ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೀನ್ಸ್ ಅಗ್ಗ, ಟೊಮೆಟೊ ದರ ಕುಸಿತ

ಹಣ್ಣು ದುಬಾರಿ, ಕೋಳಿ ಮಾಂಸ ಇಳಿಕೆ, ಮೀನು ದರ ಹೆಚ್ಚಳ
Published : 4 ಆಗಸ್ಟ್ 2024, 5:43 IST
Last Updated : 4 ಆಗಸ್ಟ್ 2024, 5:43 IST
ಫಾಲೋ ಮಾಡಿ
Comments

ತುಮಕೂರು: ಬೀನ್ಸ್, ಟೊಮೆಟೊ ಅಗ್ಗವಾಗಿದ್ದರೆ, ಕೆಲವು ತರಕಾರಿಗಳ ದರ ಹೆಚ್ಚಳವಾಗಿದ್ದು, ಸೊಪ್ಪಿನ ಬೆಲೆ ಚೇತರಿಸಿಲ್ಲ. ಬಾಳೆಹಣ್ಣು ಸೇರಿದಂತೆ ಹಣ್ಣುಗಳ ಧಾರಣೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೋಳಿ ಮಾಂಸ ಇಳಿಕೆಯಾಗಿದ್ದು, ಮೀನು ಮತ್ತೆ ದುಬಾರಿಯಾಗಿದೆ.

ಬೀನ್ಸ್ ಅಗ್ಗ: ಇತರೆ ಎಲ್ಲಾ ತರಕಾರಿಗಿಂತ ಬೀನ್ಸ್ ಸಾಕಷ್ಟು ಅಗ್ಗವಾಗಿದ್ದು, ಕೆ.ಜಿ ₹20–30ಕ್ಕೆ ಕುಸಿತ ಕಂಡಿದೆ. ಎರಡು ತಿಂಗಳ ಹಿಂದೆ ಕೆ.ಜಿ ₹200 ಸಮೀಪಕ್ಕೆ ಬಂದಿತ್ತು. ಆದರೆ ಈಗ ಇತರೆ ತರಕಾರಿಗಳಿಗಿಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಏರಿಕೆಯತ್ತ ಮುಖ ಮಾಡಿದ್ದ ಟೊಮೆಟೊ ಕಳೆದ ಎರಡು ವಾರದಿಂದ ಕಡಿಮೆಯಾಗುತ್ತಿದ್ದು, ಈಗ ಕೆ.ಜಿ ₹15–20ಕ್ಕೆ ತಗ್ಗಿದೆ.

ಅಲ್ಪ ಇಳಿಕೆ ಕಂಡಿದ್ದ ಗೆಡ್ಡೆಕೋಸು ಮತ್ತೆ ದುಬಾರಿಯಾಗಿದ್ದು, ಆಲೂಗೆಡ್ಡೆ, ಬೆಂಡೆಕಾಯಿ, ಬದನೆಕಾಯಿ, ಹೂ ಕೋಸು, ತೊಂಡೆಕಾಯಿ, ಹಾಗಲಕಾಯಿ ತಲಾ ಕೆ.ಜಿಗೆ ₹10ರಿಂದ 20ರ ವರೆಗೂ ದುಬಾರಿಯಾಗಿದೆ. ಕ್ಯಾರೇಟ್, ಎಲೆಕೋಸು, ನುಗ್ಗೇಕಾಯಿ ದರ ಕಡಿಮೆಯಾಗಿದೆ. ಸೌತೆಕಾಯಿ, ನಿಂಬೆ ಹಣ್ಣು ತುಸು ಏರಿಕೆಯಾಗಿದೆ. ಶ್ರಾವಣ ಮಾಸ ಕಾಲಿಡುತ್ತಿದ್ದು, ಶುಭ ಕಾರ್ಯಗಳು ಆರಂಭವಾಗುತ್ತಿದ್ದು, ತರಕಾರಿ ಬೆಲೆ ಮತ್ತಷ್ಟು ಹೆಚ್ಚಳವಾಗಬಹುದು ಎಂದು ಹೇಳಲಾಗುತ್ತಿದೆ.

ಸೊಪ್ಪು ಅಲ್ಪ ಚೇತರಿಕೆ: ಸೊಪ್ಪಿನ ಬೆಲೆ ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದು, ಸಬ್ಬಕ್ಕಿ ಸೊಪ್ಪು ಸ್ವಲ್ಪ ಹೆಚ್ಚಳವಾಗಿದೆ. ಮೆಂತ್ಯೆ ಸೊಪ್ಪು ಕೊಂಚ ಕಡಿಮೆಯಾಗಿದೆ. ಕೊತ್ತಂಬರಿ ಸೊಪ್ಪು ಕೆ.ಜಿ ₹20–30, ಸಬ್ಬಕ್ಕಿ ಕೆ.ಜಿ ₹30–40, ಮೆಂತ್ಯ ಸೊಪ್ಪು ಕೆ.ಜಿ ₹25–30, ಪಾಲಕ್ ಸೊಪ್ಪು (ಕಟ್ಟು) ₹30ಕ್ಕೆ ಮಾರಾಟವಾಗುತ್ತಿದೆ.

ಹಣ್ಣು ಏರಿಕೆ: ಶ್ರಾವಣ ಮಾಸ ಆರಂಭಕ್ಕೆ ಮುನ್ನವೇ ಹಣ್ಣುಗಳ ಧಾರಣೆ ಏರಿಕೆಯತ್ತ ಮುಖಮಾಡಿದೆ. ಏಲಕ್ಕಿ ಬಾಳೆಹಣ್ಣು ಕೆ.ಜಿ ₹90ಕ್ಕೆ ಜಿಗಿದಿದೆ. ಸೇಬು, ಪೈನಾಪಲ್ ಹೆಚ್ಚಳವಾಗಿದ್ದು, ಮೂಸಂಬಿ ತುಸು ಇಳಿದಿದೆ. ತೋತಾಪುರಿ ಮಾವು ಕೆ.ಜಿ ₹180, ಬೇನಿಷಾ ಕೆ.ಜಿ ₹150ಕ್ಕೆ ಏರಿಕೆ ಕಂಡು, ದುಬಾರಿಯಾಗಿದೆ.

ಅಡುಗೆ ಎಣ್ಣೆ: ಕಡಲೆಕಾಯಿ ಎಣ್ಣೆ ಕೊಂಚ ಏರಿಕೆಯಾಗಿದ್ದು, ಇತರೆ ಎಣ್ಣೆ ದರ ಯಥಾಸ್ಥಿತಿ ಮುಂದುವರಿದಿದೆ. ಗೋಲ್ಡ್‌ವಿನ್ನರ್ ಕೆ.ಜಿ ₹110–112, ಪಾಮಾಯಿಲ್ ಕೆ.ಜಿ ₹88–90, ಕಡಲೆಕಾಯಿ ಎಣ್ಣೆ ಕೆ.ಜಿ ₹160–165ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಬಟಾಣಿ ದುಬಾರಿ: ಕಳೆದ ಒಂದು ತಿಂಗಳಿಂದ ಗಗನಮುಖಿಯಾಗಿರುವ ಬಟಾಣಿ, ಒಂದು ವಾರದ ಅಂತರದಲ್ಲಿ ಕೆ.ಜಿಗೆ ₹25 ಏರಿಕೆಯಾಗಿದ್ದು, ಕೆ.ಜಿ ₹155–160ಕ್ಕೆ ತಲುಪಿದೆ. ಉದ್ದಿನ ಬೇಳೆ, ಹೆಸರು ಬೇಳೆ, ಹುರುಳಿಕಾಳು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಹೆಸರು ಕಾಳು, ಕಡಲೆ ಬೀಜ ಕೊಂಚ ಕಡಿಮೆಯಾಗಿದೆ.

ಮಸಾಲೆ ಪದಾರ್ಥ: ಮಸಾಲೆ ಪದಾರ್ಥಗಳ ಧಾರಣೆ ಬಹುತೇಕ ಯಥಾಸ್ಥಿತಿ ಕಾಯ್ದುಕೊಂಡಿದೆ. ಮೆಣಸು, ಜೀರಿಗೆ, ಲವಂಗ ತುಸು ಇಳಿಕೆ ಕಂಡಿದೆ. ಗೋಡಂಬಿ ದರ ಮತ್ತೆ ದುಬಾರಿ ಸ್ಥಿತಿಯಲ್ಲೇ ಮುಂದುವರಿದಿದೆ.

ಧನ್ಯ ಕೆ.ಜಿ ₹110–160, ಬ್ಯಾಡಗಿ ಮೆಣಸಿನಕಾಯಿ ಕೆ.ಜಿ ₹240–260, ಗೌರಿಬಿದನೂರು ಖಾರದ ಮೆಣಸಿನಕಾಯಿ ಕೆ.ಜಿ ₹200–220, ಹುಣಸೆಹಣ್ಣು ₹110–150, ಬೆಲ್ಲ ಕೆ.ಜಿ ₹50–52, ಕಾಳುಮೆಣಸು ಕೆ.ಜಿ ₹760–780, ಜೀರಿಗೆ ಕೆ.ಜಿ ₹320–340, ಸಾಸಿವೆ ಕೆ.ಜಿ ₹80–85, ಮೆಂತ್ಯ ಕೆ.ಜಿ ₹90–95, ಚಕ್ಕೆ ಕೆ.ಜಿ ₹250–260, ಲವಂಗ ಕೆ.ಜಿ ₹850–880, ಗುಣಮಟ್ಟದ ಗಸಗಸೆ ಕೆ.ಜಿ ₹1,200–1,300, ಏಲಕ್ಕಿ ಕೆ.ಜಿ ₹2,800–3,000, ಬಾದಾಮಿ ಕೆ.ಜಿ ₹620–660, ಗೋಡಂಬಿ ಕೆ.ಜಿ ₹850–900, ಒಣದ್ರಾಕ್ಷಿ ಕೆ.ಜಿ ₹200–220ಕ್ಕೆ ಮಂಡಿಪೇಟೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.

ಕೋಳಿ ಅಗ್ಗ: ಶ್ರಾವಣ ಮಾಸ ಆರಂಭದ ಹೊತ್ತಿಗೆ ಕೋಳಿ ಮಾಂಸದ ಬೆಲೆಯೂ ಸಾಕಷ್ಟು ಅಗ್ಗವಾಗಿದೆ. ಬ್ರಾಯ್ಲರ್ ಕೋಳಿ ಕೆ.ಜಿ ₹110, ರೆಡಿ ಚಿಕನ್ ಕೆ.ಜಿ ₹180, ಸ್ಕಿನ್‌ಲೆಸ್ ಕೆ.ಜಿ ₹200, ಮೊಟ್ಟೆ ಕೋಳಿ (ಫಾರಂ) ಕೆ.ಜಿ ₹110ಕ್ಕೆ ಇಳಿಕೆಯಾಗಿದೆ.

ಮೀನು ಹೆಚ್ಚಳ: ಮೀನಿನ ಧಾರಣೆ ಏರಿಕೆಯತ್ತಲೇ ಸಾಗಿದ್ದು, ಇನ್ನೂ ಕೆಲವು ವಾರ ಇದೇ ಸ್ಥಿತಿ ಮುಂದುವರಿಯಲಿದೆ. ಈ ತಿಂಗಳ ಕೊನೆ ವೇಳೆಗೆ ಕಡಿಮೆಯಾಗಬಹುದು. ಬಂಗುಡೆ ಕೆ.ಜಿ ₹340, ಬೂತಾಯಿ ₹350, ಬೊಳಿಂಜರ್ ಕೆ.ಜಿ ₹220, ಅಂಜಲ್ ಕೆ.ಜಿ ₹1,130, ಬಿಳಿಮಾಂಜಿ ಕೆ.ಜಿ ₹1,380, ಕಪ್ಪುಮಾಂಜಿ ಕೆ.ಜಿ ₹1,030, ಇಂಡಿಯನ್ ಸಾಲ್ಮನ್ ಕೆ.ಜಿ ₹1,150, ಸೀಗಡಿ ಕೆ.ಜಿ ₹430–680, ಏಡಿ ಕೆ.ಜಿ 450ಕ್ಕೆ ನಗರದ ಮತ್ಸ್ಯದರ್ಶಿನಿಯಲ್ಲಿ ಮಾರಾಟವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT