ಸೋಮವಾರ, ಜನವರಿ 18, 2021
19 °C

ಜನತಂತ್ರ ಉಳಿವಿಗೆ ಬ್ಯಾಲೆಟ್ ಪೇಪರ್ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿರಾ: ಜನತಂತ್ರ ಉಳಿಯಬೇಕಾದರೆ ಚುನಾವಣೆಗಳು ‌ಇವಿಎಂ ಬದಲು ಬ್ಯಾಲೆಟ್ ಪೇಪರ್‌ನಲ್ಲಿ ನಡೆಯಬೇಕು ಎಂದು ಕಾಂಗ್ರೆಸ್‌ ಮುಖಂಡ ಟಿ.ಬಿ.ಜಯಚಂದ್ರ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಇವಿಎಂಗಳ ಬಗ್ಗೆ ಇಂದು ಅನುಮಾನ ಪಡುವಂತಾಗಿದೆ. ಜನರಿಗೆ ಮತದಾನ ಹಾಗೂ ಪ್ರಜಾಪ್ರಭುತ್ವದ ಬಗ್ಗೆ ನಂಬಿಕೆ ಕಳೆದುಕೊಳ್ಳುವಂತಾಗಿದೆ. ದೇಶದಲ್ಲಿ‌ ಒಂದೇ ಚುನಾವಣೆ ಜಾರಿಗೆ ಮುಂದಾಗಿರುವ ಪ್ರಧಾನಿ ಜನರಲ್ಲಿ ನಂಬಿಕೆ ಮೂಡಿಸಲು ಬ್ಯಾಲೆಟ್ ಪೇಪರ್ ವ್ಯವಸ್ಥೆ ಜಾರಿ ಮಾಡಬೇಕು’ ಎಂದರು.

ಉಪಚುನಾವಣೆ ಸೋಲಿಗೆ ನೂರಾರು ಕಾರಣಗಳಿದ್ದರೂ ಜನರ ತೀರ್ಪಿಗೆ ತಲೆಬಾಗಲೇಬೇಕು. ಸೋತಿದ್ದೇನೆ ಎಂದು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. 63 ಸಾವಿರ ಜನರು ಅಭಿವೃದ್ಧಿಯನ್ನು ನೋಡಿ ನನಗೆ ಮತ ನೀಡಿದ್ದಾರೆ. ಅವರ ಹಿತಕಾಯಲು ಶ್ರಮಿಸುತ್ತೇನೆ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ ಎಂದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳು, ಹಿತೈಷಿಗಳು ಹಾಗೂ ಚುನಾವಣೆಯಲ್ಲಿ‌ ನಮ್ಮ ಪರವಾಗಿ ಕೆಲಸ ಮಾಡಿದವರಿಗೆ ತೊಂದರೆ‌ ನೀಡಿ, ಪೊಲೀಸ್ ಪ್ರಕರಣ ದಾಖಲಿಸಲು ಮುಂದಾದರೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ, ಅವರ ಹಿತ ಕಾಯಲಾಗುವುದು ಎಂದರು.

ಚುನಾವಣೆಯ ಗೆಲುವಿಗಾಗಿ ಬಿಜೆಪಿ ಸರ್ಕಾರ ನಿಗಮಗಳ ರಚನೆಗೆ ಮುಂದಾಗಿದೆ. ಜಾತಿ ಅಧಾರದ ಮೇಲೆ ನಿಗಮಗಳನ್ನು ಪ್ರಾರಂಭಿಸಿ ಸಮಾಜಗಳನ್ನು ಒಡೆದರೆ ಜನರ ವಿಶ್ವಾಸಗಳಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಹೇಮಾವತಿ, ಭದ್ರಾ, ಎತ್ತಿನಹೊಳೆ ಯೋಜನೆಗಳನ್ನು‌ ಯಶಸ್ವಿಯಾಗಿ ಯೋಜನೆ ರೂಪಿಸಲಾಗಿದೆ. ಆದರೆ ಹೊಸದಾಗಿ ಅಧಿಕಾರಕ್ಕೆ ಬಂದಿರುವವರು ಯಾರದೋ ಒತ್ತಡಕ್ಕೆ ಮಣಿದು ಯೋಜನೆಗಳನ್ನು ಕಡಿತಗೊಳಿಸುವ ಬಗ್ಗೆ ಮಾತು ಕೇಳಿ ಬರುತ್ತಿವೆ. ಜನರ ಹಿತ ಬಲಿಕೊಡದೆ ಕೆಲಸ ನಿರ್ವಹಿಸಬೇಕು ಎಂದರು.

ಶಿರಾ ಕ್ಷೇತ್ರಕ್ಕೆ ಯಾರು ನಿರೀಕ್ಷಿಸದಷ್ಟು ರಾಜಕೀಯ ಸ್ಥಾನಮಾನ‌ ದೊರೆತಿದೆ. ಇಬ್ಬರು ವಿಧಾನ ಪರಿಷತ್ತು ಸದಸ್ಯರು, ಶಾಸಕ, 3 ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ದೊರೆತಿದೆ. ಕೇವಲ ಆಧಿಕಾರಕ್ಕೆ ತೃಪ್ತಿ ಪಡದೆ ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್. ಮಂಜುನಾಥ್, ಬರಗೂರು ನಟರಾಜು, ಕಾನೂನು ಘಟಕದ ಅಧ್ಯಕ್ಷ ಎಚ್.ಗುರುಮೂರ್ತಿ, ಯುವ ಕಾಂಗ್ರೆಸ್ ಅಧ್ಯಕ್ಷ ದಿವಾಕರ್ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎಸ್.ರವಿ, ಮುಖಂಡರಾದ ಡಿ.ಸಿ.ಆಶೋಕ್, ಶಶಿಧರ್ ಗೌಡ, ಜಿ.ರಘು, ಷಣ್ಮುಖಪ್ಪ, ನೂರುದ್ದೀನ್, ದೇವರಾಜು, ರಾಮಕೃಷ್ಣಪ್ಪ, ಸತ್ಯನಾರಾಯಣ, ಭಾನು ಪ್ರಕಾಶ್, ಚಿದಾನಂದ್, ಹಾರೋಗೆರೆ ಮಹೇಶ್ ಗೋಷ್ಠಿಯಲ್ಲಿ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು