ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಮನ ಗೆದ್ದ ದಿವಾಕರ್

Last Updated 1 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

‘ಬಿಗ್‌ ಬಾಸ್‌’ನಲ್ಲಿ ಸೆಲೆಬ್ರಿಟಿ ಮತ್ತು ಜನಸಾಮಾನ್ಯ ಇವರಿಬ್ಬರಲ್ಲಿ ಗೆದ್ದಿದ್ದು ಯಾರು? ನನ್ನ ಪ್ರಕಾರ ಇಬ್ಬರೂ ಗೆದ್ದಿದ್ದಾರೆ. ಜನರು ಇಬ್ಬರನ್ನೂ ಗೆಲ್ಲಿಸಿದ್ದಾರೆ. ಇದು ನನಗೆ ಖುಷಿ ತಂದಿದೆ. ನಿಜ ಹೇಳಬೇಕೆಂದರೆ ‘ಬಿಗ್‌ ಬಾಸ್‌’ ಮನೆಯಲ್ಲಿ ನಾನು ಯಾವತ್ತೋ ಗೆದ್ದಿದ್ದೆ. ಹತ್ತು ವಾರಗಳ ಕಾಲ ಜನರು  ನನ್ನನ್ನು ಉಳಿಸಿದ್ದರಿಂದ ನಾನೂ ಗೆದ್ದಿದ್ದೇನೆ.

* ‘ಬಿಗ್‌ ಬಾಸ್‌’ ಬಗ್ಗೆ ಏನು ಅನಿಸ್ತು?
‘ಬಿಗ್‌ ಬಾಸ್’ ಒಳಗೆ ಹೋಗುವಾಗ ಸೇಲ್ಸ್‌ಮನ್ ಥರವೇ ಹೋದೆ. ಅಲ್ಲಿ ನನ್ನ ಥರವೇ ಜನಸಾಮಾನ್ಯರು ಇರುತ್ತಾರೆ ಅಂದುಕೊಂಡಿದ್ದೆ. ಆದರೆ, ಅಲ್ಲಿಗೆ ಹೋದ ಮೇಲೆಯೇ ಗೊತ್ತಾಗಿದ್ದು ಇಲ್ಲಿ ಸೆಲೆಬ್ರಿಟಿ ಇದ್ದಾರೆ ಅಂತ. ಸಿಹಿಕಹಿ ಚಂದ್ರು, ಜೆ.ಕೆ. ಅವರನ್ನಷ್ಟೇ ಸೆಲೆಬ್ರಿಟಿ ಅಂದುಕೊಂಡಿದ್ದೆ. ಯಾಕೆಂದರೆ ಅವರಿಬ್ಬರನ್ನೂ ಸಿನಿಮಾದಲ್ಲಿ ನೋಡಿದ್ದೆ. ಉಳಿದವರನ್ನು ನನ್ನಂತೆಯೇ ಜನಸಾಮಾನ್ಯರು ಅಂದುಕೊಂಡಿದ್ದೆ. ಅನುಪಮಾ, ಆಶಿಕಾ ಸೇರಿದಂತೆ ಉಳಿದವರು ಕಿರುತೆರೆಯಲ್ಲಿ ಸಕ್ರಿಯರು ಅಂತ ಆಮೇಲೆ ಗೊತ್ತಾಯ್ತು. ‘ಬಿಗ್‌ ಬಾಸ್’ನಲ್ಲಿ ಅವಕಾಶ ಸಿಕ್ಕಿದ್ದು ನಿಜಕ್ಕೂ ದೊಡ್ಡಸಂಗತಿ.

