ಮಂಗಳವಾರ, ನವೆಂಬರ್ 19, 2019
22 °C
ನಾರಾಯಣಗುರುಗಳ ಜಯಂತ್ಯುತ್ಸವ ಆಚರಣೆ: ಈಡಿಗರ ಸಂಘದಿಂದ ಆಯೋಜಿಸಿದ್ಧ ಕಾರ್ಯಕ್ರಮದಲ್ಲಿ ಆರ್.ನಾರಾಯಣಸ್ವಾಮಿ ಹೇಳಿಕೆ

ಗುರುಗಳ ಸಾಮಾಜಿಕ ನ್ಯಾಯ ಹೋರಾಟ ಜಾಗೃತಿ ಮಾಡಿ

Published:
Updated:
Prajavani

ತುಮಕೂರು: ‘ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿದ ನಾರಾಯಣಗುರುಗಳ ಬಗ್ಗೆ ಇಂದಿನ ಯುವಕರಿಗೆ ಹಾಗೂ ಈಡಿಗ ಸಮುದಾಯಕ್ಕೆ ತಿಳಿ ಸಿಕೊಡಬೇಕಾದ ಅನಿವಾರ್ಯತೆ ಇದೆ’ ಎಂದು ಆರ್ಯ ಈಡಿಗರ ಸಂಘದ ಉಪಾಧ್ಯಕ್ಷ ಆರ್.ನಾರಾಯಣಸ್ವಾಮಿ ಹೇಳಿದರು.

ಈಡಿಗರ ಸಂಘದ ಕಚೇರಿಯಲ್ಲಿ ಶುಕ್ರವಾರ ತುಮಕೂರು ತಾಲ್ಲೂಕು ಆರ್ಯ ಈಡಿಗರ ಸಂಘದವತಿಯಿಂದ ಆಯೋಜಿಸಿದ್ಧ ’ನಾರಾಯಣ ಗುರುಗಳ ಜಯಂತ್ಯುತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ನಾರಾಯಣ ಗುರುಗಳು ಆರ್ಯ ಈಡಿಗ ಸಮಾಜದ ಏಳಿಗೆಗೆ ಶ್ರಮಿಸಿದರು. ಅವರು ತೋರಿದ ದಾರಿಯಲ್ಲಿ ಆರ್ಯ ಈಡಿಗ ಸಮುದಾಯ ನಡೆಯಬೇಕಿದೆ’ ಎಂದು ಹೇಳಿದರು.

ಆರ್ಯ ಈಡಿಗ ಸಂಘದ ಸಂಘಟನಾ ಕಾರ್ಯದರ್ಶಿ ಮಲ್ಲಸಂದ್ರ ಶಿವಣ್ಣ ಮಾತನಾಡಿ, ’ರಾಜ್ಯದಲ್ಲಿ ಪ್ರವಾಹ ಹಿನ್ನೆಲೆಯಲ್ಲಿ ನಾರಾಯಣ ಗುರುಗಳ ಜಯಂತ್ಯುತ್ಸವವನ್ನು ಸರಳವಾಗಿ ಆಚರಿಸಲಾಗುತ್ತಿದೆ.  ನಾರಾಯಣ ಗುರುಗಳ ಜಯಂತಿಗೆ ಸರ್ಕಾರ ನೀಡುತ್ತಿದ್ದ ಅನುದಾನವನ್ನು ನೆರೆ ಸಂತ್ರಸ್ತರಿಗೆ ಸಂಘ ನೀಡಿದೆ’ ಎಂದರು.

’ಕೇರಳದಲ್ಲಿ ಹುಟ್ಟಿದ ನಾರಾಯಣಗುರುಗಳು ಆರ್ಯ ಈಡಿಗ ಸಮುದಾಯ ಸೇರಿದಂತೆ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಈಡಿಗ ಸಮಾಜ ಈಗ ಎಲ್ಲ ಸಮುದಾಯದೊಂದಿಗೆ ಕುಳಿತು ಮಾತನಾಡಲು ಸಾಧ್ಯವಾಗಿದೆ. ಅದಕ್ಕೆ ಗುರುಗಳೇ ಕಾರಣ’ ಎಂದು ಅಭಿಪ್ರಾಯಪಟ್ಟರು.

ತುಮಕೂರು ತಾಲ್ಲೂಕು ಅಧ್ಯಕ್ಷ ಕೆ.ವೇದಮೂರ್ತಿ ಮಾತನಾಡಿ, ‘ಹಿಂದುಳಿದ ವರ್ಗಗಳು ಇಂದು ಎಲ್ಲ ವರ್ಗಗಳೊಂದಿಗೆ ಸಮಾನವಾಗಿ ಬದುಕಲು ಕಾರಣ ನಾರಾಯಣಗುರುಗಳು’ ಎಂದರು.

‘ನಮ್ಮ ಸಮಾಜದ ಯುವಕರಿಗೆ ನಾರಾಯಣಗುರುಗಳ ಬಗ್ಗೆ ಅರಿವು ಮೂಡಿಸದೇ ಹೋದರೆ ಮುಂದಿನ ದಿನಗಳಲ್ಲಿ ನಾರಾಯಣಗುರುಗಳ ಹೋರಾಟ, ಚಿಂತನೆಗಳು ಗೊತ್ತೇ ಇಲ್ಲದಂತಹ ಸನ್ನಿವೇಶ ಸೃಷ್ಟಿಯಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು’ ಎಂದು ಹೇಳಿದರು.

’ಜಾತಿಭೇದ ಭಾವವನ್ನು ಮೀರಿ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡಿ, ಹಿಂದುಳಿದ ವರ್ಗಗಳ ಒಗ್ಗೂಡಿಸಿ ಸಾಮಾಜಿಕ ಕ್ರಾಂತಿಯನ್ನು ಮಾಡಿದ ನಾರಾಯಣಗುರುಗಳ ಪ್ರಭಾವ ರಾಜ್ಯದಲ್ಲಿಯೂ ಇದೆ’ ಎಂದು ತಿಳಿಸಿದರು.

’ನಾರಾಯಣ ಗುರುಗಳು ಆರ್ಯ ಈಡಿಗ ಸಮಾಜಕ್ಕೆ ಸೀಮಿತವಾಗದೇ ಇಡೀ ಹಿಂದುಳಿದ ವರ್ಗಗಳ ಪರವಾಗಿ ಹೋರಾಡಿ, ಏಳ್ಗೆಗೆ ಕಾರಣರಾದರು’ ಎಂದು ಹೇಳಿದರು.

ಎಚ್.ಎಂ.ಕುಮಾರ್, ಉಪನ್ಯಾಸಕರಾದ ಶ್ರೀನಿವಾಸ್, ಎಲ್‌ಐಸಿ ನಾರಾಯಣ.ಸಿ, ಪುರುಷೋತ್ತಮ್, ನವೀನ್‌ಕುಮಾರ್ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.

ಪ್ರತಿಕ್ರಿಯಿಸಿ (+)