ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ರೇಬಿಸ್‌ಮುಕ್ತ ರಾಷ್ಟ್ರಕ್ಕೆ ಪ್ರಯತ್ನ’

Last Updated 30 ಸೆಪ್ಟೆಂಬರ್ 2020, 2:52 IST
ಅಕ್ಷರ ಗಾತ್ರ

ತುಮಕೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ, ಪಶುವೈದ್ಯಕೀಯ ಸಂಘ, ಇನ್ನರ್ ವ್ಹೀಲ್ ಕ್ಲಬ್ ಆಶ್ರಯದಲ್ಲಿ ವಿಶ್ವ ರೇಬಿಸ್ ದಿನಾಚರಣೆ ಅಂಗವಾಗಿ ಸಾಕು ಪ್ರಾಣಿಗಳಿಗೆ ಉಚಿತವಾಗಿ ರೇಬಿಸ್ ವಿರುದ್ಧ ಲಸಿಕೆ ಹಾಕುವ ಕಾರ್ಯಕ್ರಮ ಪಶುಪಾಲನೆ ಇಲಾಖೆ ಆವರಣದಲ್ಲಿ ಮಂಗಳವಾರ ನಡೆಯಿತು. ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಚಾಲನೆ ನೀಡಿದರು.

ಯೂರೋಪಿನ ಹಲವು ರಾಷ್ಟ್ರಗಳು ಈಗಾಗಲೇ ರೇಬಿಸ್ ಮುಕ್ತವಾಗಿವೆ. ನಮ್ಮಲೂ ಅಂತಹ ಪ್ರಯತ್ನ ನಡೆಯಬೇಕಿದೆ. ಸಾರ್ವಜನಿಕರಲ್ಲಿ ರೋಗದ ಬಗ್ಗೆ ಅರಿವು ಇಲ್ಲದಿದ್ದರೆ ತಡೆಯುವುದು ಕಷ್ಟಕರವಾಗುತ್ತದೆ ಎಂದು ಪಶುಪಾಲನೆ ಇಲಾಖೆ ಉಪನಿರ್ದೇಶಕ ಡಾ.ಕೊಟ್ರೇಶಪ್ಪ ಹೇಳಿದರು.

ರೇಬಿಸ್ ರೋಗದ ಬಗ್ಗೆ ಉಪನ್ಯಾಸ ನೀಡಿದ ಡಾ.ನವೀನ್ ಜವಳಿ, ‘ನಾಯಿಗೆ ರೇಬಿಸ್ ರೋಗವಿದೆ ಎಂದು ತಿಳಿಯಲು ಅವುಗಳ ಚಲನವಲನಗಳನ್ನು ಗಮನಿಸಿದರೆ ಗೊತ್ತಾಗುತ್ತದೆ. ಬಾಯಲ್ಲಿ ಜೊಲ್ಲು, ನಿರಂತರವಾಗಿ ಬೊಗಳುವುದು, ಬೆಳಕಿಗೆ ಬರಲು ಹೆದರುವುದು, ಮಂಕು ಬಡಿದಂತೆ ಕೂರುವುದು– ರೋಗದ ಪ್ರಮುಖ ಲಕ್ಷಣಗಳು. ನಿಯಮಿತವಾಗಿ ಲಸಿಕೆ ಹಾಕಿಸುವ ಮೂಲಕ ನಿಯಂತ್ರಿಸಬಹುದು’ ಎಂದು ಸಲಹೆ ಮಾಡಿದರು.

ಜಿಲ್ಲಾ ಪಶುವೈದ್ಯಕೀಯ ಸಂಘದ ಅಧ್ಯಕ್ಷ ಡಾ.ರುದ್ರಪಸಾದ್, ‘ಹುಚ್ಚು ನಾಯಿ ಕಡಿತಕ್ಕೆ ಔಷಧಿ ಕಂಡುಹಿಡಿದ ವಿಜ್ಞಾನಿ ಲೂಯಿ ಪ್ಯಾಶ್ಚರ್ ಪುಣ್ಯತಿಥಿಯನ್ನು ವಿಶ್ವ ರೇಬಿಸ್ ದಿನವನ್ನಾಗಿ ಆಚರಿಸಲಾಗುತ್ತಿದೆ. ದೊಡ್ಡವರಿಗಿಂತ 5ರಿಂದ 14 ವರ್ಷದೊಳಗಿನ ಮಕ್ಕಳು ಈ ರೋಗಕ್ಕೆ ಹೆಚ್ಚಾಗಿ ತುತ್ತಾಗುತ್ತಿದ್ದಾರೆ. ಒಮ್ಮೆ ರೋಗ ಬಂದರೆ ಚಿಕಿತ್ಸೆ ಇಲ್ಲ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಸಾಕು ಪ್ರಾಣಿಗಳಿಗೆ ಲಸಿಕೆ ಹಾಕಿಸಬೇಕು’ ಎಂದು ತಿಳಿಸಿದರು.

ಮೇಯರ್ ಫರಿದಾ ಬೇಗಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗೇಂದ್ರಪ್ಪ, ಕುರಿ ಅಭಿವೃದ್ಧಿ ಮಂಡಳಿ ಉಪನಿರ್ದೇಶಕ ಡಾ.ನಾಗಣ್ಣ, ಇನ್ನರ್ ವ್ಹೀಲ್ ಕ್ಲಬ್‍ನ ಪ್ರಿಯಾ ಪ್ರದೀಪ್, ಡಾ.ಲಕ್ಷ್ಮಿನಾರಾಯಣ್, ಪಶುವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ.ದಿವಾಕರ್, ಡಾ.ಶಶಿಕಾಂತ್ ಬೂದಿಹಾಳ್, ಡಾ.ನಾಗಭೂಷಣ್ ಉಪಸ್ಥಿತರಿದ್ದರು.

ಲಸಿಕೆ ಕಾರ್ಯಕ್ರಮದಲ್ಲಿ 300ಕ್ಕೂ ಹೆಚ್ಚು ಸಾಕು ಪ್ರಾಣಿಗಳಿಗೆ ಪಶುವೈದ್ಯರಾದ ವೆಂಕಟೇಶಬಾಬು, ವಿಶ್ವನಾಥ್, ಪ್ರಿಯಾಂಕ, ಶರ್ಮಿಳಾ ಚುಚ್ಚುಮದ್ದು ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT