ಸೋಮವಾರ, ಆಗಸ್ಟ್ 15, 2022
24 °C
ಮದಲೂರು ಕೆರೆಗೆ ನೀರು ಹರಿಸದಂತೆ ಮುಖ್ಯಮಂತ್ರಿ ಯಡಿಯೂರಪ್ಪಗೆ ಪತ್ರ ಬರೆದಿದ್ದ ಶಾಸಕರು

ಮದಲೂರಿಗೆ ನೀರು ಕೊಡಲ್ಲ ಎಂದಿದ್ದ ಬಿಜೆಪಿ ಶಾಸಕರು: ಕಾಂಗ್ರೆಸ್ ಕಾರ್ಯಕರ್ತರ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಶಿರಾ ತಾಲ್ಲೂಕಿನ ಕಳ್ಳಂಬೆಳ್ಳ ಕೆರೆಗೆ ಬ್ಯಾರೇಜ್ ನಿರ್ಮಿಸಿ ಮದಲೂರು ಹಾಗೂ ಇತರೆ 24 ಕೆರೆಗಳಿಗೆ ನೀರು ಹರಿಸಲು ಉದ್ದೇಶಿಸಿರುವ ಯೋಜನೆಯನ್ನು ರೂಪಿಸಲು ಸರ್ಕಾರ ಆಡಳಿತಾತ್ಮಕ ಅನುಮತಿ ನೀಡಿದೆ. ಇದನ್ನು ರದ್ದುಪಡಿಸಲು ಈ ಕೂಡಲೇ ತಾವು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಆದೇಶಿಸಬೇಕು ಎಂದು 2010ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ, ಬಿಜೆಪಿ ಶಾಸಕರಾಗಿದ್ದ ಸೊಗಡು ಶಿವಣ್ಣ, ಬಿ.ಸುರೇಶ್ ಗೌಡ ಹಾಗೂ ಬಿ.ಸಿ.ನಾಗೇಶ್ ಬರೆದಿದ್ದ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಶಿರಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುವ ಈ ಹೊತ್ತಿನಲ್ಲಿ ಈ ಪತ್ರವನ್ನು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಿಜೆಪಿ ನಾಯಕರು ಈಗ ಮದಲೂರು ಕೆರೆಗೆ ನೀರು ಹರಿಸುವ ವಿಚಾರದಲ್ಲಿ ನಾಟಕವಾಡುತ್ತಿದ್ದಾರೆ ಎಂದು ಟೀಕಿಸುತ್ತಿದ್ದಾರೆ.

ಮದಲೂರು ಕೆರೆ ಕೃಷ್ಣ ಕೊಳ್ಳ ವ್ಯಾಪ್ತಿಗೆ ಬರುತ್ತದೆ. ಹೇಮಾವತಿ ನದಿಯು ಕಾವೇರಿ ಕಣಿವೆ ವ್ಯಾಪ್ತಿಗೆ ಬರುತ್ತದೆ. ಆದ ಕಾರಣ ಮದಲೂರು ಕೆರೆಗೆ ನೀರು ಹರಿಸುವುದು ಬೇಡ ಎಂದು ಅಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದ ಬಿಜೆಪಿ ನಾಯಕರು, ಈಗ ಉಪಚುನಾವಣೆ ವೇಳೆ ಮದಲೂರು ಕೆರೆಗೆ ನೀರು ಹರಿಸುವುದಾಗಿ ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗಳು ಮುಂದುವರಿದಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು