ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಎಚ್.ರಸ್ತೆ: ರಸ್ತೆ ವಿಭಜಕ ತೆರವುಗೊಳಿಸಲು ಮನವಿ

ಜಿಲ್ಲಾ ಪಂಚಾಯಿತಿ ಕಚೇರಿ ತಿರುವಿನ ಬಳಿ ಇರುವ ವಿಭಜಕ, ಸಾರ್ವಜನಿಕಿಗರಿಗೆ ಹೆಚ್ಚಿದ ಕಿರಕಿರಿ
Last Updated 15 ಜುಲೈ 2019, 17:17 IST
ಅಕ್ಷರ ಗಾತ್ರ

ತುಮಕೂರು: ನಗರದ ಬಿ.ಎಚ್.ರಸ್ತೆಯಲ್ಲಿ ಜಿಲ್ಲಾ ಪಂಚಾಯಿತಿ ಕಚೇರಿ ತಿರುವಿನ ಬಳಿ ರಸ್ತೆ ವಿಭಜಕವನ್ನು ತೆರವುಗೊಳಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಆರ್. ವಿಶ್ವನಾಥನ್ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಬಿ.ಎಚ್.ರಸ್ತೆಯಲ್ಲಿ ರಸ್ತೆ ವಿಭಜಕ ನಿರ್ಮಿಸುವಾಗ ಜಿಲ್ಲಾ ಪಂಚಾಯಿತಿ ಕಚೇರಿ ತಿರುವಿನ ಬಳಿ ವಾಹನಗಳ ‘ಯು ಟರ್ನ್’ಗೆ ಅವಕಾಶ ಕಲ್ಪಿಸಲಾಗಿತ್ತು. ಇದರಿಂದ ಆಟೊ, ಕಾರು, ದ್ವಿಚಕ್ರ ವಾಹನಗಳು ಸೋಮೇಶ್ವರಪುರಂ ಮುಖ್ಯ ರಸ್ತೆಯಿಂದ ಸಿದ್ಧಗಂಗಾ ಬಡಾವಣೆ ಮೂಲಕ ಬಿ.ಎಚ್.ರಸ್ತೆ ದಾಟಿ ಕೋತಿ ತೋಪು ರಸ್ತೆಯನ್ನು ನೇರವಾಗಿ ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗಿತ್ತು. ಇದರಿಂದ ಬಿ.ಎಚ್. ರಸ್ತೆಯ ಮೇಲಿನ ವಾಹನ ದಟ್ಟಣೆ ಪ್ರಮಾಣವೂ ಕಡಿಮೆಯಾಗುತ್ತಿತ್ತು. ಆದರೆ, ಕೆಲ ವರ್ಷಗಳ ಬಳಿಕ ಯು ಟರ್ನ್ ಸ್ಥಳವನ್ನು ಕಲ್ಲುಗಳನ್ನಿಟ್ಟು ಮುಚ್ಚಲಾಯಿತು. ಇದರಿಂದ ಮಾರ್ಗದ ನೇರ ಸಂಪರ್ಕ ಬಂದ್ ಆಯಿತು. ಈ ಭಾಗದ ವಿರುದ್ಧ ದಿಕ್ಕಿನಲ್ಲಿ (ರಾಂಗ್ ಸೈಡ್) ಸಂಚರಿಸುವವರ ಸಂಖ್ಯೆ ಹೆಚ್ಚಾಯಿತು ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಸಿದ್ಧಗಂಗಾ ಬಡಾವಣೆಯ 4ನೇ ತಿರುವಿನ ಬಳಿ ಬಿ.ಎಚ್. ರಸ್ತೆಯ ವಿಭಜಕವು ಮುಕ್ತವಿದ್ದು, ಇದರಿಂದ ಉಪಯೋಗಕ್ಕಿಂತ ಅಪಾಯವೇ ಹೆಚ್ಚಾಗಿದೆ. ಏಕೆಂದರೆ ಆ ಸ್ಥಳದ ಮೂಲಕ ರಾಂಗ್ ಸೈಡ್‌ನಲ್ಲಿ ಎಲ್ಲ ರೀತಿಯ ವಾಹನಗಳೂ ಜಿಲ್ಲಾ ಪಂಚಾಯಿತಿ ತಿರುವಿನ ಕಡೆ ನುಗ್ಗುವುದು ಸಾಮಾನ್ಯವಾಗಿದ್ದು, ಈ ಸ್ಥಳವಂತೂ ಪ್ರಸ್ತುತ ಅತ್ಯಂತ ಅಪಾಯಕಾರಿಯಾಗಿ ಮಾರ್ಪಟ್ಟಿದೆ. ತೀರಾ ಇತ್ತೀಚೆಗೆ ಇಲ್ಲಿ ಸಿದ್ಧಗಂಗಾ ಆಸ್ಪತ್ರೆ ಆರಂಭವಾದ ಬಳಿಕ ಆ ಆಸ್ಪತ್ರೆಗೆ ತೆರಳುವ ಅಂಬುಲೆನ್ಸ್ ಒಳಗೊಂಡ ಎಲ್ಲ ವಾಹನಗಳೂ ಬಿ.ಎಚ್. ರಸ್ತೆಯ ಇನ್ನೊಂದು ಮಗ್ಗುಲಲ್ಲಿ ರಾಂಗ್ ಸೈಡ್‌ನಲ್ಲೇ ತೆರಳುತ್ತವೆ. ಇದೂ ಸಹ ಅಪಾಯಕಾರಿ ಸ್ಥಳವಾಗಿದೆ ಎಂದು ಸಮಸ್ಯೆ ವಿವರಿಸಿದ್ದಾರೆ.

ಬಿ.ಎಚ್. ರಸ್ತೆಯ ಶಿವಕುಮಾರ ಸ್ವಾಮೀಜಿ ವೃತ್ತದಿಂದ ಹಿಡಿದು ಶಂಕರಮಠದ ವೃತ್ತದವರೆಗೆ ರಸ್ತೆ ವಿಭಜಕ ಇದ್ದು, ಸಿದ್ಧಗಂಗಾ ಬಡಾವಣೆಯ 4ನೇ ತಿರುವಿನ ಬಳಿ ಮಾತ್ರ ಯು ಟರ್ನ್ ಗೆ ಅವಕಾಶ ಕಲ್ಪಿಸಿರುವುದು ಅವೈಜ್ಞಾನಿಕವಾಗಿದೆ ಹಾಗೂ ಸಂಚಾರ ದಟ್ಟಣೆಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ.

ಹೀಗಾಗಿ, ಸಿದ್ಧಗಂಗಾ ಬಡಾವಣೆಯ 4ನೇ ತಿರುವಿನ ಬಳಿ ಇರುವ ಈಗಿರುವ ಯು ಟರ್ನ್ ಸ್ಥಳವನ್ನು ಮುಚ್ಚಬೇಕು, ಇದಕ್ಕೆ ಬದಲಿಯಾಗಿ ಸಿದ್ಧಗಂಗಾ ಆಸ್ಪತ್ರೆಯ ಪ್ರವೇಶ ದ್ವಾರಕ್ಕೆ ಎದುರು ಬಿ.ಎಚ್.ರಸ್ತೆಯ ವಿಭಜಕವನ್ನು ತೆರವುಗೊಳಿಸಿ ಹೊಸದಾಗಿ ಯು ಟರ್ನ್‌ಗೆ ಅವಕಾಶ ಕಲ್ಪಿಸಬೇಕು, ಜಿಲ್ಲಾ ಪಂಚಾಯಿತಿ ತಿರುವಿನ ಬಳಿ ಹಾಕಿರುವ ಅಡ್ಡಗಲ್ಲುಗಳನ್ನು ತೆರವುಗೊಳಿಸಿ ಯು ಟರ್ನ್‌ ಗೆ ಅವಕಾಶ ಮಾಡಿಕೊಡಬೇಕು, ಸಿದ್ಧಗಂಗಾ ಆಸ್ಪತ್ರೆಯ ಪ್ರವೇಶ ದ್ವಾರದ ಮುಂದೆ ಮತ್ತು ಜಿಲ್ಲಾ ಪಂಚಾಯಿತಿ ಕಚೇರಿ ತಿರುವು ಇವೆರಡು ಸ್ಥಳಗಳಲ್ಲಿ ರಸ್ತೆ ವಿಭಜಕ ತೆರವು ಮಾಡಿ ಯು ಟರ್ನ್ ಗೆ ಅವಕಾಶ ಕೊಡುವ ಸಂದರ್ಭದಲ್ಲಿ ಬಿ.ಎಚ್. ರಸ್ತೆಯಲ್ಲಿ ಸುರಕ್ಷತೆ ದೃಷ್ಟಿಯಿಂದ ರಸ್ತೆ ಉಬ್ಬು ನಿರ್ಮಿಸಿ ( ಹಂಪ್ಸ್), ಸುರಕ್ಷತೆಗೆ ಅನುವು ಮಾಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT