ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಷ್ಟಾರ್ಥ ಈಡೇರಿಸುವ ಅರೆಯೂರು ವೈದ್ಯನಾಥೇಶ್ವರ

ಅರೆಯೂರು ಕ್ಷೇತ್ರದಲ್ಲಿ ಮಹಾರಥೋತ್ಸವ ಸಂಭ್ರಮ
Last Updated 20 ಫೆಬ್ರುವರಿ 2020, 15:23 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಹೆಬ್ಬೂರು ಹೋಬಳಿ ಅರೆಯೂರಿನ ವೈದ್ಯನಾಥೇಶ್ವರ ದೇವಾಲಯ ಅಪಾರ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರ. ಈ ದೇವಾಲಯದ ಜ್ಯೋತಿರ್ಲಿಂಗವೇ ಭವ ರೋಗ ನಿವಾರಕ.

ತುಮಕೂರಿನಿಂದ 18 ಕಿ.ಮೀ ದೂರದ ಅರೆಯೂರಿನಲ್ಲಿ ವೈದ್ಯನಾಥೇಶ್ವರ ದೇವಾಲಯ ತನ್ನದೇ ಆದ ಇತಿಹಾಸ ಹೊಂದಿದೆ. ಚೋಳರ ಕಾಲದಲ್ಲಿ ನಿರ್ಮಾಣವಾದ ಈ ದೇವಾಲಯಕ್ಕೆ ಜಿಲ್ಲೆ, ರಾಜ್ಯ ಮಾತ್ರವಲ್ಲದೆ ಹೊರರಾಜ್ಯಗಳಲ್ಲಿಯೂ ಭಕ್ತರು ಇದ್ದಾರೆ.

ವೈದ್ಯನಾಥೇಶ್ವರ ದೇವರಲ್ಲಿ ಕಷ್ಟಗಳ ಪರಿಹಾರಕ್ಕಾಗಿ ಮೊರೆ ಹೋಗುವ ಭಕ್ತರಲ್ಲಿ, ತಮ್ಮ ಇಷ್ಟಾರ್ಥಗಳನ್ನು ದೇವರು ಈಡೇರಿಸುವನು ಎನ್ನುವ ನಂಬಿಕೆ ಅಪಾರವಾಗಿದೆ ಇದೆ.

ಹತ್ತೆಂಟು ಸಮಸ್ಯೆಗಳನ್ನು ಹೊತ್ತು ಬಂದವರು ನೋವಿನಲ್ಲಿಯೇ ವಾಪಸ್ ಆಗಿದ್ದು ಇಲ್ಲಿ ಇಲ್ಲವೇ ಇಲ್ಲ. ಈ ಕಾರಣಕ್ಕೆ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕೇರಳದಿಂದ ಭಕ್ತರು ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವರು. ಹರಕೆ ಕಟ್ಟಿಕೊಳ್ಳುವರು.

ದೇವಾಲಯದಲ್ಲಿ ಭಕ್ತರು ತಮ್ಮ ಬೇಡಿಕೆ ಈಡೇರಿಕೆಯ ಸಂಕಲ್ಪ ಮಾಡಿಕೊಳ್ಳುವುದು ವಾಡಿಕೆ. ಹೀಗೆ ಬೇಡಿಕೆ ಹೊತ್ತವರಿಗೆ ವೈದ್ಯನಾಥೇಶ್ವರನಿಗೆ ಬೆಳಿಗ್ಗೆ ಸಲ್ಲಿಸುವ ಅಭಿಷೇಕದ ತೀರ್ಥದಿಂದ ಮಜ್ಜನ ಮಾಡಿಸಲಾಗುತ್ತದೆ. ಹೀಗೆ ಮೂರು ಸಲ ಮಜ್ಜನ ಮಾಡಿದರೆ ಭವರೋಗಗಳಿಗೆ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಭಕ್ತರದ್ದು.

ಶಿವರಾತ್ರಿಯ ಈ ದಿನ ರಥೋತ್ಸವ: ಭವ ಹರ ಕಾರಕ ಶಿವನು ಸದ್ಗತಿ ನೀಡುವನು. ಸದ್ಭಾವದಿಂದ ಬಾಳುವಂತೆ ಹರಸುತ್ತಾನೆ. ಆತ್ಮ ಜಾಗೃತಿ ಮೂಡಿಸುತ್ತಾನೆ ಎಂಬ ಕಾರಣಕ್ಕಾಗಿ ಶಿವರಾತ್ರಿ ದಿನವೇ ವೈದ್ಯನಾಥೇಶ್ವರನ ರಥೋತ್ಸವ ನಡೆಯುತ್ತದೆ.

ಪುನರುಜ್ಜೀವನ: ದೇವಾಲಯದ ಕಟ್ಟಡ ಕಾಲಕಾಲಕ್ಕೆ ಪುನರುಜ್ಜೀವನಗೊಂಡಿದೆ. ಆದರೆ ಮೂಲ ಈಶ್ವರ ಮೂರ್ತಿ ಮಾತ್ರ ಯಾವುದೇ ರೀತಿಯಲ್ಲೂ ಬದಲಾವಣೆ ಆಗಿಲ್ಲ. ಹಿಂದೆ ಪ್ರತಿಷ್ಠಾಪನೆಗೊಂಡಾಗ ಇದ್ದ ಹೊಳಪು ಈಗಲೂ ಇದೆ. ಅದರ ತೇಜಸ್ಸು, ನುಣುಪು, ಆಕರ್ಷಕ ಮತ್ತು ಸೂಕ್ಷ್ಮವಾದ ಕೆತ್ತನೆ ವೈದ್ಯನಾಥೇಶ್ವರ ಮೂರ್ತಿ ಭಕ್ತರ ಕಣ್ಣಿಗೆ ಆನಂದವನ್ನು ತರುತ್ತದೆ. ಪೂಜೆಯ ಸಂದರ್ಭದಲ್ಲಿ ಕಾಣುವ ಪ್ರತಿಫಲನ ಭಕ್ತರನ್ನು ಸಮ್ಮೋಹನಗೊಳಿಸುತ್ತದೆ.

ವೈದ್ಯನಾಥೇಶ್ವರ ಸೇವಾಟ್ರಸ್ಟ್ ಹಾಗೂ ದಾಸೋಹ ಟ್ರಸ್ಟ್‌ ಇದೀಗ ಭಕ್ತರ ನೆರವಿನಿಂದ ದೇವಾಲಯದ ಆವರಣದಲ್ಲಿ ಸುಮಾರು ₹1.50 ಕೋಟಿ ವೆಚ್ಚದಲ್ಲಿ 53 ಅಡಿ ಎತ್ತರದ ರಾಜಗೋಪುರ ನಿರ್ಮಿಸಲು ಮುಂದಾಗಿದೆ. ಇದಕ್ಕಾಗಿ ಈಗಾಗಲೇ 27 ಅಡಿ ಅಗಲ ಹಾಗೂ 21 ಅಡಿ ಉದ್ದದ ತಳಪಾಯ ಕಾರ್ಯವೂ ನಡೆಯುತ್ತಿದೆ.

ರೋಗಗಳ ನಿವಾರಣೆ

ಕ್ಯಾನ್ಸರ್, ಮೂತ್ರಕೋಶ, ಜಠರದ ಹುಣ್ಣು, ಮೊಣಕಾಲು ನೋವು, ಎದೆ ನೋವು ಸೇರಿದಂತೆ ಹಲವು ರೋಗಗಳಿಂದ ಬಳಲುತ್ತಿದ್ದವರು ದೇವರಲ್ಲಿ ಹರಕೆ ಕಟ್ಟಿಕೊಂಡಿದ್ದಾರೆ. ಪವಾಡ ಸದೃಶ ರೀತಿಯಲ್ಲಿ ಆರೋಗ್ಯ ಸಮಸ್ಯೆ ಪರಿಹಾರವಾಗಿದೆ. ಈ ಬಗ್ಗೆ ಭಕ್ತರೇ ಹೇಳಿಕೊಂಡಿದ್ದಾರೆ. ಮಕ್ಕಳಾಗದವರಿಗೆ ಮಕ್ಕಳಾದ ಉದಾಹರಣೆಗಳೂ ಸಾಕಷ್ಟಿವೆ. ಭಕ್ತರ ನಂಬಿಕೆಯೇ ಇದಕ್ಕೆಲ್ಲ ಮುಖ್ಯ ಕಾರಣ ಎಂದು ದೇವಾಲಯದ ಆಡಳಿತ ಮಂಡಳಿ ಸದಸ್ಯರು ನುಡಿಯುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT