ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಗೆ ದೇವೇಗೌಡರ ಕೊಡುಗೆ ಏನು?

ಹೊನ್ನುಡಿಕೆ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ; ಬಿ.ಸುರೇಶಗೌಡ ಪ್ರಶ್ನೆ
Last Updated 10 ಏಪ್ರಿಲ್ 2019, 17:21 IST
ಅಕ್ಷರ ಗಾತ್ರ

ತುಮಕೂರು: ಜಿಲ್ಲೆಗೆ ದೇವೇಗೌಡರ ಕೊಡುಗೆ ಏನು ಎಂದು ಕೇಳುವ ಹಕ್ಕು ಜಿಲ್ಲೆಯ ಜನರಿಗೆ ಇದೆ. ನಮ್ಮ ಜನರಿಗೆ ಹೇಮಾವತಿ ನೀರು ನೀಡದೆ ತೊಂದರೆ ನೀಡಿರುವುದೇ ನಿಮ್ಮ ಕೊಡುಗೆ ಅಲ್ಲವೇ ಎಂದು ಮಾಜಿ ಶಾಸಕ ಬಿ.ಸುರೇಶಗೌಡ ಟೀಕಿಸಿದರು.

ಗ್ರಾಮಾಂತರ ಕ್ಷೇತ್ರದ ಹೊನ್ನುಡಿಕೆ ಗ್ರಾಮದ ಹೊನ್ನಾದೇವಿ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘ಹೇಮಾವತಿ ತುಂಬಿ ಹೆಚ್ಚಾದ ನೀರನ್ನು ಸಮುದ್ರಕ್ಕೆ ಹರಿಯಲು ಬಿಟ್ಟರೇ ಹೊರತು ನಮ್ಮ ಜಿಲ್ಲೆಗೆ ನೀರನ್ನು ಹಾಸನದವರು ಹರಿಸಲಿಲ್ಲ. ಅಷ್ಟೊಂದು ದ್ವೇಷ ಕಾರಲು ನಮ್ಮ ಜಿಲ್ಲೆಯ ಜನರು ನಿಮಗೆ ಮಾಡಿರುವ ದ್ರೋಹವಾದರು ಏನು, ಇದನ್ನು ಪ್ರಶ್ನೆ ಮಾಡಬಾರದ’ ಎಂದರು.

‘ಹಾಸನದವರಾದ ನೀವು ನೀಡಿರುವ ನೂರಾರು ತೊಂದರೆಗಳನ್ನು ಎಳೆ ಏಳೆಯಾಗಿ ಉದಾಹರಣೆ ಸಮೇತ ಜನರ ಮುಂದೆ ಇಟ್ಟರೆ ನನ್ನ ವಿರುದ್ಧ ಪಿತೂರಿ ಮಾಡಿ ಮೊಕದ್ದಮೆ ದಾಖಲು ಮಾಡಿಸುತ್ತೀರಾ. ಇಂತಹ ದೂರುಗಳಿಗೆ ಬಗ್ಗುವ ಜಗ್ಗುವ ಮಾತೇ ಇಲ್ಲ. ನನ್ನ ಜಿಲ್ಲೆಯ ಜನರಿಗಾಗಿ ಜೈಲಿಗೆ ಹೋಗಲು ಸಿದ್ದ’ ಎಂದು ನುಡಿದರು.

‘ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ನನಗೆ ವೈಯಕ್ತಿಕವಾಗಿ ಗೌರವ ಇದೆ. ಆದರೆ ರಾಜಕಾರಣ ಅಂತ ಬಂದಾಗ ನಾನು ಬಿಜೆಪಿ ಅವರು ಜೆಡಿಎಸ್. ನಾನು ನನ್ನ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಲು ಸಾಧ್ಯವೇ? ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು’ ಎಂದರು.

ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು ಮಾತನಾಡಿ, ‘ಶಾಸಕ ಡಿ.ಸಿ.ಗೌರಿಶಂಕರ ಪುಂಡಾಟಿಕೆ ಎಲ್ಲೆ ಮೀರಿದೆ. ಜನ ಜಾನುವಾರುಗಳಿಗೆ ಕುಡಿಯುವ ನೀರಿಲ್ಲ. ಒಂದೇ ಒಂದು ರೂಪಾಯಿ ಅಭಿವೃದ್ಧಿ ಮಾಡಿಲ್ಲ’ ಎಂದು ಹೇಳಿದರು.

‘ಗ್ರಾಮಾಂತರ ಕ್ಷೇತ್ರದಲ್ಲಿ ಸುರೇಶಗೌಡರು ಮಾಡಿರುವ ಅಭಿವೃದ್ಧಿ ಕೆಲಸಗಳು ನನಗೆ ಶ್ರೀರಕ್ಷೆ. ಈ ಕ್ಷೇತ್ರದಿಂದ ಅತೀ ಹೆಚ್ಚು ಮತಗಳನ್ನು ಕೊಡಿಸುವ ಶಕ್ತಿ ಸಾಮರ್ಥ್ಯ ಸುರೇಶಗೌಡರಲ್ಲಿ ಮತ್ತು ಇಲ್ಲಿನ ಕಾರ್ಯಕರ್ತರಲ್ಲಿ ಇದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಶಾಸಕರಾದ ನೆ.ಲ.ನರೇಂದ್ರಬಾಬು, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಶಾರದಾ ನರಸಿಂಹಮೂರ್ತಿ, ಜಿ.ಪಂ ಸದಸ್ಯರಾದ ಗೂಳೂರು ಶಿವಕುಮಾರ್, ವೈ.ಎಚ್ ಹುಚ್ಚಯ್ಯ, ಅನಿತಾ ಸಿದ್ದೇಗೌಡ, ರಾಜೇಗೌಡ, ಮುಖಂಡರಾದ ರಾಮಚಂದ್ರಪ್ಪ, ಲಕ್ಷ್ಮೀಶ, ಸಿದ್ದೇಗೌಡ, ಶಿವರಾಜು, ಸಾಸಲು ಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT