ್ಟುವುದು... ಹೀಗೆ ನಾನಾ ಕೆಲಸಗಳು ಇರುತ್ತವೆ.

‘ಮನೆಗಳಲ್ಲಿ ಹಿರಿಯರು ರೂಪಿಸಿದ ಅರೆಗಳನ್ನು ಬಳಸುತ್ತಿದ್ದರು. ಲಾಕ್‌ಡೌನ್ ಅವಧಿಯಲ್ಲಿ ಬೆಂಗಳೂರಿನಿಂದ ಬಂದ ಹುಡುಗರಿಗೂ ಅರೆಯನ್ನು ಹೇಗೆ ರೂಪಿಸುತ್ತಾರೆ ಎನ್ನುವ ಸೂಕ್ಷ್ಮಗಳನ್ನು ತಿಳಿಯುವ ಮತ್ತು ತಾವೇ ಅರೆಯನ್ನು ಕಟ್ಟುವ ಉತ್ಸಾಹ ಮೂಡಿತು. ಹಿರಿಯರ ಮಾರ್ಗದರ್ಶನ ಪಡೆದೆವು. ಒಬ್ಬೊಬ್ಬರು ಒಂದೊಂದು ಅರೆವಾದ್ಯ ಸಿದ್ಧಗೊಳಿಸಲು ತೀರ್ಮಾನಿಸಿದೆವು’ ಎಂದು ಮಾಹಿತಿ ನೀಡಿದರು ನರಸಿಂಹರಾಜು.

‘ಅರೆಯನ್ನು ಕಟ್ಟಲು ಪಿತೃಪಕ್ಷ ಸೂಕ್ತ ಸಮಯ. ಅದಕ್ಕೆ ಕಾರಣ ವಾತಾವರಣ. ಆದರೆ ಅರೆಗೆ ಚರ್ಮ ಎರೆಯಲು ಬೇಸಿಗೆಯೇ ಸೂಕ್ತ. ಬಿಸಿಲಿನಲ್ಲಿ ಚರ್ಮ ಎರೆದರೆ ಅದರ ನಾದ ಚೆನ್ನಾಗಿರುತ್ತದೆ’ ಎಂದು ವಿವರಿಸಿದರು.

ಹಿರಿಯರ ಮಾರ್ಗದರ್ಶನ: ಚರ್ಮ ಎರೆಯುವುದು ಬಹು ಸೂಕ್ಷ್ಮ ಕಲೆ. ಬೆಳಿಗ್ಗೆಯಿಂದ ಸಂಜೆವರೆಗೂ ಬಿಸಿಲಿನಲ್ಲಿಯೇ ಎರೆಯಬೇಕು. ಇದರಿಂದ ಹದ ಮೂಡುತ್ತದೆ. ಸಾಮಾನ್ಯವಾಗಿ ಆರೇಳು ತಿಂಗಳ ಮೇಕೆ ಚರ್ಮ ಸೂಕ್ತ. ಇಂತಹ ಚರ್ಮ ಹುಡುಕುವುದು ಕಷ್ಟವೇ. ಪೇಪರ್‌ನಷ್ಟು ತೆಳುವಾಗಿ ಚರ್ಮ ಎರೆಯಬೇಕು. ಸೂಚಿಯಷ್ಟು ರಂಧ್ರವಾದರೂ ಕೆಲಸ ಕೆಟ್ಟಿತು. ಆದ್ದರಿಂದ ಮೈಯೆಲ್ಲ ಕಣ್ಣಾಗಿ ಇರಬೇಕು ಎನ್ನುತ್ತಾರೆ.

‘ನಮ್ಮ ಊರಿನಲ್ಲಿ ಇಲ್ಲಿಯವರೆಗೂ ಫೈಬರ್ ಅರೆ ಬಳಸಿಲ್ಲ. ಬೆಳಿಗ್ಗೆಯಿಂದ ಸಂಜೆವರೆಗೆ ಚರ್ಮವನ್ನು ಎರೆದೆವು. ತುಂಬೆ ರಸ ಸೇರಿದಂತೆ ಎಲೆಗಳ ರಸ ಮತ್ತು ಇದ್ದಿಲನ್ನು ಅರೆ ಕಟ್ಟಲು ಬಳಸುವರು. ಹೀಗೆ ಯಾವ ಯಾವ ಗಿಡಗಳ ಸೊಪ್ಪನ್ನು ಅರೆಯನ್ನು ರೂಪಿಸುವಾಗ ಬಳಸಬೇಕು ಎನ್ನುವುದನ್ನು ತಿಳಿದೆವು. ಎಲ್ಲರೂ ಒಂದೊಂದು ಅರೆಗೆ ಸಾಕಾಗುವಷ್ಟು ಚರ್ಮವನ್ನು ಎರೆದು ಅರೆ ಕಟ್ಟಿದ್ದೇವೆ. ಹೀಗೆ ಲಾಕ್‌ಡೌನ್ ಅವಧಿಯನ್ನು ಸದ್ಬಳಕೆ ಮಾಡಿಕೊಂಡ ಸಂತೃಪ್ತಿ ಇದೆ’ ಎಂದು ನೆನಪಿಸಿಕೊಂಡರು.

ಅರೆ ನಾದದಲ್ಲಿ ಮೇಕೆ ಜೀವಂತ: ಅರೆಗೆ ಆರೇಳು ತಿಂಗಳ ಪ್ರಾಯದ ಮೇಕೆ ಚರ್ಮ ಅಗತ್ಯ. ಆದರೆ ಆ ಪ್ರಾಯದ ಮೇಕೆಯನ್ನು ಸಾಮಾನ್ಯವಾಗಿ ಆಹಾರಕ್ಕೆ ಬಳಸುವುದಿಲ್ಲ. ಕಾಯಿಲೆ ಅಥವಾ ಸತ್ತ ಮೇಕೆಗಳನ್ನು ಕೆಲವರು ಅರೆಗಾಗಿ ತಂದಕೊಡುತ್ತಾರೆ. ಲಾಕ್‌ಡೌನ್ ಅವಧಿಯಲ್ಲಿ ಮನೆಗಳಲ್ಲಿಯೇ ಜನರು ಹೆಚ್ಚಿದ್ದ ಕಾರಣ ಕೆಲವರು ಎಳೆ ಮರಿ ಮಾಂಸ ಚೆಂದ ಎಂದು ಮರಿ ಕತ್ತರಿಸಿದರು. ಅವುಗಳ ಚರ್ಮ ಕೊಟ್ಟರು ಎಂದು ಚರ್ಮ ಸಿಕ್ಕ ಬಗೆಯನ್ನು ತಿಳಿಸಿದರು ನರಸಿಂಹರಾಜು.

‘ಗೊಲ್ಲರ ತಿಮ್ಮಣ್ಣಜ್ಜ ಸತ್ತ ಮೇಕೆ ತಂದು ನಮ್ಮ ಮನೆಯ ಮುಂದೆ ಹಾಕಿದರು. ಒಳ್ಳೆಯ ಚರ್ಮ ಕಣ ಇದು. ವಾಲಗ ಬಡಿಯಲೇ ಎಂದಿತು. ನಿನ್ನ ವಾಲಗ ಎಲ್ಲಿಯವರೆಗೂ ಇರುತ್ತದೋ ಅಲ್ಲಿಯವರೆಗೂ ನನ್ನ ಮೇಕೆ ಮರಿ ಜೀವಂತವಾಗಿರುತ್ತದೆ ಎಂದಿತು ಅಜ್ಜ’ ಎಂದು ಕುರಿಗಾಹಿಗಳ ಸಂಕಷ್ಟಗಳ ಮತ್ತೊಂದು ಮಗ್ಗುಲನ್ನು ಬಿಚ್ಚಿಟ್ಟರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು