ಮಾನಸಿಕ ಖಿನ್ನತೆಯಿಂದ ಹೊರ ತನ್ನಿ

7

ಮಾನಸಿಕ ಖಿನ್ನತೆಯಿಂದ ಹೊರ ತನ್ನಿ

Published:
Updated:
Deccan Herald

ತುಮಕೂರು: ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯರನ್ನು ಮಾನಸಿಕ ಖಿನ್ನತೆಯಿಂದ ಹೊರ ತನ್ನಿ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ರಾಜೇಂದ್ರ ಬಾದಾಮಿಕರ್ ತಿಳಿಸಿದರು.

ನಗರದ ಬಾಲ ಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗ ಹಮ್ಮಿಕೊಂಡಿದ್ದ 'ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯರ ಯೋಜನೆ ಹಾಗೂ ಮಹಿಳಾ ಪರ ಕಾನೂನುಗಳ ಅರಿವು ನೆರವು ಕಾರ್ಯಕ್ರಮ’ದಲ್ಲಿ ಮಾತನಾಡಿದರು.

ಯಾವುದೇ ಮಹಿಳೆ ಆಸಿಡ್ ದಾಳಿಗೆ ಒಳಗಾದರೆ ಜೀವನ ಪರ್ಯಂತ ಮಾನಸಿಕವಾಗಿ ನೋವನ್ನು ಅನುಭವಿಸುತ್ತಿರುತ್ತಾರೆ. ಅದನ್ನು ಅರಿತುಕೊಂಡು ಅವರ ನೆರವಿಗೆ ಹೋಗಬೇಕು ಎಂದು ತಿಳಿಸಿದರು.

ಇಂದಿನ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಕಾನೂನು ಅರಿವು ಅವಶ್ಯಕವಾಗಿದೆ. ಎಲ್ಲರೂ ಕಡ್ಡಾಯವಾಗಿ ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಪ್ರದೇಶದಲ್ಲಿ ಇಂತಹ ದಾಳಿಗೆ ಒಳಗಾದ ಮಹಿಳೆಯರಿದ್ದರೆ ಅವರಿಗೆ ನೀವೇ ಧೈರ್ಯ ತುಂಬಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ (ಪ್ರಭಾರ) ನಟರಾಜು ಮಾತನಾಡಿ, ಸರ್ಕಾರಗಳು ಹಲವಾರು ಯೋಜನೆಗಳನ್ನು ಮಹಿಳೆಯರು ಮತ್ತು ಮಕ್ಕಳಿಗಾಗಿ ಜಾರಿಗೆ ತಂದಿವೆ. ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜೆ.ಕೆ.ಅನಿಲ್ ಮಾತನಾಡಿ, ಇಂದಿನ ಜನರಲ್ಲಿ ಕಾನೂನಿನ ಅರಿವು ಇಲ್ಲದ ಕಾರಣದಿಂದಲೇ ಕಾನೂನಿನ ದುರುಪಯೋಗ ಪಡಿಸಿಕೊಳ್ಳುತ್ತಿರುವವರಿಗೆ ಪ್ರಶ್ನಿಸಲು ಆಗುತ್ತಿಲ್ಲ ಎಂದು ವಿಷಾದಿಸಿದರು.

ಅತಿಯಾಗಿ ಮನಸ್ಸಿಗೆ ಹಚ್ಚಿಕೊಳ್ಳುವುವರಿಂದಲೇ ಆಸಿಡ್ ದಾಳಿ ನಡೆಯುತ್ತಿರುವುದು. ಏಕೆಂದರೆ ನಮಗೆ ಸಿಗದವರು ಬೇರೆಯವರಿಗೂ ಸಿಗಬಾರದು ಎಂಬ ಸ್ವಾರ್ಥ ಮನೋಭಾವದಿಂದ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಸಂಶೋಧನಾ ವಿಭಾಗ ಪ್ರಾಧ್ಯಾಪಕ ಡಾ.ಕೆ.ಜಿ.ಪರಶುರಾಮ್ ಮಾತನಾಡಿ, ಪರಿಹಾರ ನೀಡುವ ಇಲಾಖೆ ಹಾಗೂ ಪ್ರಾಧಿಕಾರ, ಅರಿವು ಮೂಡಿಸಬಹುದಾದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಅವುಗಳ ಬಗ್ಗೆ ಸಂಶೋಧನೆ ಮಾಡಬಹುದಾದ ಸಂಶೋಧನಾ ವಿದ್ಯಾರ್ಥಿಗಳು ಒಂದೇ ವೇದಿಕೆಯಲ್ಲಿ ಸೇರಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.

ವಿದ್ಯಾರ್ಥಿಗಳು ತಮ್ಮ ಸಂಶೋಧನೆಯ ಮೂಲಕ ಜನರಿಗೆ ಕಾನೂನು ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ತಿಳಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನೆರದಿದ್ದ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳಿಗೆ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಯೋಜನೆ ಹಾಗೂ ಕಾನೂನಿನ ಬಗ್ಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ಎಸ್.ಶ್ರೀಧರ್ ಅವರು ಉಪನ್ಯಾಸ ನೀಡಿದರು.

ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕ ಕಲ್ಯಾಣಾಧಿಕಾರಿ ಎಂ.ರಮೇಶ್, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಪ್ರಕಾಶ್, ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಾಬಾಸಾಹೇಬ್ ಜಿನರಾಳ್ಕರ್ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !