ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃಗೀಯ ಭಾವನೆ ನಾಶಮಾಡುವ ಶಿಕ್ಷಣ ಅವಶ್ಯ : ಬರಗೂರು ರಾಮಚಂದ್ರಪ್ಪ ಅಭಿಮತ

‘ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಮತ
Last Updated 26 ಡಿಸೆಂಬರ್ 2019, 10:21 IST
ಅಕ್ಷರ ಗಾತ್ರ

ತುಮಕೂರು: ‘ನಮ್ಮ ಮನದೊಳಗೆ ನರಿ, ಸಿಂಹ, ಹುಲಿ, ಚಿರತೆಗಳೆಲ್ಲವೂ ವಾಸಿಸುತ್ತಿರುತ್ತವೆ. ಇಂತಹ ಮೃಗೀಯ ಭಾವನೆಗಳನ್ನು ನಾಶ ಮಾಡುವ ಶಿಕ್ಷಣ ಇಂದು ಹೆಚ್ಚು ಅವಶ್ಯ’ ಎಂದು ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾಲಯದ ವಿಜ್ಞಾನ ಕಾಲೇಜು ಹಳೇ ವಿದ್ಯಾರ್ಥಿಗಳ ಸಂಘ ಬುಧವಾರ ಹಮ್ಮಿಕೊಂಡಿದ್ದ ‘ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ದೇಶದಲ್ಲಿ ಮಾನವ ಸಂಪನ್ಮೂಲ ವೃದ್ಧಿಯಾಗುತ್ತಿದೆ. ಈ ಬಗ್ಗೆ ಭಾರತಕ್ಕೆ ಹೆಮ್ಮೆ ಇದೆ. ಎಲ್ಲ ಕ್ಷೇತ್ರಗಳಲ್ಲಿ ಸಾಧಕರು ಇದ್ದಾರೆ. ಆದರೆ ಇವರಲ್ಲಿ ಎಷ್ಟು ಜನರು ಮನುಷ್ಯರು ಇದ್ದಾರೆ ಎನ್ನುವುದನ್ನು ನೋಡಬೇಕು. ಮೊದಲು ಮೃಗೀಯ ವರ್ತನೆಗಳನ್ನು ಬಿಟ್ಟು ಮನುಷ್ಯರಾಗಬೇಕು’ ಎಂದು ಹೇಳಿದರು.

‘ಸಮಾಜದಲ್ಲಿ ಪ್ರೊಫೆಸರ್‌ಗಳೇ ಹೆಚ್ಚಿದ್ದಾರೆ. ಮೇಸ್ಟ್ರು ಕಡಿಮೆ ಇದ್ದಾರೆ. ಆದರೆ ಮೇಸ್ಟ್ರು ಎನ್ನುವ ಪದದಲ್ಲಿನ ಸಂವೇದನೆ, ಪ್ರೀತಿ ದೊಡ್ಡದು. ಆದರೆ ಪ್ರೊಫೆಸರ್ ಎನಿಸಿಕೊಂಡವರು ‘ದೂರ’ ಎನ್ನುವ ಭಾವನೆ ಇದೆ’ ಎಂದರು.

ಶಿಕ್ಷಣ ಎನ್ನುವುದು ಬಹಳ ಮುಖ್ಯ. ನಾವು ಈ ಸಂದರ್ಭದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸಾವಿತ್ರಿ ಬಾಯಿ ಪುಲೆ ಅವರನ್ನು ಸ್ಮರಿಸಬೇಕು. ಹಳೇ ಮೈಸೂರು ಭಾಗದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಕ್ಷಣದ ಪ್ರಗತಿಗೆ ಶ್ರಮಿಸಿದರು. ಆ ಕಾಲದಲ್ಲಿ ರಾತ್ರಿ ಶಾಲೆಗಳನ್ನು ಆರಂಭಿಸಿದವರು ಎಂದು ಹೇಳಿದರು.

‘ಮನುಷ್ಯತ್ವ ಮರೆತರೆ ನಮ್ಮ ಯಾವುದೇ ಮೌಲ್ಯಗಳು ಇರುವುದಿಲ್ಲ. ಸವಲತ್ತು ಪಡೆದವರು, ಸೌಲಭ್ಯ ಇಲ್ಲದವರ ಬಗ್ಗೆ ಯೋಚಿಸಬೇಕು. ಹತ್ಯೆಗಳು, ಅತ್ಯಾಚಾರಗಳು ಮತ್ತು ಆತ್ಮಹತ್ಯೆಗಳು ಇಲ್ಲದ ಭಾರತ ನಿರ್ಮಾಣವಾಗಬೇಕು’ ಎಂದು ಆಶಿಸಿದರು.

ಶಾಸಕ ಡಾ.ಜಿ.ಪರಮೇಶ್ವರ, ‘ಸ್ವಾತಂತ್ರ್ಯ ಪೂರ್ವದಲ್ಲಿ ಶೇ 12ರಷ್ಟಿದ್ದ ಭಾರತದ ಅಕ್ಷರಸ್ಥರ ಪ್ರಮಾಣ ಸ್ವಾತಂತ್ರ್ಯ ನಂತರ ಶೇ 80ರಷ್ಟಾಗಿರುವುದು ದೊಡ್ಡ ಸಾಧನೆ’ ಎಂದರು.

‘ವೈವಿಧ್ಯ ಸಂಸ್ಕತಿಯ ಭಾರತದಲ್ಲಿ ಎಲ್ಲರೂ ಸಮಾನರಾಗಿ ಬಾಳಬೇಕು ಎನ್ನುವ ಆಶಯವನ್ನು ಸಂವಿಧಾನ ಹೊಂದಿದೆ. ಈ ಆಶಯಗಳಿಗೆ ಧಕ್ಕೆಯಾಗದ ರೀತಿಯಲ್ಲಿ ದೇಶದಲ್ಲಿ ಬದಲಾವಣೆ ಆಗಬೇಕು. ಆದರೆ, ಪ್ರಸ್ತುತ ಘಟನಾವಳಿಗಳು ಆತಂಕಕಾರಿ ಆಗಿವೆ’ ಎಂದು ಹೇಳಿದರು.

‘ಇಂದು ಸರ್ಕಾರದ ಜತೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಕಾಲೇಜು, ವಿಶ್ವವಿದ್ಯಾಲಯಗಳ ಸಂಖ್ಯೆ ಹೆಚ್ಚಾಗುತ್ತಿದೆ. ನಾನು ಉನ್ನತ ಶಿಕ್ಷಣ ಸಚಿವನಾಗಿದ್ದಾಗ ತುಮಕೂರು ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂದು ಮಾಡಿದ ಪ್ರಯತ್ನ ಯಶಸ್ವಿಯಾಯಿತು’ ಎಂದರು.

ಹಳೇ ವಿದ್ಯಾರ್ಥಿಗಳಾದ ಡಾ.ಜಿ.ಪರಮೇಶ್ವರ, ಸರ್ವೋದಯ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಕೆ.ವಿ.ಸುಬ್ಬರಾವ್, ಪತ್ರಕರ್ತ ಎಸ್.ನಾಗಣ್ಣ ಅವರನ್ನು ಸನ್ಮಾನಿಸಲಾಯಿತು. ತುಮಕೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೈ.ಎಸ್.ಸಿದ್ದೇಗೌಡ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಶಾಲಿನಿ ವೇದಿಕೆಯಲ್ಲಿ ಇದ್ದರು.

ಸಂಕಟ, ಸಂಭ್ರಮ ನೀಡಿದ ಕಾಲೇಜು

ತುಮಕೂರು ವಿಶ್ವವಿದ್ಯಾಲಯ (ಈ ಹಿಂದಿನ ಕಲಾ ಕಾಲೇಜು)ದ ವಿದ್ಯಾರ್ಥಿಯೂ ಆದ ಬರಗೂರು ರಾಮಚಂದ್ರಪ್ಪ ಅವರು ಕಾಲೇಜಿನ ದಿನಗಳನ್ನು ನೆನಪಿಸಿಕೊಂಡರು.

‘ಈ ಕಲ್ಲಿನ ಕಟ್ಟಡಗಳು ಜಡವಲ್ಲ. ನಾನು ಮತ್ತು ನನ್ನ ಪತ್ನಿ ಇದೇ ಕಾಲೇಜಿನಲ್ಲಿ ಓದಿದವರು. ನಾನು ಓದಿದ ಈ ಕಾಲೇಜಿಗೆ ಮೇಸ್ಟ್ರಾಗಿ ಬಂದೆ. ಉಪನ್ಯಾಸಕನಾಗಿ ಬಂದಾಗ 4 ಸಾವಿರ ವಿದ್ಯಾರ್ಥಿಗಳು ಇದ್ದರು’ ಎಂದು ನೆನಪಿಸಿಕೊಂಡರು.

ಇಲ್ಲಿ ಸಂಭ್ರಮ, ಸಂಕಟ ಅನುಭವಿಸಿದ್ದೇನೆ. ಎಲ್ಲವನ್ನೂ ಈ ಕಾಲೇಜು ಕೊಟ್ಟಿದೆ. ಹಳೇ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ ಎಂದು ತಾವು ವಿದ್ಯಾರ್ಥಿಯಾಗಿದ್ದ ದಿನಗಳು ಹಾಗೂ ಅಧ್ಯಾಪಕನದ ಸಮಯದ ಕೆಲ ಮಾಹಿತಿ ಬಿಚ್ಚಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT