ಮಂಗಳವಾರ, ನವೆಂಬರ್ 12, 2019
20 °C
ಅಯೋಧ್ಯೆ ನಿವೇಶನದ ವಿಚಾರದಲ್ಲಿ ಸುಪ್ರೀಂಕೋರ್ಟ್ ತೀರ್ಪು; ಜಿಲ್ಲೆಯಾದ್ಯಂತ ಕಟ್ಟೆಚ್ಚರ

ಶಾಂತಿ, ಸಾಮರಸ್ಯ ಕಾಪಾಡಿದ ಜನರು

Published:
Updated:
Prajavani

ತುಮಕೂರು: ಅಯೋಧ್ಯೆಯ ರಾಮ ಜನ್ಮಭೂಮಿ ಮತ್ತು ಬಾಬರಿ ಮಸೀದಿ ನಿವೇಶನಕ್ಕೆ ಸಂಬಂಧಿಸಿದ ತೀರ್ಪನ್ನು ಜಿಲ್ಲೆಯ ಜನರು ಸ್ವಾಗತಿಸಿದ್ದಾರೆ. ಇದು ಶಾಂತಿ ಮತ್ತು ಸೌಹಾರ್ದಕ್ಕೆ ಕಾರಣವಾಗಲಿ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಶನಿವಾರ ಬೆಳಿಗ್ಗೆಯೇ ಪೊಲೀಸರು ನಗರದಲ್ಲಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು. ಬೆಳಿಗ್ಗೆ 6 ಗಂಟೆಯಿಂದ ಭಾನುವಾರ ಬೆಳಿಗ್ಗೆ 6ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿ ಮಾಡಿದ್ದರು. ರಾತ್ರಿ 10ರ ವರೆಗೆ ಮದ್ಯ ಮಾರಾಟವನ್ನು ನಿಷೇಧಿಸಲಾಗಿತ್ತು. ಅಹಿತಕರ ಘಟನೆಗಳು ನಡೆಯದಂತೆ ತೀವ್ರವಾಗಿ ಕಟ್ಟೆಚ್ಚರವಹಿಸಲಾಗಿತ್ತು.

ಶುಕ್ರವಾರ ಬೆಳಿಗ್ಗೆ 10.30ರ ಸಮಯದಲ್ಲಿ ಟೌನ್‌ಹಾಲ್ ಬಳಿ ಸೇರಿದ ಪೊಲೀಸರು ವಿವಿಧ ಭಾಗಗಳಿಗೆ ಚದುರಿದರು. ನಗರ ವಿವಿಧ ಭಾಗಗಳಲ್ಲಿ ಬೈಕ್‌ಗಳಲ್ಲಿ ಓಡಾಟ ನಡೆಸಿ ಪರಿಸ್ಥಿತಿಯನ್ನು ಅವಲೋಕಿಸಿದರು.

ಬಿ.ಎಚ್.ರಸ್ತೆಯ ಕೆಲವು ಅಂಗಡಿಗಳು ಮುಚ್ಚಿದ್ದವು. ಹೆಚ್ಚುವರಿಯಾಗಿ ನಗರದಲ್ಲಿ ಒಂದು ಕೆಎಸ್‌ಆರ್‌ಪಿ ತುಕಡಿಯನ್ನು ನಿಯೋಜಿಸಲಾಗಿತ್ತು. ಆಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಪಥ ಸಂಚಲನ ಮಾಡಿದರು.

ಮರಳೂರು ದಿಣ್ಣೆ, ಬನಶಂಕರಿ, ಬನಶಂಕರಿ ಎರಡನೇ ಹಂತ, ಗೂಡ್‌ಶೆಡ್ ಕಾಲೊನಿ ಸೇರಿದಂತೆ ವಿವಿಧ ಕಡೆಗಳಲ್ಲಿ ಪಥ ಸಂಚನ ನಡೆಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ.ಉದೇಶ್ ನಗರ ಪ್ರದಕ್ಷಿಣೆ ಮಾಡಿದರು. ಸಿಬ್ಬಂದಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಖುದ್ದು ಎಲ್ಲ ಕಡೆಗಳಿಗೆ ಭೇಟಿ ನೀಡಿದ್ದರು.

ಪ್ರತಿಕ್ರಿಯಿಸಿ (+)