ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಗಳ ಪುಣ್ಯಸ್ಮರಣೆಯಲ್ಲಿ ಭಕ್ತರ ಅಭಿಪ್ರಾಯ

Last Updated 31 ಜನವರಿ 2019, 15:21 IST
ಅಕ್ಷರ ಗಾತ್ರ

ತುಮಕೂರು:ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ ಅವರ ಸ್ಮರಣೋತ್ಸವದಲ್ಲಿ ಭಕ್ತರು ಶ್ರೀಗಳ ಕುರಿತಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಶ್ರೀಗಳು ಆತ್ಮೀಯರು

ನನಗೆ 73 ವರ್ಷ. ನನಗೂ ಮಠಕ್ಕೂ 68 ವರ್ಷಗಳ ಸಂಬಂಧ ಇದೆ. ಅಷ್ಟು ವರ್ಷ ಶ್ರೀಗಳು ತುಂಬಾ ಆತ್ಮೀಯರು. 111 ವರ್ಷಗಳಾದರೂ ನನ್ನನ್ನು ಗುರುತಿಸುತ್ತಿದ್ದರು. ಪ್ರತಿ ವರ್ಷ ಶ್ರೀಗಳ ಜನ್ಮದಿನದಂದು ಪೂಜೆ ಮಾಡಿಸುತ್ತಿದ್ದೆ. ಅದನ್ನು ‌ಮುಂದುವರಿಸುತ್ತೇನೆ. ಅವರು ವಾಚಿಸುತ್ತಿದ್ದ ಬಸವಣ್ಣನವರ ವಚನಗಳನ್ನು ನಿತ್ಯ ವಾಚಿಸುತ್ತಿದ್ದೇವೆ.

–ಲಲಿತಾ ಮೋಹನ್‌, ಊರುಕೇರಿ, ತುಮಕೂರು

ಭಕ್ತರ ಸಂಖ್ಯೆ ಕಡಿಮೆ ಆಗಿಲ್ಲ

ಸಿದ್ಧಗಂಗಾ ಮಠ ನಮಗೆ ಮನೆ ಇದ್ದಂತೆ. ನಮ್ಮ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆದರೂ ಶ್ರೀಗಳ ಆಶೀರ್ವಾದ ಇಲ್ಲದೆ ಏನು ನಡೆಸುವುದಿಲ್ಲ. ಅವರಿಲ್ಲದಿದ್ದರೂ ಮಠದಲ್ಲಿ ಯಾವುದೇ ಕೊರತೆ ಇಲ್ಲ. ಭಕ್ತರ ಸಂಖ್ಯೆಯೂ ಕಡಿಮೆ ಆಗಿಲ್ಲ. ನಾಡಿನಲ್ಲಿ ಯಾರ ಪುಣ್ಯಸ್ಮರಣೆಗೂ ಸಹ ಇಷ್ಟು ಭಕ್ತರು ಬಂದಿರಲಿಲ್ಲ. ಮೊದಲ ಬಾರಿಗೆ ಇಷ್ಟು ಭಕ್ತರನ್ನು ಕಾಣುತ್ತಿದ್ದೇನೆ.

ನಾಗರತ್ನ, ಎಸ್‌ಐಟಿ, ತುಮಕೂರು

ಶಾಲೆ ಸಮಯದಲ್ಲಿ ಆಶೀರ್ವಾದ

ನಾನು ಪ್ರಾಥಮಿಕ ಹಂತದಿಂದ ಕಾಲೇಜು ಶಿಕ್ಷಣದವರೆಗೂ ಸಿದ್ಧಗಂಗಾ ಸಂಸ್ಥೆಯಲ್ಲಿಯೇ ಓದಿದ್ದೇನೆ. ಸ್ಕೂಲ್‌ಗೆ ಹೋಗುವ ಸಮಯದಲ್ಲಿ ಶ್ರೀಗಳು ಕಚೇರಿಯಲ್ಲಿ ಕುಳಿತ್ತಿದ್ದರೂ ಇಲ್ಲದಿದ್ದರೂ ಅವರ ಪಾದರಕ್ಷೆಗೆ ನಮಸ್ಕರಿಸಿ ತೆರಳುತ್ತಿದ್ದೆ.

ದಯಾಮಣಿ, ಇರಕಸಂದ್ರ, ಗುಬ್ಬಿ

ದೇವರು ಬಿಟ್ಟು ಹೋಗಿಲ್ಲ

ನಡೆದಾಡುವ ದೇವರು ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ನಮ್ಮ ನಡುವೆಯೇ ಮಠದಲ್ಲಿ ಇದ್ದಾರೆ ಎನಿಸುತ್ತಿದೆ. ಈ ಪುಣ್ಯಸ್ಮರಣೆಗೆ ಬಂದು ಪ್ರಸಾದ ಸೇವಿಸುವುದೇ ಒಂದು ‍ಪುಣ್ಯ ಕಾರ್ಯ.

ರೂಪಶ್ರೀ, ಕಟ್ಟಿಗೇನಹಳ್ಳಿ, ತಿಪಟೂರು

ಶ್ರೀಗಳೇ ಮಾರ್ಗದರ್ಶನ

ನಮ್ಮ ಕರುನಾಡು ಶ್ರೀಗಳನ್ನು ಕಳೆದುಕೊಂಡು ಬಡವಾಗಿದೆ. ಆದರೆ ಇಂದು ಮಠದಲ್ಲಿ ನಡೆಯುತ್ತಿರುವ ಅಕ್ಷರ ಹಾಗೂ ಅನ್ನದಾಸೋಹ ನಮಗೆಲ್ಲರಿಗೂ ಸೇವಾ ಭಾವನೆ ಇಮ್ಮಡಿಗೊಳಿಸಿದೆ. ನಮಗೆ ಶ್ರೀಗಳೇ ಇಂದಿಗೂ ಮಾರ್ಗದರ್ಶನ ಮಾಡುತ್ತಿದ್ದಾರೆ.

ನವ್ಯಾ, ಬೆಂಗಳೂರು

ಶಿವನಲ್ಲೇ ಐಕ್ಯರಾದ ಭಾವನೆ

ನಾವು ಮುರುಡೇಶ್ವರದಲ್ಲಿ ಇದ್ದರೂ ಕಲ್ಪತರು ನಾಡು ತುಮಕೂರು ನಮಗೆ ಪುಣ್ಯದ ಬೀಡು. ನಿತ್ಯವೂ ಸಿದ್ಧಗಂಗಾ ಶ್ರೀಗಳವರ ಭಾವಚಿತ್ರ ಪೂಜಿಸುತ್ತಾ ದಿನ ಪ್ರಾರಂಭವಾಗುತ್ತಿತ್ತು. ಇಂದು ಅವರು ನಮ್ಮ ಮುರುಡೇಶ್ವರದ ಶಿವನಲ್ಲೇ ಐಕ್ಯರಾಗಿದ್ದಾರೆ ಎಂಬ ಭಾವ ನಮ್ಮಲ್ಲಿದೆ.

ಸಿಂಧೂ ಸುಬ್ರಾಯ ಭಟ್ಟ, ಮುರುಡೇಶ್ವರ, ಉತ್ತರ ಕನ್ನಡ ಜಿಲ್ಲೆ

ಸಂಸ್ಕಾರ ಕಲಿಸಿದ ಗುರು

ಅನ್ನದಾಸೋಹ ಹಾಗೂ ಶಿಕ್ಷಣದ ಜೊತೆಗೆ ಸಂಸ್ಕಾರ ಕಲಿಸಿದ್ದ ಸಿದ್ಧಗಂಗಾ ಶ್ರೀಗಳು ನಮಗೆ ಸ್ಫೂರ್ತಿ. ಇಂದಿನ ಸಮಾಜಕ್ಕೆ ಅವರ ವಿಚಾರದ ಮೌಲ್ಯಗಳು ಅಗತ್ಯ ಹಾಗೂ ಅನಿವಾರ್ಯ.

ಅನಿತಾ ಅಶೋಕ್‌, ಬಾಗಲಕೋಟೆ

ನಮಗೆ ದೇವರು

ಶಿವಕುಮಾರ ಸ್ವಾಮೀಜಿ ಅವರೇ ನಮಗೆ ದೇವರು. ಪ್ರತಿವರ್ಷ ಮಠಕ್ಕೆ ಬಂದು ಅವರ ಆಶೀರ್ವಾದ ಪಡೆದುಕೊಳ್ಳುತ್ತಿದ್ದೆ. ಆದರೆ ಇಂದು ಅವರಿಲ್ಲದ ಕೊರಗು ಕಾಡುತ್ತಿದೆ. ಪುಣ್ಯಸ್ಮರಣೆಗೆ ಬಂದು ಪ್ರಸಾದ ಸೇವಿಸುವುದೇ ಒಂದು ಪುಣ್ಯ.

ಬಸವರಾಜು, ಹುಳಿಯಾರು

ಅಕ್ಷರ, ಅನ್ನದಾಸೋಹ ಮುಂದುವರಿಯಲಿ

ಶಿವಕುಮಾರ ಸ್ವಾಮೀಜಿ ನೆಲೆಸಿದ್ದ ಈ ಜಿಲ್ಲೆಯಲ್ಲಿ ನಾವು ಜೀವಿಸುತ್ತಿರುವುದು ನಮ್ಮ ಭಾಗ್ಯ. ಅವರ ನಿಸ್ವಾರ್ಥ ಸೇವೆಯೇ ಇಂದು ಇಷ್ಟು ಭಕ್ತರನ್ನು ಪಡೆಯಲು ಸಾಧ್ಯ. ಮಠದಲ್ಲಿ ಇದೇ ರೀತಿಯಲ್ಲಿ ಅಕ್ಷರ ಅನ್ನದಾಸೋಹ ಮುಂದುವರಿಯಲಿ

ಗಂಗಣ್ಣ, ಗೂಳೂರು.

ಮಕ್ಕಳಿಗೆ ಆಶೀರ್ವಾದ

ಶ್ರೀಗಳು ಯಾವುದೇ ಜಾತಿ ಬೇಧ ಮಾಡದೆ ಬಡವರ ಸಾವಿರಾರು ಮಕ್ಕಳಿಗೆ ಅನ್ನ ಅಕ್ಷರ ಕಲ್ಪಿಸಿದ್ದಾರೆ. ನಮ್ಮ ಮಕ್ಕಳು ಅವರ ಆಶೀರ್ವಾದದಲ್ಲಿ ಬೆಳೆಯುತ್ತಿರುವುದು ಈ ಜನ್ಮದಲ್ಲಿ ನಮಗೆ ಸಿಕ್ಕ ಪುಣ್ಯ ಎಂದು ಭಾವಿಸಿದ್ದೇನೆ.

ನಿಂಗಪ್ಪ, ಧಾರವಾಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT