ಪಾವಗಡ: ಪಟ್ಟಣದಲ್ಲಿ ಚಾಕುವಿನಿಂದ ಯುವಕನ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ಶುಕ್ರವಾರ ಪಟ್ಟಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಪಟ್ಟಣದ ನರಸಿಂಹ(26), ಹರಿಕುಮಾರ್(27), ನರಸಿಂಹಮೂರ್ತಿ(25) ಬಂಧಿತರು. ಭಾರ್ಗವ್ ಗಾಯಾಳು.
ಪಟ್ಟಣದ ಆದರ್ಶ ನಗರದ ಬಳಿ ನಾಲ್ಕು ಮಂದಿ ಯುವಕರ ನಡುವೆ ಮಾತಿನ ಚಕಮಕಿ ನಡೆದಿತ್ತು. ಮೂರು ಮಂದಿ ಆರೋಪಿಗಳು ಏಕಾಏಕಿ ಭಾರ್ಗವ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಭಾರ್ಗವ್ ಕುತ್ತಿಗೆ ಭಾಗಕ್ಕೆ ತೀವ್ರ ಗಾಯಗಳಾಗಿವೆ.
ಸ್ಥಳದಲ್ಲಿದ್ದ ಕೆಲವರು ಜಗಳ ಬಿಡಿಸಿ ಗಾಯಾಳುವನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ತುಮಕೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.
ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ.