ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ ಆಡಳಿತ ಯಂತ್ರ ಕುಸಿತ; ಅಭಿವೃದ್ಧಿ ಶೂನ್ಯ

ನಿರ್ಲಕ್ಷ್ಯ ಮುಂದುವರಿದರೆ ಬೀದಿಗಿಳಿದು ಹೋರಾಟ,ಜಿಲ್ಲೆಯ ಬಿಜೆಪಿಯ ನಾಲ್ಕು ಶಾಸಕರ ಎಚ್ಚರಿಕೆ
Last Updated 4 ಅಕ್ಟೋಬರ್ 2018, 11:33 IST
ಅಕ್ಷರ ಗಾತ್ರ

ತುಮಕೂರು: ‘ಜಿಲ್ಲೆಯಲ್ಲಿ ಆಡಳಿತ ಸಂಪೂರ್ಣ ಕುಸಿತ ಕಂಡಿದ್ದು, ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಒಂದು ರೂಪಾಯಿ ಮೊತ್ತದ ಅಭಿವೃದ್ಧಿ ಕೆಲಸಗಳೂ ಆಗುತ್ತಿಲ್ಲ. ಅಧಿಕಾರಿಗಳು ಮನ ಬಂದಂತೆ ಕೆಲಸ ಮಾಡುತ್ತಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ನಾವು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಜಿಲ್ಲೆಯ ನಾಲ್ವರು ಬಿಜೆಪಿ ಶಾಸಕರು ಸರ್ಕಾರಕ್ಕೆ ಗುರುವಾರ ಎಚ್ಚರಿಕೆ ನೀಡಿದರು.

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕನಾಯಕನಹಳ್ಳಿ ಶಾಸಕ ಜೆ.ಸಿ,ಮಾಧುಸ್ವಾಮಿ, ತಿಪಟೂರು ಶಾಸಕ ಬಿ.ಸಿ.ನಾಗೇಶ್, ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಹಾಗೂ ತುಮಕೂರು ಶಾಸಕ ಜಿ.ಬಿ.ಜ್ಯೋತಿಗಣೇಶ್ ಅವರು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ಎಸ್.ಆರ್.ಶ್ರೀನಿವಾಸ್, ವೆಂಕಟರಮಣಪ್ಪ ಆಡಳಿತ ಯಂತ್ರ ಚುರುಕುಗೊಳಿಸುತ್ತಾರೆ. ಅಭಿವೃದ್ಧಿ ಕೆಲಸಗಳು ವೇಗ ಪಡೆಯುತ್ತವೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ, ಅದು ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಐದು ತಿಂಗಳಾದರೂ ಒಂದೇ ಒಂದು ಕೆಡಿಪಿ ಸಭೆ ಕರೆದಿಲ್ಲ. ಹೇಮಾವತಿ ಜಲಾಶಯ ಭರ್ತಿಯಾಗಿ ಜಿಲ್ಲೆಗೆ ಹೇಮಾವತಿ ನೀರು ಹರಿದರೂ ಎಲ್ಲಿ ಹೋಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ. ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಸೇರಿದಂತೆ ರಾಜ್ಯ ಸರ್ಕಾರದ ಯಾವುದೇ ಅಭಿವೃದ್ಧಿ ಕೆಲಸಗಳೂ ಆಗುತ್ತಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದ ಬಳಿ ಹಣವಿಲ್ಲ. ಮತ್ತೊಂದೆಡೆ ಅಧಿಕಾರಿಗಳಿಗೆ ಕೆಲಸ ಮಾಡುವ ಮನಸ್ಸಿಲ್ಲ ಎಂದು ಟೀಕಿಸಿದರು.

ಜಿಲ್ಲೆ ’ನಮ್ಮ ತಾಯಿ’ ಇದ್ದಂತೆ. ಹೀಗಾಗಿ ನಾವು ಸರ್ಕಾರದ ಆಡಳಿತ ಲೋಪದ ವಿರುದ್ಧ ಧ್ವನಿ ಎತ್ತಬೇಕಾಗಿದೆ. ಬಿಜೆಪಿ ಶಾಸಕರ ಕ್ಷೇತ್ರವಿರಲಿ. ಉಪಮುಖ್ಯಮಂತ್ರಿ ಪರಮೇಶ್ವರ ಅವರ ಕ್ಷೇತ್ರಗಳಲ್ಲೇ ಅಭಿವೃದ್ಧಿ ಕೆಲಸ ಆಗುತ್ತಿಲ್ಲ. ಕುಣಿಗಲ್ ಶಾಸಕ ಡಾ.ರಂಗನಾಥ್ ಆಡಳಿತ ಪಕ್ಷದ ಶಾಸಕರು. ಅವರೂ ಸಹ ತಮ್ಮ ಮಾತುಗಳನ್ನು ಅಧಿಕಾರಿಗಳು ಕೇಳುತ್ತಿಲ್ಲ. ಅಭಿವೃದ್ಧಿಗೆ ಬಂದ ಹಣ ಖರ್ಚಾಗುತ್ತಿಲ್ಲ. ಬರೀ ಸಬೂಬು, ಕಾರಣ ಹೇಳಿಕೊಂಡು ಕಾಲಹರಣ ಮಾಡುತ್ತಿದ್ದಾರೆ ಎಂದು ಗೋಳಾಡುತ್ತಿದ್ದಾರೆ ಎಂದು ಹೇಳಿದರು.

ಸಚಿವರಿಗೂ ಆಡಳಿತ ತೃಪ್ತಿ ಇಲ್ಲ: ಬುಧವಾರ ಜಿಲ್ಲೆಗೆ ಸಣ್ಣ ನೀರಾವರಿ ಸಚಿವ ಪುಟ್ಟರಾಜು ನಡೆಸಿದ ಸಭೆಯಲ್ಲಿ ಸಣ್ಣ ಕೈಗಾರಿಕೆ ಸಚಿವ ಎಸ್.ಆರ್.ಶ್ರೀನಿವಾಸ್ ಅವರೇ ‘ನಿಮ್ಮ ಇಲಾಖೆ ಜಿಲ್ಲೆಯಲ್ಲಿ ಸತ್ತು ಹೋಗಿದೆ. ಏನೂ ಕೆಲಸ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರೆ ಕಾರ್ಮಿಕ ಸಚಿವ ವೆಂಕಟರಮಣಪ್ಪ ಅವರು ಅಧಿಕಾರಿಗಳನ್ನು ಕಂಬಕ್ಕೆ ಕಟ್ಟಿ ಹಾಕಿಸುತ್ತೇನೆ ಎಂದ ಬಳಿಕ ಕೆಲಸ ಮಾಡಿದ್ದಾತೆ ಎಂದು ಹೇಳಿದ್ದಾರೆ. ಆಡಳಿತ ಯಂತ್ರ ಹದಗೆಟ್ಟು ಹೋಗಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ' ತಿಪಟೂರು ಶಾಸಕ ಬಿ.ಸಿ.ನಾಗೇಶ್ ಹೇಳಿದರು.

‘ಕಳೆದ ವರ್ಷಕ್ಕಿಂತ ಈ ವರ್ಷ ಜಿಲ್ಲೆಯಲ್ಲಿ ಹೆಚ್ಚು ಮಳೆ ಕೊರತೆಯಾಗಿದೆ. ಸರ್ಕಾರ ಬರ ಎಂದು ಘೋಷಣೆ ಮಾಡಿದೆಯಷ್ಟೇ. ಆದರೆ, ಕುಡಿಯುವ ನೀರಿನ ಸಮಸ್ಯೆ ಹೋಗಲಾಡಿಸಲು, ಮೇವು ಖರೀದಿ ಸೇರಿದಂತೆ ಬರಪರಿಹಾರಕ್ಕೆ ಹಣ ಒದಗಿಸಿಲ್ಲ’ ಎಂದು ಆರೋಪಿಸಿದರು.

’ಪ್ರತಿ ಜಿಲ್ಲೆಗೆ ₹ 5 ಕೋಟಿ, ಶಾಸಕರ ನೇತೃತ್ವದ ಕಾರ್ಯಪಡೆಗೆ ₹ 50 ಲಕ್ಷ ನೀಡಿದ್ದೇವೆ ಎಂಬ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರ ಹೇಳಿಕೆ ಸುಳ್ಳು. ಹಣವೇ ಬಂದಿಲ್ಲ. ಅಧಿಕಾರಿಗಳೂ ಬರಪರಿಹಾರ ಕಾರ್ಯಗಳತ್ತ ಗಮನವನ್ನೂ ಹರಿಸಿಲ್ಲ' ಎಂದು ದೂರಿದರು.

ಮಿತಿ ಮೀರಿದ ಅಕ್ರಮ ವ್ಯವಹಾರ: ತುರುವೇಕೆರೆ ತಾಲ್ಲೂಕಿನಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ದುಡ್ಡು ಕೊಟ್ಟರೆ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಪುರಾವೆಗಳೂ ಇವೆ. ಅಲ್ಲದೇ ತಾಲ್ಲುಕಿನ ಶಿಂಷಾ ನದಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ವ್ಯಾಪಕವಾಗಿದೆ. ಈ ಬಗ್ಗೆ ವಿಡಿಯೊ ಸಮೇತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೊಟ್ಟರೂ ಈವರೆಗೂ ಗಮನಹರಿಸಿಲ್ಲ ಎಂದು ಶಾಸಕ ಮಸಾಲಾ ಜಯರಾಮ್ ಆರೋಪಿಸಿದರು.

ಪಕ್ಷದ ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ಕೆ.ಟಿ.ಶಿವಪ್ರಸಾದ್ ಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT