ತಿಪಟೂರು: ತಾಲ್ಲೂಕಿನ ರಂಗಾಪುರ ಗ್ರಾಮ ಪಂಚಾಯಿತಿಯ ಆಲದಹಳ್ಳಿಯ 75 ವರ್ಷದ ಎ.ಸಿ.ಹೊನ್ನಪ್ಪ ಬಣ್ಣದ ಗೆರೆಗಳ ಮೂಲಕ ಕಲಾದೇವಿಯನ್ನು ಕರಗತ ಮಾಡಿಕೊಂಡಿದ್ದಾರೆ.
ವೃತ್ತಿಯಲ್ಲಿ ಸಾವಯವ ಕೃಷಿಕರಾಗಿರುವ ಇವರಿಗೆ ಬಾಲ್ಯದಿಂದಲೂ ಚಿತ್ರಕಲೆಯತ್ತ ಒಲವು. ಪ್ರಕೃತಿಯಲ್ಲಿ ಕಂಡಿದ್ದನ್ನು, ಫಲ-ಪುಷ್ಪ, ಪ್ರಾಣಿ-ಪಕ್ಷಿ ವನ್ಯಜೀವಿಗಳನ್ನು ಸ್ಲೇಟ್ ಹಾಗೂ ಮರಳಿನಲ್ಲಿ ಬಿಡಿಸುವುದನ್ನು ರೂಢಿಸಿಕೊಂಡಿಸಿದ್ದಾರೆ.
ಪಠ್ಯ ಪುಸ್ತಕಗಳಲ್ಲಿ ವಿಜ್ಞಾನ, ಗಣಿತ ಸಂಬಂಧಿತ ಚಿತ್ರಗಳನ್ನು ಚಿತ್ರಿಸಿ ಶಿಕ್ಷಕರರಿಂದ ಮೆಚ್ಚುಗೆ ಗಳಿಸಿರುವ ಇವರಿಗೆ ಚಿತ್ರ ಬರೆಯಲು ಸ್ಫೂರ್ತಿಯಾಗಿದ್ದು ಚಿತ್ರಕಲಾ ಪ್ರದರ್ಶನ ಮತ್ತು ಕೃಷಿ ಮೇಳಗಳು.
ಚಿತ್ರಕಲೆಯಲ್ಲಿ ಆಸಕ್ತಿ ಇರುವ ನೂರಾರು ಮಕ್ಕಳಿಗೆ ಮನೆಯಂಗಳದಲ್ಲಿಯೇ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಕಲೆಯನ್ನು ಧಾರೆ ಎರೆಯುತ್ತಿದ್ದಾರೆ. ಹಲವು ಶಾಲೆಗಳಿಗೆ ತೆರಳಿ ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ, ಗ್ರಹಿಸುವ ಅಂಶದ ಬಗ್ಗೆ ಮಕ್ಕಳಿಗೆ ಕಲಿಸಿಕೊಟ್ಟಿದ್ದಾರೆ.
ಹೊನ್ನಪ್ಪ ಅವರ ಚಿತ್ರಗಳು ಮೈಸೂರು ದಸರಾ ವಸ್ತು ಪ್ರದರ್ಶನ, ಲಲಿತಾಕಲಾ ಕರಕುಶಲ ವಸ್ತು ಪ್ರದರ್ಶನ, ತುರವೇಕೆರೆ ಬದರಿಕಾಶ್ರಮ, ಸುವರ್ಣ ಕರ್ನಾಟಕ ಸಂಸ್ಕೃತಿ ಜಿಲ್ಲಾ ಸಮಿತಿ, ಹಾಸನದ ಆಕಾಶವಾಣಿ ಪುಣ್ಯ ಭೂಮಿ ಕೃಷಿ ಮೇಳ, ಬೆಂಗಳೂರಿನ ಚಿತ್ರಕಲಾ ಪರಿಷತ್, ಶಿವಮೊಗ್ಗದ ಕೃಷಿ ಕಾರ್ಯಾಗಾರ, ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಸಂತೆ, ತಿಪಟೂರಿನ ಧರ್ಮಸ್ಥಳದ ರಾಜ್ಯಮಟ್ಟದ ಕೃಷಿ ಮೇಳ, ಅಮ್ಮಸಂದ್ರದ ಸಿಮೆಂಟ್ ಕಂಪನಿ ಸುವರ್ಣ ಮಹೋತ್ಸವ ಮಾತ್ರವಲ್ಲದೆ, ಆಂಧ್ರಪ್ರದೇಶದಲ್ಲಿ ವಲ್ಲತ್ತೂರು, ಆಮಲಾಪುರದಲ್ಲಿ ಆಲ್ ಇಂಡಿಯಾ ಅಮೆಚೂರ್ ಆರ್ಟ್ ಎಕ್ಸಿಬಿಷನ್‌ನಲ್ಲೂ ಪ್ರದರ್ಶನಗೊಂಡು, ಮೆಚ್ಚುಗೆ ಪಡೆದಿವೆ.
ಹೊನ್ನಪ್ಪ ಅವರ ಕಂಚದಲ್ಲಿ ಹಂಪಿ ಕಲ್ಲಿನ ರಥ, ಗೌತಮ ಬುದ್ದ, ರಾಧಾಕೃಷ್ಣ, ಗಣೇಶ, ಕಮಲದ ಹೂ, ನಂದಿ, ನೀಲಕಂಠ ಪಕ್ಷಿ, ಪ್ರಕೃತಿ ಮಾತೆ, ಪ್ರಾಕೃತಿಕ ಚಿತ್ರ, ಲಂಬಾಣಿ ಬೆಡಗಿ, ಯಶೋಧೆ-ಕೃಷ್ಣ, ಭಾರತಾಂಬೆ, ಸೂರ್ಯದೇವ, ಗಜ ಸಂಸಾರ, ಮಬ್ಬು ಮುಂಜಾನೆಯ ಜೋಡಿ ಕಮಲ, ಸಂಗೀತ ಪ್ರಿಯೆ, ತಾಯಿ ಮಗನ ಪೋಷಣೆ, ಮಂಜು ತುಂಬಿದ ಹಿಮಾಲಯ, ಉಮರ್ ಕಯಾಂ, ಮದಕರಿ ನಾಯಕ, ಕೊಕ್ಕರೆ ಕುಟುಂಬ, ರೈತ ಮಹಿಳೆ, ಜೋಡಿ ಪಕ್ಷಿಗಳು, ದೀಪಸ್ತಂಭದ ಹಿಡಿದ ಮಹಿಳೆ, ಪ್ರಕೃತಿಯ ನೆಲ-ಜಲ- ಆಕಾಶ, ನಾಗಲೋಟದಲ್ಲಿ ಕುದುರೆ ಸಂಮೋಹ, ಬೇಲೂರಿನ ಶಿಲಾಬಾಲಿಕೆಗಳು ಅರಳಿವೆ.
ಹಂಪಿ ಕನ್ನಡ ವಿಶ್ವವಿದ್ಯಾಲಯ 2018-19ನೇ ಸಾಲಿನ ಬಿವಿಎ ಚಿತ್ರಕಲೆ ಪದವಿಗಾಗಿ ‘ಕೃಷಿಕ ಎ.ಸಿ ಹೊನ್ನಪ್ಪ ಇವರ ಕೈಯಲ್ಲಿ ಆರಳಿದ ಚಿತ್ರಕಲೆ’ ಎಂಬ ಕಿರು ಸಂಶೋಧನಾ ಪ್ರಬಂಧವನ್ನು ಪರಮೇಶ್ವರಪ್ಪ ಜಿ.ಕರಡಿ ಮಂಡಿಸಿದ್ದಾರೆ.
ಎರಡು ಎಕರೆ ಕೃಷಿ ಭೂಮಿಯಲ್ಲಿ ಅನೇಕ ಬಗೆಯ ಸಸ್ಯ ಪ್ರಭೇಧಗಳನ್ನು ತೋಟದಲ್ಲಿ ಬೆಳೆಯುತ್ತಾ ರೇಖೆ, ಆಕಾಶ, ವರ್ಣ, ಸ್ಥಳಾವಕಾಶ ಬಳಸಿಕೊಂಡು ಚಿತ್ರಕಲೆಯಿಂದ ಸುಂದರ ಲೋಕವನ್ನು ಸೃಷ್ಟಿಸಿದ್ದಾರೆ.
ಮೂರು ಅಡಿ ಎತ್ತರದ ಕರ್ನಾಟಕ ಮಾತೆ ಭಾವಚಿತ್ರದ ಕಲಾಕೃತಿಗೆ ಮೈಸೂರು ಸೈಕಲ್ ಬ್ರಾಂಡ್ ಅಗರಬತ್ತಿ ಕಂಪನಿಯವರು ಸನ್ಮಾನಿಸಿದ್ದು ತಾಲ್ಲೂಕಿನ ವಿವಿಧ ಸಂಘ ಸಂಸ್ಥೆಗಳಿಂದ ಇವರ ಕಲೆಗೆ ಸತ್ಕಾರ ದೊರೆತಿದೆ.
ಪುಸ್ತಕದ ಬದಲಿಗೆ ಚಿತ್ರಗಳ ಮೂಲಕ ಪಾಠ ಮಾಡಿದರೆ ಏಕಾಗ್ರತೆ ತಾಳ್ಮೆ ಭಾವನಾತ್ಮಕ ಚಿಂತನೆ ಕ್ರೀಯಾಶೀಲತೆ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ.ಎ.ಸಿ.ಹೊನ್ನಪ್ಪ ಕಲಾವಿದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.