ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಮಕೂರು: ರಸ್ತೆಯಲ್ಲಿ ಕಾಂಪೌಂಡ್‌ ನಿರ್ಮಾಣಕ್ಕೆ ಯತ್ನ

ಐದು ಗ್ರಾಮಗಳ ರೈತರಿಗೆ ಸಂಕಷ್ಟ, ಜಮೀನಿಗೆ ತೆರಳಲು ಪರದಾಟ
Published 18 ಆಗಸ್ಟ್ 2024, 14:18 IST
Last Updated 18 ಆಗಸ್ಟ್ 2024, 14:18 IST
ಅಕ್ಷರ ಗಾತ್ರ

ತುಮಕೂರು: ತಾಲ್ಲೂಕಿನ ಎ.ಕೆ.ಕಾವಲ್‌ ಗ್ರಾಮದ ಬಳಿ 40 ವರ್ಷದಿಂದ ಬಳಸುತ್ತಿದ್ದ, ಸುಮಾರು 250 ಎಕರೆ ಭೂಮಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಅಡ್ಡಲಾಗಿ ಕಾಂಪೌಂಡ್‌ ನಿರ್ಮಿಸಲು ಕೆಲವರು ಮುಂದಾಗಿದ್ದು, ಇದರಿಂದ ಐದು ಹಳ್ಳಿಗಳ ಜನರಿಗೆ ದಿಕ್ಕು ತೋಚದಂತಾಗಿದೆ.

ಗ್ರಾಮದ ರೈತರು ಸರ್ವೆ ನಂ.377, 387, 388 ಮತ್ತು 389ರ ಜಮೀನುಗಳ ಮುಖಾಂತರ ಮುಂದಿನ 250 ಎಕರೆ ಭೂಮಿಗೆ ತೆರಳಲು ರಸ್ತೆ ನಿರ್ಮಿಸಿಕೊಂಡಿದ್ದರು. ‘ನಾಡಪ್ರಭು ಕೆಂಪೇಗೌಡ ರಸ್ತೆ’ ಎಂದು ನಾಮಕರಣ ಮಾಡಿದ್ದರು. ಚೋಳೇನಹಳ್ಳಿ, ಚಿಕ್ಕಸಾರಂಗಿ, ಶಟ್ಟಪ್ಪನಹಳ್ಳಿ, ವಡ್ಡರಹಳ್ಳಿ, ಎ.ಕೆ.ಕಾವಲ್ ಸುತ್ತಮುತ್ತಲಿನ ಹಳ್ಳಿಗಳ ರೈತರು ಹಾಗೂ ಸಾರ್ವಜನಿಕರು ಇದೇ ರಸ್ತೆ ಮೇಲೆ ಅವಲಂಬಿತರಾಗಿದ್ದಾರೆ.

‘ಸರ್ವೆ ನಂಬರ್‌ 389ರ ವ್ಯಾಪ್ತಿಯ 2.13 ಎಕರೆಯನ್ನು ಮಾಲೀಕರು ನೆಲಮಂಗಲ ಮೂಲದ ವ್ಯಕ್ತಿಗೆ ಮಾರಾಟ ಮಾಡಿದ್ದಾರೆ. ಈಗ ಅವರು ಭೂ ಪರಿವರ್ತನೆ ಮಾಡಿಸಿ, ಕಾಂಪೌಂಡ್ ನಿರ್ಮಾಣ ಮಾಡಲು ಯೋಜನೆ ರೂಪಿಸಿದ್ದಾರೆ. ಕಾಮಗಾರಿ ವಿರೋಧಿಸಿದವರ ವಿರುದ್ಧ ಠಾಣೆಯಲ್ಲಿ ದೂರು ನೀಡಿದ್ದು, ವಿನಾಕಾರಣ ತೊಂದರೆ ಮಾಡುತ್ತಿದ್ದಾರೆ’ ಎಂದು ಈ ಭಾಗದ ರೈತರು ಅಳಲು ತೋಡಿಕೊಂಡಿದ್ದಾರೆ.

‘ಸಮಸ್ಯೆ ಬಗೆಹರಿಸುವಂತೆ ಕಳೆದ 3 ವರ್ಷಗಳಿಂದ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ್ ಅವರಿಗೆ 2023ರ ಸೆ.26 ರಂದು ಮನವಿ ಸಲ್ಲಿಸಲಾಗಿದೆ. ಇದುವರೆಗೆ ಯಾರೊಬ್ಬರೂ ನಮ್ಮ ಕಷ್ಟ ಕೇಳುತ್ತಿಲ್ಲ. ಯಾವುದೇ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿಲ್ಲ’ ಎಂದು ಆರೋಪಿಸಿದ್ದಾರೆ.

ಐದಾರು ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಈ ರಸ್ತೆ ಬಿಟ್ಟರೆ, ಏಳೆಂಟು ಕಿಲೊ ಮೀಟರ್‌ ಸುತ್ತಿ ಬರಬೇಕಿದೆ. ಯಾವುದೇ ತೊಂದರೆ ಕೊಡದೆ ರಸ್ತೆಗೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರೂ ಅಧಿಕಾರಿಗಳು ಕಿವಿಗೊಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT