ತುಮಕೂರು: ಹಾಲಿ ಶಾಸಕರೇ ಗ್ರಾಮಾಂತರ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ಕುಂತಲ್ಲಿ, ನಿಂತಲ್ಲಿ ಜನರು ನಿಮ್ಮನ್ನು ಹರಾಜು ಹಾಕುತ್ತಿದ್ದಾರೆ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಅವರು ಶಾಸಕ ಡಿ.ಸಿ.ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.
ತಾಲ್ಲೂಕಿನ ಬೆಳ್ಳಾವಿಯಲ್ಲಿ ಮಂಗಳವಾರ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಸುರೇಶ್‌ಗೌಡ ಶಾಸಕರಾಗಿದ್ದ ಸಮಯದಲ್ಲಿ ಹೆಚ್ಚಿನ ಅನುದಾನ ತಂದು ಕ್ಷೇತ್ರ ಅಭಿವೃದ್ಧಿ ಮಾಡಿದ್ದಾರೆ. ನೀರಾವರಿ ಯೋಜನೆಗಳ ಮೂಲಕ ಜನರಿಗೆ ನೆರವಾಗಿದ್ದಾರೆ. ಈಗಿನ ಶಾಸಕರು ಜನರಿಗೆ ವಂಚನೆ, ದೌರ್ಜನ್ಯ ಮಾಡಿ, ಸಂಪೂರ್ಣವಾಗಿ ಕ್ಷೇತ್ರದ ಜನರ ಹಿತ ಮರೆತಿದ್ದಾರೆ. ಅವರು ಕ್ಷೇತ್ರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಮುಂದೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಯಾವ ಲೆಕ್ಕ. ಹೋಲಿಸುವುದಕ್ಕೆ ಆಗುತ್ತಾ? ಇಡೀ ವಿಶ್ವ ಮೋದಿ ಕಡೆ ನೋಡುತ್ತಿದೆ. ಈಗ ದೇಶದಲ್ಲಿ ಕಾಂಗ್ರೆಸ್ ಎಲ್ಲಿದೆ? ಎಂದು ಪ್ರಶ್ನಿಸಿದರು.
ಮುಖಂಡ ಬಿ.ಸುರೇಶ್‌ಗೌಡ, ‘ಶಾಸಕನಾಗಿ ಆಯ್ಕೆಯಾದ ಒಂದು ತಿಂಗಳಲ್ಲಿ ಬಾಕಿ ಇರುವ ಬಗರ್ ಹುಕುಂ ಸಾಗುವಳಿ ಪತ್ರ ವಿತರಿಸಲಾಗುವುದು. ಬೆಳ್ಳಾವಿಯ ಗತ ವೈಭವ ಮರುಕಳಿಸುವಂತೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಬೆಳ್ಳಾವಿ ವ್ಯಾಪ್ತಿಯಲ್ಲಿ ಕೈಗಾರಿಕಾ ಹಬ್ ನಿರ್ಮಾಣವಾಗಲಿದೆ. ಇದರಿಂದ ಸುಮಾರು 4 ಲಕ್ಷ ಸ್ಥಳೀಯ ಯುವಕರಿಗೆ ಉದ್ಯೋಗ ಸಿಗಲಿದೆ’ ಎಂದು ಹೇಳಿದರು.
ಸಂಸದ ಜಿ.ಎಸ್.ಬಸವರಾಜು, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ನಂದೀಶ್, ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ರವಿಶಂಕರ್, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ಸಚ್ಚಿದಾನಂದಮೂರ್ತಿ, ವೈ.ಎಚ್.ಹುಚ್ಚಯ್ಯ, ಶ್ರೀಧರ್, ನಾಗರತ್ನಮ್ಮ, ರಾಜೇಗೌಡ, ನರಸಿಂಹಮೂರ್ತಿ, ಸುಮಿತ್ರಾದೇವಿ, ರಾಜೇಶ್‌ಗೌಡ, ಸಿದ್ದೇಗೌಡ, ಅರಕೆರೆ ರವೀಶ್, ಉಮೇಶ್‌ಗೌಡ ಮೊದಲಾದವರು ಉಪಸ್ಥಿತರಿದ್ದರು.
ತಾಲ್ಲೂಕಿನ ಬುಗುಡನಹಳ್ಳಿಯಿಂದ ಬೆಳ್ಳಾವಿಯ ವೇದಿಕೆ ಕಾರ್ಯಕ್ರಮದವರೆಗೆ ಬಿ.ಎಸ್.ಯಡಿಯೂರಪ್ಪ ರೋಡ್ ಶೋ ನಡೆಸಿದರು. ನೂರಾರು ಸಂಖ್ಯೆಯ ಕಾರ್ಯಕರ್ತರು ಬೈಕ್ ರ‍್ಯಾಲಿಯ ಮೂಲಕ ಬಿಜೆಪಿ ನಾಯಕರನ್ನು ಬರಮಾಡಿಕೊಂಡರು.
‘ಟೋಪಿ ಸುಲ್ತಾನ್’ ಆಗಲು ಹೊರಟ ಕಾಂಗ್ರೆಸ್
ಕಾಂಗ್ರೆಸ್ ಜನರ ಕಿವಿಗೆ ಹೂವು ಇಟ್ಟು, ಟೋಪಿ ಹಾಕಿ, ಏನಾದರೂ ಮಾಡಿ ಅಧಿಕಾರ ಗಿಟ್ಟಿಸಿಕೊಂಡು ‘ಟೋಪಿ ಸುಲ್ತಾನ್’ ಆಗಲು ಹೊರಟಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.
ಅಧಿಕಾರ ಇದ್ದಾಗ ವಿದ್ಯುತ್ ಕೇಳಿದವರನ್ನು ಜೈಲಿಗೆ ಕಳುಹಿಸಿದ ಡಿ.ಕೆ.ಶಿವಕುಮಾರ್ ಈಗ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರು ವಿಧಾನಸೌಧಕ್ಕೆ ಕಿವಿಯಲ್ಲಿ ಹೂವು ಇಟ್ಟಿಕೊಂಡು ಬಂದಿದ್ದರು. ಅದು ಅವರಿಗೆ ಚೆನ್ನಾಗಿ ಅಭ್ಯಾಸ ಆಗಿದ್ದು, ಈಗ ಜನರ ಕಿವಿಗೆ ಹೂವು ಇಡಲು ಹೊರಟಿದ್ದಾರೆ ಎಂದು ಕುಟುಕಿದರು.
ನಾವು ಪ್ರೋಗ್ರೆಸ್ ಕಾರ್ಡ್ ಕೊಟ್ಟರೆ, ಕಾಂಗ್ರೆಸ್‌ನವರು ಸುಳ್ಳು ಕಾರ್ಡ್ ಕೊಡುತ್ತಿದ್ದಾರೆ. ಅಧಿಕಾರದಲ್ಲಿ ಇದ್ದಾಗ ದೋಚುವ ಕೆಲಸ ಮಾಡಿದವರು ಈಗ ಸುಳ್ಳು ಕಾರ್ಡ್ ಹಂಚುತ್ತಿದ್ದಾರೆ. ಜೆಡಿಎಸ್‌ನವರು ಲಾಟರಿ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ಆಗಲು ಹೊರಟಿದ್ದಾರೆ. ಇದೆಲ್ಲವನ್ನೂ ಗಮನಿಸಿ ಮತ್ತೊಮ್ಮೆ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.