ಸಂಯಮವೇ ಕವಿಯ ದೊಡ್ಡ ಸಂಪತ್ತು: ಡಾ.ಅಗ್ರಹಾರ ಕೃಷ್ಣಮೂರ್ತಿ

7
ಎಚ್.ಗೋವಿಂದಯ್ಯ ದ್ವಾರನಕುಂಟೆ ಅವರ ‘ಉರಿದ ಮರ’ ಕವನ ಸಂಕಲನ ಬಿಡುಗಡೆ ಸಮಾರಂಭದಲ್ಲಿ ವಿಮರ್ಶಕ ನುಡಿ

ಸಂಯಮವೇ ಕವಿಯ ದೊಡ್ಡ ಸಂಪತ್ತು: ಡಾ.ಅಗ್ರಹಾರ ಕೃಷ್ಣಮೂರ್ತಿ

Published:
Updated:
Deccan Herald

ತುಮಕೂರು: ‘ಸಂಯಮವೇ ಕವಿಗೆ ದೊಡ್ಡ ಸಂಪತ್ತು. ಇಂತಹ ಮನಸ್ಥಿತಿ ಇಟ್ಟುಕೊಂಡರೆ ಉತ್ತಮ ಕಾವ್ಯ ರಚನೆ ಕಡೆಗೆ ಸದಾ ಧ್ಯಾನ ಮಾಡುವ ಮನಸ್ಸು ಇರುತ್ತದೆ’ ಎಂದು ವಿಮರ್ಶಕ ಡಾ.ಅಗ್ರಹಾರ ಕೃಷ್ಣಮೂರ್ತಿ ಹೇಳಿದರು.

ಇಲ್ಲಿನ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಗರಿಕೆ ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಭಾನುವಾರ ಎಚ್.ಗೋವಿಂದಯ್ಯ ದ್ವಾರನಕುಂಟೆ ಅವರ ‘ಉರಿದ ಮರ’ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದರು.

’ನಾನು ಬರೆದಿದ್ದರೆ ಇಷ್ಟು ವರ್ಷಗಳಲ್ಲಿ ಎಷ್ಟೋ ಕವನಗಳನ್ನು ಬರೆಯಬಹುದಾಗಿತ್ತು. ಈಗ ಬರೆದಿದ್ದೇನೆ ಎಂದು ಗೋವಿಂದಯ್ಯ ಅವರು ಕವನ ಸಂಕಲನದಲ್ಲಿ ಹೇಳಿಕೊಂಡಿದ್ದಾರೆ. ಈ ಸಂಯಮವೇ ನಿಜವಾಗಿ ಕವಿಗಳಿಗೆ ಬೇಕಾಗಿರುವುದು. ಅಂತಹ ಮನಸ್ಥಿತಿಯಿಂದಲೇ ಇಂತ ಮಹತ್ವದ ಕೃತಿ ರಚನೆಯಾಗಲು ಕಾರಣ ಎಂದು ಭಾವಿಸಬಹುದು’ ಎಂದು ತಿಳಿಸಿದರು.

‘ಕವಿಯು ಕೃತಿಯಲ್ಲಿ ‘ಮರ’ದ ಕುರಿತು ಹೇಳುತ್ತಾರೆ. ಈ ಮರ ಎಂಬ ಹೆಸರು ಕೇಳಿದಾಗ ನಮ್ಮೂರಿನ ಹಿಪ್ಪೆ ಮರ, ಇನ್ನೊಬ್ಬರಿಗೆ ತಮ್ಮೂರಿನ ಮಾವಿನ ಮರ, ಆಲದ ಮರ ಹೀಗೆ ತಾವು ಕಂಡ ಮರಗಳು ಕಣ್ಣ ಮುಂದೆ ಹಾದು ಹೋಗುತ್ತವೆ’ ಎಂದರು.

‘ಮರ ಎಂದರೆ ಅದು ಅನೇಕ ಜೈವಿಕ ವ್ಯಾಪಾರಗಳ ನಿಲ್ದಾಣ. ಅದು ಮನೆಯ ಹಾಗೆಯೂ, ಪ್ರಪಂಚದ ಹಾಗೆಯೂ ಕಾಣಿಸುವಂತಹ ರೂಪಕ. ಆದರೆ, ಈ ಕವಿತೆಯಲ್ಲಿ ಕವಿ ಮರವನ್ನು ಕೇವಲ ಜೈವಿಕ ಮತ್ತು ಭೌತಿಕ ವಸ್ತುವಾಗಿ ನೋಡಿಲ್ಲ. ಜೇನಿಗಾಗಿ ಒಂದು ಮರವನ್ನು ಪ್ರಜ್ಞಾಪೂರ್ವಕವಾಗಿ ಅವನತಿಗೆ ತಳ್ಳುವ ಪ್ರಕ್ರಿಯೆ ಕುರಿತು ಕೃತಿಯಲ್ಲಿ ಉಲ್ಲೇಖಿಸಲಾಗಿದೆ. ಬದುಕನ್ನು, ಸಮಾಜವನ್ನು ಅವನತಿಗೆ ತಳ್ಳುವ ರೂಪಕವಾಗಿ ಕವಿ ಮರವನ್ನು ಬಳಸಿಕೊಂಡಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಭಿನ್ನ ಶೈಲಿಯ, ಕಥನಾತ್ಮಕ, ಲಯಬದ್ಧವಾದ ಪ್ರಯೋಗಗಳನ್ನು ಕೃತಿಯಲ್ಲಿ ಮಾಡಿದ್ದಾರೆ. ಸಮಾಜದಲ್ಲಿನ ತಾರತಮ್ಯದ ಚಿತ್ರಣವನ್ನೂ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ. ಹೀಗಾಗಿ, ಇಂತಹ ಪದ್ಯಗಳು ಇಷ್ಟ ಆಗುತ್ತವೆ’ ಎಂದು ತಿಳಿಸಿದರು.

‘ಕವಿಗೆ ಎಲ್ಲ ವಸ್ತುಗಳೂ ಅಪ್ಯಾಯಮಾನದವುಗಳೇ. ಏನನ್ನಾದರೂ ಬರೆಯಲಿ. ಅವು ಕವಿಯ ಕಲಾಕೃತಿಗಳೇ. ಓದುಗ ಬೇಕಾದರೆ ತನ್ನ ವಿಮರ್ಶಾ ಬಲೆಯನ್ನು ಅದರ ಮೇಲೆ ಹರಡಬಹುದು’ ಎಂದು ನುಡಿದರು.

ಕೃತಿ ಕುರಿತು ಮಾತನಾಡಿದ ಲೇಖಕ ಡಾ.ಕೆ.ವಿ.ಮುದ್ದವೀರಪ್ಪ, ‘ಕವಿ 20 ವರ್ಷ ಧ್ಯಾನಸ್ಥ ನೆಲೆಯಲ್ಲಿ ಕಟ್ಟಿಕೊಂಡು ಬಂದ ಕವನಗಳ ಸಂಕಲನ ಇದು. 36 ವಿಶಿಷ್ಟ ಕವನಗಳನ್ನು ಒಳಗೊಂಡಿದೆ. ಚುಟುಕುಗಳು ಗಮನ ಸೆಳೆಯುತ್ತವೆ. ಎಲ್ಲ ಕವಿತೆಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ಒಂದೊಂದು ಕವನವೂ ಒಂದೊಂದು ವಸ್ತು ಇಟ್ಟುಕೊಂಡು ವಿಸ್ತಾರವಾಗಿವೆ’ ಎಂದು ವಿವರಿಸಿದರು.

ಪ್ರತಿ ಕವಿತೆಯೂ ಭಾವತೀವ್ರತೆ ಒಳಗೊಂಡಿದೆ. ಎದೆಯ ಭೂಮಿಯಲ್ಲಿ ಅಕ್ಷರ ಬಿತ್ತಬೇಕು ಎಂದು ಹೇಳುವ ಮೂಲಕ ಶಿಕ್ಷಣ, ಜ್ಞಾನದ ಮಹತ್ವದ ಕುರಿತು ಹೇಳಿದ್ದಾರೆ ಎಂದರು.

ಕವಿ ಕೆ.ಬಿ.ಸಿದ್ಧಯ್ಯ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತ ಎಸ್.ನಾಗಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಪ್ರಕಾಶಕ ಕೆ.ಈ.ಸಿದ್ಧಯ್ಯ, ಡಾ.ಮುತ್ತೇಗೌಡ ವೇದಿಕೆಯಲ್ಲಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಕೆ.ರವಿಕುಮಾರ್ ಸ್ವಾಗತಿಸಿದರು. ಉಪನ್ಯಾಸಕ ಜಿ.ಶಾಂತರಾಜ್ ನಿರೂಪಿಸಿದರು. ಜಾನಪದ ಗಾಯಕ ಹಾಗೂ ಉಪನ್ಯಾಸಕ ಕಂಟಲಗೆರೆ ಸಣ್ಣ ಹೊನ್ನಯ್ಯ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !