ಶುಕ್ರವಾರ, ಆಗಸ್ಟ್ 19, 2022
22 °C
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ; ಸಚಿವ ಕೆ.ಸಿ.ನಾರಾಯಣಗೌಡ ಸೂಚನೆ

ರೇಷ್ಮೆ ಬೆಳೆಗಾರರಿಗೆ ಅನುಕೂಲ ಜಾಗ ಗುರುತಿಸಿ: ಸಚಿವ ಕೆ.ಸಿ.ನಾರಾಯಣಗೌಡ ಸೂಚನೆ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ರೇಷ್ಮೆ ಬೆಳೆಯುತ್ತಿದ್ದರೆ ಬೆಳೆಗಾರರಿಗೆ ಅನುಕೂಲ ಆಗುವಂತೆ ರೇಷ್ಮೆ ಮಾರಾಟ ಮತ್ತು ಖರೀದಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬಹುದು. ಅದಕ್ಕಾಗಿ ಜಿಲ್ಲೆಯಲ್ಲಿ ರೇಷ್ಮೆ ಇಲಾಖೆಗೆ ಒಳಪಡುವ ಜಾಗ ಗುರುತಿಸಿ ಜಿಲ್ಲಾಧಿಕಾರಿಗೆ ಪತ್ರ ಬರೆಯಿರಿ. ನಂತರ ಪ್ರಗತಿ ಕಾಮಗಾರಿಗಳ ಬಗ್ಗೆ ಪ್ರಸ್ತಾವ ಸಲ್ಲಿಸಿ ಎಂದು ರೇಷ್ಮೆ ಇಲಾಖೆ ಅಧಿಕಾರಿಗಳಿಗೆ ಪೌರಾಡಳಿತ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ಸಚಿವ ಕೆ.ಸಿ.ನಾರಾಯಣಗೌಡ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಕುಣಿಗಲ್ ಮತ್ತು ತುಮಕೂರು ತಾಲ್ಲೂಕಿನ ಹೆಬ್ಬೂರು ಹೋಬಳಿಯ ಮೈಸೂರು ಬಿತ್ತನೆ ಪ್ರದೇಶದಲ್ಲಿ 911.56 ಹೆಕ್ಟೇರ್ ಪ್ರದೇಶದಲ್ಲಿ ಶುದ್ಧ ಮೈಸೂರು ರೇಷ್ಮೆ ಬೆಳೆಯುತ್ತಿದ್ದಾರೆ’ ಎಂದರು.

ತಿಪಟೂರು, ತುರುವೇಕೆರೆ ಹಾಗೂ ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳು ದ್ವಿತಳಿ ಬಿತ್ತನೆ ಪ್ರದೇಶವಾಗಿವೆ. ವಿಶೇಷ ಕ್ಲಸ್ಟರ್ ಅಭಿವೃದ್ಧಿ ಯೋಜನೆಯಡಿ 19.347 ಲಕ್ಷ ದ್ವಿತಳಿ ಸಂಕರಣ ಮೊಟ್ಟೆ ಚಾಕಿ ಮಾಡಿ 1,274 ಮೆಟ್ರಿಕ್ ಟನ್ ಗೂಡು ಉತ್ಪಾದನೆ ಮಾಡಲಾಗಿದೆ. ಒಟ್ಟು ಶೇ 79 ದ್ವಿತಳಿ ಗೂಡು ಉತ್ಪಾದಿಸಿ ರಾಜ್ಯದಲ್ಲಿ 2ನೇ ಸ್ಥಾನ ಪಡೆದಿದೆ ಎಂದು ರೇಷ್ಮೆ ಇಲಾಖೆ ಉಪನಿರ್ದೇಶಕರು ಸಚಿವರಿಗೆ ಮಾಹಿತಿ ನೀಡಿದರು.

ಲಾಕ್‌ಡೌನ್ ಅವಧಿಯಲ್ಲಿ ತಾಲ್ಲೂಕು ಮಟ್ಟದಲ್ಲಿ ರೈತರಿಂದ ನೇರವಾಗಿ ಹಣ್ಣು-ತರಕಾರಿಗಳನ್ನು ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡಿದ್ದೇವೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಘು ಮಾಹಿತಿ ನೀಡಿದರು. ಆಗ ಸಚಿವರ ಕೊರೊನಾ ಸಂದರ್ಭದಲ್ಲಿ ಹಣ್ಣು-ತರಕಾರಿಗಳನ್ನು ರೈತರಿಂದ ಖರೀದಿಸಿ ಮಾರಾಟ ಮಾಡಿರುವುದರಲ್ಲಿ ರಾಜ್ಯದಲ್ಲಿ ತುಮಕೂರು 2ನೇ ಸ್ಥಾನದಲ್ಲಿ ಇದೆ ಎಂದು ಸಂತಸ ವ್ಯಕ್ತಪಡಿಸಿದರು.

ಪ್ರಸ್ತುತ ಡ್ರ್ಯಾಗನ್ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ. ಶಿರಾ ಮತ್ತು ತುರವೇಕೆರೆ ತಾಲ್ಲೂಕಿನಲ್ಲಿ ಬೆಳೆಯಲಾಗುತ್ತಿದೆ. ಈ ಹಣ್ಣನ್ನು ಬೆಳೆಯುವ ರೈತರಿಗೆ ಪ್ರೋತ್ಸಾಹಧನ ನೀಡಬೇಕು. ನಿಂಬೆ ಬೆಳೆಗಾರರಿಗೆ ಅನುಕೂಲ ಆಗುವಂತೆ ಘಟಕ ಸ್ಥಾಪಿಸಲು ಪ್ರಸ್ತಾವ ಸಲ್ಲಿಸಿ ಎಂದು ಸಚಿವರು ಸೂಚಿಸಿದರು.

ಪೌರಾಡಳಿತಕ್ಕೆ ಸಂಬಂಧಪಟ್ಟಂತೆ ಎಸ್.ಎಫ್.ಸಿ (ಕುಡಿಯುವ ನೀರು)ಗಾಗಿ ₹ 1.50 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ ನಗರ ಸ್ಥಳೀಯ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ₹ 1 ಕೋಟಿ ಖರ್ಚು ಮಾಡಲಾಗಿದೆ. ನೀರಿನ ತೆರಿಗೆ ವಸೂಲಿ ₹ 9 ಕೋಟಿ ನಿಗದಿಯಾಗಿದ್ದು ₹1 ಕೋಟಿ ತೆರಿಗೆ ವಸೂಲಿ ಮಾಡಲಾಗಿದೆ ಎಂದು ಪೌರಾಡಳಿತ ಯೋಜನಾ ಅಧಿಕಾರಿ ಬಿ.ಶುಭಾ ಸಚಿವರಿಗೆ ಮಾಹಿತಿ ನೀಡಿದರು.

ಕೃಷಿಗೆ ಪ್ರವಾಸೋದ್ಯಮ ಸ್ಪರ್ಶ ನೀಡಲು ಅಗ್ರಿ ಟೂರಿಸಂ ಯೋಜನೆ ರೂಪಿಸಲು ಚಿಂತನೆ ನಡೆಸುತ್ತಿದೆ. ಅಗ್ರಿ ಟೂರಿಸಂ ಯೋಜನೆಯಿಂದ ನಗರ ಪ್ರದೇಶದಲ್ಲಿರುವ ಯುವ ಪೀಳಿಗೆಗೆ ಕೃಷಿ ಆಧಾರಿತ ಚಟುವಟಿಕೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್, ಶಾಸಕರಾದ ಮಸಾಲ ಜಯರಾಂ, ಎಂ.ವಿ.ವೀರಭದ್ರಯ್ಯ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ ಹಾಗೂ ಅಧಿಕಾರಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.