ಜಗಜ್ಯೋತಿ ಬಸವಣ್ಣನ ಸ್ಮರಣೆ; ಮಠಗಳಲ್ಲಿ ವಚನ ಪಠಣ, ಗ್ರಾಮೀಣ ಭಾಗಗಳಲ್ಲಿ ಹಬ್ಬ

ಭಾನುವಾರ, ಮೇ 26, 2019
22 °C

ಜಗಜ್ಯೋತಿ ಬಸವಣ್ಣನ ಸ್ಮರಣೆ; ಮಠಗಳಲ್ಲಿ ವಚನ ಪಠಣ, ಗ್ರಾಮೀಣ ಭಾಗಗಳಲ್ಲಿ ಹಬ್ಬ

Published:
Updated:
Prajavani

ತುಮಕೂರು: ಜಿಲ್ಲೆಯಲ್ಲಿ ಮಂಗಳವಾರ ಬಸವ ಜಯಂತಿಯನ್ನು ಹಬ್ಬದ ಸಡಗರ ಸಂಭ್ರಮದಲ್ಲಿ ಆಚರಿಸಲಾಗುತ್ತಿದೆ. ಗ್ರಾಮೀಣ ಭಾಗಗಳಲ್ಲಿ ‘ಬಸವನ ಹಬ್ಬ’ವಾದರೆ ನಗರ ಪ್ರದೇಶಗಳಲ್ಲಿ ಬಸವ ಜಯಂತಿ ಎನಿಸಿದೆ.

ಜಿಲ್ಲೆಯ ವೀರಶೈವ–ಲಿಂಗಾಯತ ಸಂಘ ಸಂಸ್ಥೆಗಳು ಈ ದಿಸೆಯಲ್ಲಿ ಕಾರ್ಯಕ್ರಮದ ರೂಪುರೇಷೆಗಳನ್ನು ಹಲವು ದಿನಗಳ ಹಿಂದೆಯೇ ಸಿದ್ಧಗೊಳಿಸಿವೆ. ಎಲ್ಲ ಮಠಗಳಲ್ಲಿಯೂ ಜಗಜ್ಯೋತಿ ಬಸವೇಶ್ವರರ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ವಚನ ಪಠಣ, ಸ್ವಾಮೀಜಿ ಅವರಿಂದ ಆಶೀರ್ವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಕಾಯಕ ಯೋಗಿ ಬಸವೇಶ್ವರರ ಸಮಸಮಾಜದ ಆಶಯಗಳನ್ನು ನೆನಪು ಮಾಡಿಕೊಳ್ಳಲಾಗುತ್ತದೆ. ತುಮಕೂರು ನಗರದಲ್ಲಿ ವೀರಶೈವ–ಲಿಂಗಾಯತ ಸಂಘನೆಗಳು ಬಸವೇಶ್ವರ, ರೇಣುಕಾಚಾರ್ಯ ಹಾಗೂ ಸಿದ್ಧರಾಮೇಶ್ವರರ ಜಯಂತಿಯನ್ನು ಒಗ್ಗೂಡಿ ಆಚರಿಸುತ್ತಿವೆ.

ರೇಣುಕಾಚಾರ್ಯ, ಬಸವಣ್ಣ, ಸಿದ್ದರಾಮೇಶ್ವರರಿಗೆ ಕೋಡಿ ಬಸವೇಶ್ವರ ದೇವಸ್ಥಾನದಲ್ಲಿ ಮಹಾರುದ್ರಾಭಿಷೇಕ ನಡೆಯಲಿದೆ. ಮಧ್ಯಾಹ್ನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಅವರು ನಂದಿಧ್ವಜ ಪೂಜೆ ನಡೆಸುವರು. ನಂತರ ಎಸ್.ಐ.ಟಿ ಕಾಲೇಜು ಗಣಪತಿ ದೇವಸ್ಥಾನದಿಂದ ಕಲಾತಂಡದೊಂದಿಗೆ ಮೆರವಣಿಗೆ ಆರಂಭವಾಗಲಿದೆ. ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕೋಡಿ ಬಸವೇಶ್ವರ ದೇವಸ್ಥಾನದ ಬಳಿ ಮೆರವಣಿಗೆ ಕೊನೆಗೊಳ್ಳಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಸಮಾಜದ ಅಧಿಕಾರಿಗಳನ್ನು ಈ ವೇಳೆ ಗೌರವಿಸಲಾಗುತ್ತದೆ.

ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಮಕ್ಕಳು ಸಾಮೂಹಿಕ ವಚನ ಪಠಿಸುವರು. ಚಿಕ್ಕನಾಯಕನಹಳ್ಳಿಯ ತಮ್ಮಡಿಹಳ್ಳಿ, ಗೋಡೆಕೆರೆ, ಕುಪ್ಪೂರು, ಗುಬ್ಬಿ ತಾಲ್ಲೂಕು ಬೆಣಚಿಗೆರೆಯ ಬೆಟ್ಟದಹಳ್ಳಿ ಗವಿಮಠ, ಬೆಳ್ಳಾವಿಯ ಕಾರದ ಮಠ, ತಿಪಟೂರಿನ ಷಡಕ್ಷರ ಮಠ, ಕೆರಗೋಡಿ ರಂಗಾಪುರ ಮಠ, ಗುರುಕುಲಾನಂದಾಶ್ರಮ ಹೀಗೆ ಜಿಲ್ಲೆಯಲ್ಲಿರುವ ಎಲ್ಲ ಮಠಗಳಲ್ಲಿಯೂ ಬಸವ ನಾಮ ಸ್ಮರಣೆ ಜರುಲಿದೆ.

ವೀರಶೈವ ಸಮಾಜದ ಮಹಿಳಾ ಸಂಘಗಳು, ಅಕ್ಕನ ಬಳಗ, ಕದಳಿ ಮಹಿಳಾ ವೇದಿಕೆ ಹೀಗೆ ವಿವಿಧ ಸಂಘ ಸಂಸ್ಥೆಗಳಿಂದ ವಚನ ಗಾಯನ ನಡೆಯಲಿದೆ. ಸಮ ಸಮಾಜದ ಆಶಯಗಳನ್ನು ಹೊಂದಿರುವ ವಿವಿಧ ಸಂಘಟನೆಗಳೂ ಬಸವೇಶ್ವರರನ್ನು ಸ್ಮರಿಸಲಿವೆ.

ಗ್ರಾಮೀಣ ಭಾಗಗಳಲ್ಲಿ ಬಸವೇಶ್ವರರನ್ನು ನೆನೆಯುತ್ತಲೇ ಕೃಷಿ ಕಾಯಕಕ್ಕೆ ರೈತರಿಗೆ ಹೆಗಲು ಕೊಡುವ ಎತ್ತುಗಳನ್ನೂ ಪೂಜಿಸಲಾಗುತ್ತದೆ. ಬಸವನ ಪೂಜೆಯ ಸಂಭ್ರಮ ಹಳ್ಳಿಗಳಲ್ಲಿ ಮನೆ ಮಾಡುತ್ತದೆ. ಬೆಳಿಗ್ಗೆಯೇ ಎತ್ತುಗಳ ಮೈ ತೊಳೆದು ಪೂಜಿಸಿ, ಬೆಲ್ಲವನ್ನು ತಿನ್ನಿಸುವರು. ಸರ್ಕಾರಿ ಕಚೇರಿಗಳಲ್ಲಿಯೂ ಬಸವೇಶ್ವರರ ಜಯಂತಿ ಆಚರಣೆ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !