ತುಮಕೂರು: ಸಾಲ ಮರು ಪಾವತಿಸದ ತುರುವೇಕೆರೆ ತಾಲ್ಲೂಕಿನ ತಾಳೆಕೆರೆ ರೈತರೊಬ್ಬರ ಜಮೀನು ಹರಾಜಿಗೆ ಕರೆದಿದ್ದ ಟೆಂಡರ್ ರದ್ದುಪಡಿಸಲು ಕರ್ಣಾಟಕ ಬ್ಯಾಂಕ್ ಅಧಿಕಾರಿಗಳು ಒಪ್ಪಿದ್ದು, ಆ. 12ರಂದು ರೈತ ಸಂಘ ಕರೆ ನೀಡಿದ್ದ ಪ್ರತಿಭಟನೆ ಹಿಂಪಡೆದಿದೆ.
ನಗರದ ಕರ್ಣಾಟಕ ಬ್ಯಾಂಕ್ ವಲಯ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಬ್ಯಾಂಕ್ ಮ್ಯಾನೇಜರ್ ಕೆ.ಸುಬ್ರಾಮ್ ಮತ್ತು ಮಲ್ಲನಗೌಡ, ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಅಧಿಕಾರಿಗಳು ರೈತ ಮುಖಂಡರ ಜತೆ ಸಭೆ ನಡೆಸಿದರು. ‘ಭೂಮಿ ಹರಾಜು ಹಾಕಿರುವುದು ತಪ್ಪಾಗಿದೆ. ಮುಂದಿನ ಎರಡು ತಿಂಗಳ ಒಳಗೆ ಹರಾಜು ರದ್ದುಪಡಿಸಿ, ಭೂಮಿ ವಾಪಸ್ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎ.ಗೋವಿಂದರಾಜು ಇಲ್ಲಿ ಶನಿವಾರ ತಿಳಿಸಿದರು.
ಸುಮಾರು ₹3.50 ಕೋಟಿ ಬೆಲೆ ಬಾಳುವ ಭೂಮಿಯನ್ನು ಕೇವಲ ₹35.80 ಲಕ್ಷಕ್ಕೆ ಮಾರಾಟ ಮಾಡಲು ಹರಾಜು ಪ್ರಕ್ರಿಯೆ ನಡೆದಿತ್ತು. ಮುಂದಿನ ದಿನಗಳಲ್ಲಿ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕು. ರೈತ ಕೃಷ್ಣಪ್ಪ ಅವರಿಗೆ ಭೂಮಿ ಹಿಂದಿರುಗಿಸಿ, ಸಾಲದ ಅಸಲು ಕಟ್ಟಿಸಿಕೊಂಡು, ಬಡ್ಡಿ ಮನ್ನಾ ಮಾಡುವಂತೆ ಬ್ಯಾಂಕ್ ಅಧಿಕಾರಿಗಳ ಮುಂದೆ ಮನವಿ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.