ಮಂಗಳವಾರ, ನವೆಂಬರ್ 12, 2019
28 °C
ಮಾಜಿ ಸಚಿವ ಟಿ.ಬಿ.ಜಯಚಂದ್ರ ಭರವಸೆ

2 ವರ್ಷಗಳಲ್ಲಿ ಶಿರಾ ತಾಲ್ಲುಕಿಗೆ ಭದ್ರಾ ನೀರು: ಜಯಚಂದ್ರ ಭರವಸೆ

Published:
Updated:
Prajavani

ಶಿರಾ: ರೈತರು ಸಹಕಾರ ನೀಡಿದರೆ 2 ವರ್ಷದಲ್ಲಿ ಭದ್ರಾ ನೀರು ಶಿರಾ ತಾಲ್ಲೂಕಿಗೆ ಬರಲಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ಭದ್ರಾ ಜಲಾಶಯದಿಂದ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ನೀರು ಹರಿಸುವ ಭದ್ರಾ ಮೇಲ್ಡಂಡೆ ಕಾಮಗಾರಿಯನ್ನು ಸೋಮವಾರ ಶಿರಾ ತಾಲ್ಲೂಕಿನ ಜನ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜೊತೆ ವೀಕ್ಷಿಸಿ ಮಾತನಾಡಿದರು.

ಶಿರಾ ತಾಲ್ಲೂಕಿಗೆ ಭದ್ರಾ ನೀರು ಬರುವುದು ಖಚಿತ. ಕಾಮಗಾರಿ ತ್ವರಿತವಾಗಿ ನಡೆದರೆ ಬೇಗ ನೀರು ಹರಿಯುವುದು ಎಂದರು.

ತಾಲ್ಲೂಕಿನ 41 ಕೆರೆಗಳಿಗೆ ಭದ್ರಾ ನೀರು ಹರಿಯುವುದರಿಂದ ತಾಲ್ಲೂಕಿನ ಚಿತ್ರಣ ಸಂಪೂರ್ಣವಾಗಿ ಬದಲಾಗುವುದು. ಈಗಾಗಲೇ ಹೇಮಾವತಿ ನೀರು ತಾಲ್ಲೂಕಿಗೆ ಬರುತ್ತಿದೆ. ಇದರ ಜೊತೆಗೆ ಭದ್ರಾ ಹಾಗೂ ಎತ್ತಿನ ಹೊಳೆ ಯೋಜನೆಗಳಲ್ಲಿ ನೀರು ಹರಿಸಿ ತಾಲ್ಲೂಕನ್ನು ತ್ರಿವೇಣಿ ಸಂಗಮ ಮಾಡಲಾಗುವುದು. ತಾಲ್ಲೂಕು ಒಟ್ಟು 14,558 ಹೆಕ್ಟೇರ್ ನೀರಾವರಿ ಪ್ರದೇಶವಾಗಲಿದೆ. ಇದರಿಂದಾಗಿ ರೈತರ ಸ್ಥಿತಿ ಉತ್ತಮವಾಗುವುದು ಎಂದರು.

ಟೆಂಡರ್: ತುಮಕೂರು ನಾಲೆಯು ₹ 350 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದ್ದು, ಕಾಮಗಾರಿ ಟೆಂಡರ್ ಹಂತದಲ್ಲಿದೆ. ಈ ಸಮಯದಲ್ಲಿ ಜನಪ್ರತಿನಿಧಿಗಳು ರೈತರ ಮನವೊಲಿಸಿ ಜಮೀನನ್ನು ಬಿಡಿಸಿಕೊಡುವ ಕೆಲಸ ಮಾಡಬೇಕು. ಆಗ ಕಾಮಗಾರಿ ಸುಲಭವಾಗಿ ನಡೆಯುವುದು ಎಂದರು.

ಈ ಯೋಜನೆಯ ಅನುಷ್ಠಾನಕ್ಕಾಗಿ 4 ದಶಕಗಳ ಹೋರಾಟಕ್ಕೆ ಈಗ ಫಲ ದೊರೆಯುವಂತಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ನಾನು ಕಾನೂನು ಸಚಿವನಾಗಿ ಯೋಜನೆ ತ್ವರಿತವಾಗಿ ನಡೆಯಲಿ ಎಂದು ವಿಶೇಷ ಅಧಿಕಾರಿಗಳನ್ನು ನೇಮಿಸಿ ಯೋಜನೆಯ ಮಾಹಿತಿ ಪಡೆಯಲಾಗುತ್ತಿತ್ತು. ಅದ್ದರಿಂದ ಯೋಜನೆ ತ್ವರಿತವಾಗಿ ನಡೆಯುತ್ತಿತ್ತು. ಆದರೆ, ಸರ್ಕಾರಗಳು ಬದಲಾವಣೆಯಾದ ನಂತರ ಯೋಜನೆ ಮಂದಗತಿಯಲ್ಲಿ ಸಾಗುವಂತಾಗಿರುವುದು ವಿಷಾದನೀಯ ಎಂದು ಹೇಳಿದರು.

ನೀರಾವರಿ ವಿಚಾರದಲ್ಲಿ ರಾಜಕಾರಣವನ್ನು ಪಕ್ಕಕ್ಕೆ ಇಟ್ಟು ಕೆಲಸ ಮಾಡಬೇಕು. ನೀರು ಹರಿಸುವ ಇಚ್ಚಾಶಕ್ತಿ ಮೂಡಿದರೆ ಮಾತ್ರ ನೀರು ಹರಿಯುವುದು. ಇಲ್ಲದಿದ್ದರೆ ಜನತೆ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದರು.

ಪ್ರತಿಕ್ರಿಯಿಸಿ (+)