*‘ರನ್ನರ್ ಅಪ್’ ಆಗ್ತೀರಿ ಅಂತ ಅಂದುಕೊಂಡಿದ್ರಾ?
ಎರಡನೇ ಸ್ಥಾನ ದೊರೆಯುತ್ತೆ ಅಂತ ನಿಜಕ್ಕೂ ಗೊತ್ತಿರಲಿಲ್ಲ. ಅಬ್ಬಬ್ಬಾ ಅಂದರೆ ಆರನೇ ಸ್ಥಾನ ಪಡೆಯಬಹುದು ಅಂದುಕೊಂಡಿದ್ದೆ. ಆದರೆ, ಜನರು ನನ್ನ ಕೈಹಿಡಿದರು. ಅವರಿಗೆ ತುಂಬಾ ಕೃತಜ್ಞನಾಗಿದ್ದೇನೆ.

*ಸೇಲ್ಸ್‌ಮನ್ ವೃತ್ತಿ ಮುಂದುವರಿಸುತ್ತೀರಾ?
ಈ ವೃತ್ತಿಯನ್ನು ಖಂಡಿತಾ ಬಿಡಲ್ಲ. ಸಾಯುವ ತನಕ ಈ ವೃತ್ತಿಯನ್ನು ಮರೆಯಲ್ಲ. ಆದರೆ, ಮೊದಲಿನಂತೆ ಗ್ರಾಹಕರ ಬಳಿ ನಾನೇ ಹೋಗಲು ಆಗಲ್ಲ. ಏಕೆಂದರೆ ಈಗ ಜನ ನನ್ನನ್ನು ಗುರುತಿಸುತ್ತಾರೆ. ಆದರೆ, ನನ್ನ ಕಾಯಂ ಗ್ರಾಹಕರಿಗೆ ನಿಯಮಿತವಾಗಿ ತಲುಪಿಸಬೇಕಾದ ಉತ್ಪನ್ನಗಳನ್ನು ಖಂಡಿತಾ ತಲುಪಿಸ್ತೀನಿ.

*‘ಬಿಗ್‌ ಬಾಸ್‌’ನಿಂದ ಗಳಿಸಿದ ಹಣವೆಷ್ಟು?
ಎಷ್ಟು ಹಣ ಬರುತ್ತೆ ಅಂತ ಇನ್ನೂ ಸರಿಯಾಗಿ ಗೊತ್ತಿಲ್ಲ. ಇನ್ನೂ ಲೆಕ್ಕಾಚಾರ ಫೈನಲ್ ಆಗಿಲ್ಲ.

*ಸೆಲೆಬ್ರಿಟಿ ಮತ್ತು ಜನಸಾಮಾನ್ಯರ ನಡುವೆ ತಾರತಮ್ಯವಿತ್ತೇ?
ಮೊದಲ ಒಂದೆರಡು ವಾರ ಮೌನವಾಗಿದ್ದೆ. ಸುದೀಪ್ ಸರ್‌ ಇಲ್ಲಿ ಎಲ್ಲರೂ ಸೆಲೆಬ್ರಿಟಿ ಅಂತ ಹೇಳಿದ ಮೇಲೆ ಬದಲಾದೆ. ಎಲ್ಲರೂ ಅಲ್ಲಿ ನನ್ನನ್ನು  ಪ್ರೀತಿಸಿದರು. ಯಾರೂ ಸೆಲೆಬ್ರಿಟಿ ಥರ ನಡೆದುಕೊಳ್ಳಲಿಲ್ಲ. ಕೊನೆಕೊನೆಗೆ ‘ಬಿಗ್‌ ಬಾಸ್‌’ಮನೆಯಲ್ಲಿ ಎಲ್ಲರೂ ಜನಸಾಮಾನ್ಯರು ಅಂತ ಅನಿಸಿದ್ರು.

*ಕೊನೆಯ ಹಂತದಲ್ಲಿ ನೀವು ಮತ್ತು ಚಂದನ್ ಶೆಟ್ಟಿ ಒಪ್ಪಂದ ಮಾಡಿಕೊಂಡ್ರಿ ಅನ್ಸುತ್ತೆ?
ನಿಜ ಹೇಳಬೇಕೆಂದರೆ ಮೊದಲ ದಿನದಿಂದಲೂ ಚಂದನ್‌ ಗೆಲ್ಲಬೇಕು ಅನ್ನೋದೆ ನನ್ನಾಸೆ ಆಗಿತ್ತು. ಆದರೆ, ನಾನು ಗೆಲ್ಲಬೇಕು ಅನ್ನೋದು ಚಂದನ್ ಆಸೆ ಆಗಿತ್ತು. ಒಬ್ಬರಿಗೊಬ್ಬರು ಮನಃಪೂರ್ವಕವಾಗಿ ಬೆಂಬಲಿಸ್ತಾ ಇದ್ವಿ. ಇಬ್ಬರನ್ನೂ ಜನರು ವೋಟ್ ಮಾಡಿ ಅಂತಿಮ ಹಂತಕ್ಕೆ ತಂದ್ರು. ಆದರೆ, ನನಗಿಂತ ಚಂದನ್ ಗೆಲ್ಲಬೇಕೆಂಬ ನನ್ನಾಸೆ ನಿಜವಾಯಿತು. ಸ್ನೇಹಿತ ಗೆದ್ದಿದ್ದು ತುಂಬಾ ಸಂತಸವಾಯಿತು. ಅವನು ಅಪಾರ ಪ್ರತಿಭಾವಂತ. ಅವನೂ ನನ್ನಂತೆಯೇ ಕಷ್ಟಪಟ್ಟಿದ್ದಾನೆ ಜೀವನದಲ್ಲಿ. ಈ ಗೆಲುವಿಗೆ ಅವನು ಅರ್ಹ. ಒಂದರ್ಥದಲ್ಲಿ ಚಂದನ್ ಕೂಡಾ ಜನಸಾಮಾನ್ಯನೇ.

*ವೈಯಕ್ತಿಕ ಜೀವನ ಮಿಸ್ ಮಾಡಿಕೊಂಡ್ರಿ ಅಂತ ಅನಿಸಲಿಲ್ವಾ?
‘ಬಿಗ್‌ಬಾಸ್’ ಅನ್ನೋದೇ ಅದ್ಭುತವಾದ ಪ್ರಪಂಚ. ನಿಜ ಹೇಳಬೇಕೆಂದರೆ ಈಗ ಆ ಮನೆಯನ್ನು ಮಿಸ್ ಮಾಡಿಕೊಳ್ತಾ ಇದ್ದೀನಿ. ವೈಯಕ್ತಿಕ ಜೀವನ ಮಿಸ್‌ ಮಾಡಿಕೊಂಡೆ. ಆದರೆ, ನಾನು ಅಲ್ಲಿದ್ದಾಗ ನನ್ನ ಹೆಂಡ್ತಿ  ಮಮತಾ ಎಲ್ಲವನ್ನೂ ಚೆನ್ನಾಗಿ ನಿಭಾಯಿಸಿದ್ದಾಳೆ. ಅವಳಿಗೆ ಥ್ಯಾಂಕ್ಸ್. ನನಗಿಂತ ಅವಳು ಕಷ್ಟಪಟ್ಟಿದ್ದಾಳೆ.

*ಮುಂದಿನ ಯೋಜನೆಗಳೇನು?
ಸಿನಿಮಾ ಮತ್ತು ಕಿರುತೆರೆ ಎರಡಲ್ಲೂ ಅವಕಾಶಗಳು ಬರುತ್ತಿವೆ. ನಿಧಾನಕ್ಕೆ ಎಲ್ಲವನ್ನೂ ಪರಿಶೀಲಿಸಿ, ಒಳ್ಳೆಯ ಆಫರ್ ಒಪ್ಪಿಕೊಳ್ಳುವೆ.

*‘ಬಿಗ್‌ ಬಾಸ್’ ಮನೆಯಲ್ಲಿ ಕಲಿತದ್ದು ಏನು?
ನನಗೆ ಸಿಟ್ಟು ಜಾಸ್ತಿ. ‘ಬಿಗ್ ಬಾಸ್’ಗೆ ಬಂದ್ಮೇಲೆ ಸಿಟ್ಟು ಕಡಿಮೆ ಮಾಡಿಕೊಂಡೆ. ತಾಳ್ಮೆ ಮತ್ತು ಹೆಚ್ಚು ಪ್ರೀತಿಸುವುದನ್ನು ಕಲಿತೆ. ನಾನು ಅಂತರ್ಮುಖಿ. ಈಗ ಎಲ್ಲರೊಂದಿಗೂ ಬೆರೆಯುವ ಸ್ವಭಾವ ರೂಢಿಸಿಕೊಂಡಿದ್ದೇನೆ.

ಜನಸಾಮಾನ್ಯನ ಕೈಯಲ್ಲಿ ಏನೂ ಆಗೋಲ್ಲ ಅನ್ನೋದು ತಪ್ಪು. ಅವಕಾಶ ಕೊಟ್ಟರೆ ಜನಸಾಮಾನ್ಯ ಕೂಡ ಸಾಧನೆ ಮಾಡಬಲ್ಲ ಎಂಬುದನ್ನು ‘ಬಿಗ್‌ ಬಾಸ್’ ತೋರಿಸಿಕೊಟ್ಟಿದೆ.

ಪತ್ನಿಯಿಂದ 106 ಉಡುಗೊರೆ!
ಪತ್ನಿ ಮಮತಾ, ದಿವಾಕರ್ ಅವರಿಗೆ ‘ಬಿಗ್‌ ಬಾಸ್‌’ ಮನೆಯ 106 ದಿನಗಳ ನೆನಪಿಗಾಗಿ 106 ಉಡುಗೊರೆಗಳನ್ನು ಕೊಡಲಿದ್ದಾರೆ. ಈಗಾಗಲೇ ಆರು ದಿನಗಳ ಉಡುಗೊರೆ ಕೊಟ್ಟಿರುವ ಮಮತಾ, ಒಂದೊಂದು ಉಡುಗೊರೆಯ ಹಿಂದೆಯೂ ಒಂದೊಂದು ಅರ್ಥಪೂರ್ಣ ಸಂದೇಶ ನೀಡಿದ್ದಾರೆ.

ಪತಿ ದಿವಾಕರ್ ವಿಷ್ಣು ಅಭಿಮಾನಿಯಾಗಿರುವುದರಿಂದ ಬೆಳ್ಳಿ ಕಡಗವನ್ನು ಮೊದಲ ಉಡುಗೊರೆಯಾಗಿ ಕೊಟ್ಟಿದ್ದಾರೆ. ದಿವಾಕರ್ ಎಲ್ಲರ ಜತೆ ಬೆರೆತಿದ್ದಕ್ಕೆ ಸುಗಂಧ ದ್ರವ್ಯ, ಕೋಪ ಕಡಿಮೆ ಮಾಡಿಕೊಂಡಿದ್ದಕ್ಕೆ ಕೂಲಿಂಗ್‌ ಗ್ಲಾಸ್, ಎಲ್ಲರ ಜತೆ ಹೊಂದಿಕೊಂಡಿದ್ದಕ್ಕೆ ಹೇರ್ ಜೆಲ್, ಇಡೀ ಕರ್ನಾಟಕದ ಪ್ರೀತಿ ಗಳಿಸಿದ್ದಕ್ಕೆ ವ್ಯಾಲೆಟ್, ಕೌಟುಂಬಿಕ ಬಾಂಧವ್ಯ ಸಾರಲು ಕುಟುಂಬದ ಚಿತ್ರವಿರುವ ಮಗ್ ಅನ್ನು ಮಮತಾ ಕೊಟ್ಟಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT