ಮಂಗಳವಾರ, ಸೆಪ್ಟೆಂಬರ್ 28, 2021
25 °C
ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೃದ್ರೋಗ ಕೇಂದ್ರದಲ್ಲಿ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ

ಬ್ಲೂ ಬೇಬಿ ಸಿಂಡ್ರೋಮ್: 6.5 ವರ್ಷದ ಬಾಲಕಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತುಮಕೂರು: ‘ಬ್ಲೂ ಬೇಬಿ ಸಿಂಡ್ರೋಮ್’ ಹೊಂದಿದ್ದ ನಗರದ ಆರೂವರೆ ವರ್ಷದ ಬಾಲಕಿಗೆ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಹೃದ್ರೋಗ ಕೇಂದ್ರದಲ್ಲಿ ವೈದ್ಯರು ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಸಂಕೀರ್ಣ ಸ್ಥಿತಿಯಲ್ಲಿ ಇದ್ದ ಬಾಲಕಿಗೆ ಶಸ್ತ್ರ ಚಿಕಿತ್ಸೆ ಮಾಡಿರುವುದು ತುಮಕೂರು ಭಾಗದಲ್ಲಿ ಇದೇ ಮೊದಲು ಎಂದು ‘ಸಾಹೇ’ ಕುಲಾಧಿಪತಿ ಡಾ.ಜಿ.ಪರಮೇಶ್ವರ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಹುಟ್ಟಿನಿಂದಲೇ ಬ್ಲೂ ಬೇಬಿ ಸಿಂಡ್ರೋಮ್ ಹೊಂದಿದ್ದ ಬಾಲಕಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಸುಮಾರು 5 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಮಗು ಈಗ ಸಂಪೂರ್ಣವಾಗಿ ಆರೋಗ್ಯವಾಗಿದೆ. ಹೃದಯ, ಶ್ವಾಸಕೋಶ ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಅತ್ಯಾಧುನಿಕ ಯಂತ್ರ, ವೈದ್ಯಕೀಯ ಸಾಧನಗಳನ್ನು ಬಳಸಿ ನಡೆಸಲಾದ ಅಪರೂಪದ ಶಸ್ತ್ರಚಿಕಿತ್ಸೆ ಇದಾಗಿದೆ ಎಂದು ಹೇಳಿದರು.

ರೋಗ ಲಕ್ಷಣ: ಜನಿಸುವಾಗಲೇ ಬ್ಲೂ ಬೇಬಿ ಸಿಂಡ್ರೋಮ್‌ನಿಂದ ಬಾಲಕಿ ಬಳಲುತ್ತಿದ್ದಳು. ಹೃದಯವು ಆಮ್ಲಜನಕಯುಕ್ತ ರಕ್ತವನ್ನು ಪ್ರತ್ಯೇಕಿಸಲು ಸಾಧ್ಯವಾಗುತ್ತಿರಲಿಲ್ಲ. ರಕ್ತ ಶ್ವಾಸ ಕೋಶಕ್ಕೆ ಹೋಗಿ ಶುದ್ಧಿಯಾಗಿ ವಾಪಸ್ ಹೃದಯಕ್ಕೆ ಬಂದು ರಕ್ತನಾಳದ ಮೂಲಕ ಸಂಚರಿಸುತ್ತಿರಲಿಲ್ಲ. ಶುದ್ಧ– ಅಶುದ್ಧ ರಕ್ತ ಎರಡೂ ಒಂದೇ ಸ್ಥಳದಲ್ಲಿ ಸೇರುತ್ತಿತ್ತು. ಇದರ ಪರಿಣಾಮವಾಗಿ ದೇಹದ ಪ್ರಮುಖ ಅಂಗಗಳಿಗೆ ಅಗತ್ಯವಾದ ಆಮ್ಲಜನಕದ ಪೂರೈಕೆ ಸಾಧ್ಯವಾಗುತ್ತಿರಲಿಲ್ಲ. ಇಂತಹ ಪರಿಸ್ಥಿತಿಯಿಂದ ಹೊರಬರಲು ಶಸ್ತ್ರಚಿಕಿತ್ಸೆ ನಡೆಸಲಾಯಿತು ಎಂದು ವಿವರಿಸಿದರು.

ಶಸ್ತ್ರ ಚಿಕಿತ್ಸೆ ನೇತೃತ್ವ ವಹಿಸಿದ್ದ ಕಾರ್ಡಿಯಾಕ್ ಫ್ರೊಂಟಿಟ್ ಸಂಸ್ಥೆ ನಿರ್ದೇಶಕ ಡಾ.ತಮೀಮ್ ಅಹಮದ್, ‘ಆಗಸ್ಟ್ 6ರಂದು ಬಾಲಕಿಗೆ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಹಾರ್ಟ್ ಸೆಂಟರ್‌ನಲ್ಲಿ ಈವರೆಗೂ 27 ತೆರೆದ ಹೃದಯ ಶಸ್ತ್ರಚಿಕಿತ್ಸೆ, 50ಕ್ಕೂ ಹೆಚ್ಚು ಆಂಜಿಯೋಪ್ಲಾಸ್ಟಿ, ಆಂಜಿಯೋಗ್ರಾಮ್ ಸೇರಿದಂತೆ 300ಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ ನೀಡಲಾಗಿದೆ’ ಎಂದು
ತಿಳಿಸಿದರು.

ವೈದ್ಯರಾದ ಅಬ್ದುಲ್, ವಾಸುದೇವ್ ಬಾಬು, ತಹೂರ್, ನವೀನ್, ಸುರೇಶ್, ಆಶಿತ ಕಾಮತ್, ನಾಗಾರ್ಜುನ, ವಿವೇಕ್, ಜಾನ್, ನಿಕಿತಾ ಶಸ್ತ್ರ ಚಿಕಿತ್ಸೆ ನಡೆಸಿದ ತಂಡದಲ್ಲಿ ಇದ್ದರು.

ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಮಹಾವಿದ್ಯಾಲಯದ ಸಿಇಒ ಡಾ.ದೇವದಾಸ್, ಪ್ರಾಂಶುಪಾಲ ಡಾ.ಎ.ಜಿ.ಶ್ರೀನಿವಾಸಮೂರ್ತಿ, ಡಾ.ಪ್ರಭಾಕರ್ ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು