ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರಟಗೆರೆ: ಉತ್ತಮ ಮಳೆ, ದಾಖಲೆಯ ಬಿತ್ತನೆ ಗುರಿ- ಗರಿಗೆದರಿದ ಕೃಷಿ ಚಟುವಟಿಕೆ

Last Updated 24 ಮೇ 2021, 5:00 IST
ಅಕ್ಷರ ಗಾತ್ರ

ಕೊರಟಗೆರೆ: ತಾಲ್ಲೂಕಿನಾದ್ಯಂತ ವಾರದಿಂದ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆ ಗರಿಗೆದರಿದೆ.

ತಾಲ್ಲೂಕಿನಲ್ಲಿ ಈವರೆಗೆ 135 ಮಿ.ಮೀ ಮಳೆಯಾಗಿದೆ. ರೈತರು ಜಮೀನಿನಲ್ಲಿ ಉಳುಮೆಯಲ್ಲಿ ತೊಡಗಿದ್ದಾರೆ.

ಕಳೆದ ವರ್ಷ ತಾಲ್ಲೂಕಿನಲ್ಲಿ ಶೇ 99.80 ರಷ್ಟು ಬಿತ್ತನೆಯಾಗಿತ್ತು. 10 ವರ್ಷಗಳಲ್ಲಿ ಇದು ಅತಿ ಹೆಚ್ಚಿನ ಬಿತ್ತನೆಯಾಗಿತ್ತು. ಲಾಕ್‌ಡೌನ್‌ನಿಂದಾಗಿ ಉದ್ಯೋಗ ಕಳೆದುಕೊಂಡು ಹಳ್ಳಿ ಸೇರಿದ್ದ ಅನೇಕರು ಕೃಷಿಯಲ್ಲಿ ತೊಡಗಿದ್ದರು. ರೈತರ ನಿರೀಕ್ಷೆಯಂತೆ ಉತ್ತಮ ಬೆಳೆಯೂ ಬಂದಿತ್ತು.

ಈ ವರ್ಷವೂ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಉತ್ತಮ ಬೆಳೆಯ ನಿರೀಕ್ಷೆಯಲ್ಲಿದ್ದಾರೆ. ಹುಮ್ಮಸ್ಸಿನಲ್ಲಿ ಉಳುಮೆಯಲ್ಲಿ ನಿರತರಾಗಿದ್ದಾರೆ. ಈವರೆಗೆ ಶೇ 15ರಿಂದ ಶೇ 20ರಷ್ಟು ಉಳುಮೆ ಪೂರ್ಣಗೊಂಡಿದೆ. ತೋವಿನಕೆರೆ ಹಾಗೂ ಕೋಳಾಲ ಹೋಬಳಿಯ ಅಲ್ಲಲ್ಲಿ ರೈತರು ತೊಗರಿ ಬಿತ್ತನೆ ಮಾಡುತ್ತಿದ್ದಾರೆ.

ತಾಲ್ಲೂಕಿನಲ್ಲಿ 34,723 ಹೆಕ್ಟೇರ್ ಸಾಗುವಳಿ ವಿಸ್ತೀರ್ಣ ಇದೆ. 29,323 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇದೆ. ಜೂನ್‌ 2ನೇ ವಾರದ ನಂತರ ಪೂರ್ಣಾವಧಿ ಬಿತ್ತನೆ ಪ್ರಾರಂಭವಾಗಲಿದೆ. ಜೂನ್ ಮೊದಲ ವಾರದಲ್ಲಿ ಶೇ 60ರಿಂದ 70ರಷ್ಟು ಉಳುಮೆ ಮುಗಿಯಲಿದೆ. ಉಳುಮೆ ಮುಗಿದ ನಂತರ ಶೇಂಗಾ, ಮುಸುಕಿನ ಜೋಳ, ತೊಗರಿ, ಅಲಸಂದಿ, ನವಣೆ, ಬಿತ್ತನೆಯ ಭತ್ತಕ್ಕೆ ಬೇಡಿಕೆ ಹೆಚ್ಚಾಗಲಿದೆ. ತಾಲ್ಲೂಕಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ಬಿತ್ತನೆ ಬೀಜ ಶೇಖರಿಸಲಾಗಿದೆ. ಜೂನ್ 4ನೇ ವಾರದಿಂದ ಆಗಸ್ಟ್ 31ರವರೆಗೆ ಬಿತ್ತನೆ ನಡೆಯುವುದರಿಂದ ಅದರ ಅನ್ವಯ ಬಿತ್ತನೆ ಬೀಜಗಳನ್ನು ಬೇಡಿಕೆಗೆ ತಕ್ಕಂತೆ ರಿಯಾಯಿತಿ ದರದಲ್ಲಿ ವಿತರಣೆಗೆ ಕೃಷಿ ಇಲಾಖೆ ಸಿದ್ಧತೆ ನಡೆಸಿದೆ.

85 ಕ್ವಿಂಟಲ್ ಶೇಂಗಾ, 85 ಕ್ವಿಂಟಲ್‌ ಕೆ-6 ಮುಸುಕಿನ ಜೋಳ ಶೇಖರಿಸಲಾಗಿದೆ. ಮೇ ಕೊನೆ ವಾರದೊಳಗೆ ಎಲ್ಲ ಬಿತ್ತನೆ ಬೀಜ ದಾಸ್ತಾನು ಮಾಡಲಾಗುವುದು. 6,500 ಮೆಟ್ರಿಕ್ ಟನ್ ರಸಗೊಬ್ಬರಕ್ಕೆ ಬೇಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ಯೂರಿಯಾ 450 ಟನ್, ಡಿಎಪಿ 350 ಟನ್, ಎಂಒಪಿ 85 ಟನ್, ಕಾಂಪ್ಲೆಕ್ಸ್ 1,000 ಟನ್ ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT