ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಬಂಧ ಬೆಸೆಯುವ ಜೈವಿಕ ಸ್ವರೂಪದ ಕೃತಿ

‘ಜನಪದ ನಾಯಕ ಡಾ.ರಾಜಕುಮಾರ್’ ಪುಸ್ತಕದ ಎರಡನೇ ಮುದ್ರಣದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಡಾ.ಬಸವರಾಜ ಕಲ್ಗುಡಿ ಅಭಿಪ್ರಾಯ
Last Updated 30 ಜನವರಿ 2019, 16:46 IST
ಅಕ್ಷರ ಗಾತ್ರ

ತುಮಕೂರು: ‘ಜನಪದ ನಾಯಕ ಡಾ.ರಾಜಕುಮಾರ್’ ಕೃತಿ ಭಾವನಾತ್ಮಕ ಸಂಬಂಧ ಬೆಸೆಯುವ ಜೈವಿಕ ಸ್ವರೂಪದ ಕನ್ನಡದ ಅಪರೂಪದ ಕೃತಿಯಾಗಿದೆ’ ಹಿರಿಯ ವಿಮರ್ಶಕ ಡಾ.ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.

ಬುಧವಾರ ನಗರದ ಕನ್ನಡ ಭವನದಲ್ಲಿ ಜನಪ್ರಕಾಶನ, ತುಮಕೂರು ವಿವಿವಿ ಕನ್ನಡ ಅಧ್ಯಾಪಕರ ಒಕ್ಕೂಟದ ಆಶ್ರಯದಲ್ಲಿ ನಡೆದ ಪ್ರೊ. ಬರಗೂರು ರಾಮಚಂದ್ರಪ್ಪ ಅವರು ಬರೆದ ‘ಜನಪದ ನಾಯಕ ಡಾ.ರಾಜಕುಮಾರ್’ ಪುಸ್ತಕದ ಎರಡನೇ ಮುದ್ರಣದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಜನಪ್ರಿಯ ಎಂಬ ಪರಿಕಲ್ಪನೆಗೆ ಹೊಸ ವ್ಯಾಖ್ಯಾನವನ್ನು ಕೃತಿಕಾರರಾದ ಪ್ರೊ. ಬರಗೂರು ರಾಮಚಂದ್ರ ಈ ಕೃತಿಯಲ್ಲಿ ನೀಡಿದ್ದಾರೆ. ಕನ್ನಡದ ಅತ್ಯದ್ಭುತವಾದ ಚೇತನವಾದ ಡಾ.ರಾಜಕುಮಾರ್ ಅವರ ಜೊತೆಗೆ ಸದಭಿರುಚಿಯ ಯುಗವೇ ಅಂತ್ಯವಾಯಿತು ಎಂಬುದನ್ನು ಅರ್ಥಪೂರ್ಣವಾಗಿ ಉಲ್ಲೇಖಿಸಿದ್ದಾರೆ. ಡಾ.ರಾಜಕುಮಾರ್ ಅವರಂತೆ ಜನಮಾನಸದ ಸಂಕೇತವಾಗಿ ಯಾರೂ ಸಿಕ್ಕಿಲ್ಲ. ರಾಜಕುಮಾರ್ ಅವರಲ್ಲಿ ಜನಪದದ ಪ್ರಜ್ಞೆ ಇತ್ತು. ಅವರ ಬದುಕಿನಲ್ಲಿ ಕನ್ನಡ, ಸಂಸ್ಕೃತಿ ಹಾಸು ಹೊಕ್ಕಿತ್ತು’ ಎಂದು ನುಡಿದರು.

‘ಜನರ ಮನಸ್ಸಿನಲ್ಲಿ ಎಳೆಯ ಸಂವೇದನೆಯನ್ನು ಕಾಡಿಸಿದ ಮತ್ತೊಬ್ಬ ನಟ, ಸಾಹಿತಿ, ಸಾಂಸ್ಕೃತಿಕ ಚೇತನ ಡಾ.ರಾಜಕುಮಾರ್ ಬಿಟ್ಟರೆ ಮತ್ತೊಬ್ಬರಿಲ್ಲ. ಡಾ.ರಾಜಕುಮಾರ್ ಅವರು ಹಣಕ್ಕಾಗಿ ಕಲಾವಿದರಾದವರಲ್ಲ. ಕಲೆಗಾಗಿಯೇ ಕೊನೆಯವರೆಗೂ ಜೀವನ ಅರ್ಪಿಸಿಕೊಂಡವರು ಎಂದರು.

‘ಇಂತಹ ನಿಜವಾದ ಜನಪದ ನಾಯಕನ ಪರಿಚಯ ಎಲ್ಲ ಕಾಲಕ್ಕೂ ತಿಳಿದಿರಬೇಕು. ಹಾಗೆ ತಿಳಿಸುವ ಕಾರ್ಯವನ್ನು ಪ್ರೊ.ಬರಗೂರು ಈ ಕೃತಿ ಮೂಲಕ ಮಾಡಿದ್ದಾರೆ’ ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಗಾಯಕಿ ಡಾ.ಶಮಿತಾ ಮಲ್ನಾಡ್ ಮಾತನಾಡಿ, ‘ಜನಪದ ನಾಯಕ ಡಾ.ರಾಜಕುಮಾರ್ ಅವರಂತೆಯೇ ಪ್ರೊ. ಬರಗೂರು ರಾಮಚಂದ್ರಪ್ಪ ಅವರೂ ಜನಪದ ನಾಯಕರೇ. ಒಪ್ಪಿಕೊಳ್ಳುವ, ಹೇಳಿಕೊಳ್ಳುವ ವ್ಯಕ್ತಿತ್ವ ಇಬ್ಬರದ್ದೂ ಆಗಿದ್ದು, ಇಂತಹ ವ್ಯಕ್ತಿತ್ವವುಳ್ಳವರು ಅಪರೂಪ ಎಂದು ನುಡಿದರು.

ಅವಮಾನವನ್ನೇ ಸನ್ಮಾನವೆಂದು ಭಾವಿಸಿ ವೃತ್ತಿಯಲ್ಲಿ ಶ್ರದ್ಧೆ, ಸಂಯಮ, ತಾಳ್ಮೆಯಿಂದ ಬೆಳೆದ ಮೇರು ವ್ಯಕ್ತಿತ್ವ ಡಾ.ರಾಜಕುಮಾರ್ ಅವರದು. ಅವರೊಂದಿಗಿನ ಒಡನಾಟದ ಕೇವಲ ಶೇ 5ರಷ್ಟನ್ನು ಮಾತ್ರ ಪ್ರೊ. ಬರಗೂರು ಅವರು ಈ ಕೃತಿಯಲ್ಲಿ ಉಲ್ಲೇಖಿಸಿದ್ದಾರೆ. ಇನ್ನೂ ಸಾಕಷ್ಟು ಅವರಿಂದ ಡಾ.ರಾಜಕುಮಾರ್ ಅವರ ಕುರಿತು ಕೃತಿಗಳು ಬರಬೇಕು. ವಿಶೇಷವಾಗಿ ಆಡಿಯೋ ಬುಕ್ ಬಿಡುಗಡೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಕೀರ್ತನಕಾರ ಡಾ.ಲಕ್ಷ್ಮಣ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬರಗೂರು ರಾಮಚಂದ್ರಪ್ಪ, ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷ ಶಿವನಂಜಯ್ಯ, ಜನಪ್ರಕಾಶನದ ರಾಜಶೇಖರಮೂರ್ತಿ, ಭೂಮಿ ಬಳಗದ ಸೋಮಶೇಖರ್ ವೇದಿಕೆಯಲ್ಲಿದ್ದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಬಾ .ಹ.ರಮಾಕುಮಾರಿ, ನಿವೃತ್ತ ಪ್ರಾಚಾರ್ಯ ಜಿ.ಎಂ.ಶ್ರೀನಿವಾಸಯ್ಯ, ಪಿಯುಸಿಎಲ್ ಸಂಘಟನೆ ಜಿಲ್ಲಾ ಘಟಕ ಅಧ್ಯಕ್ಷ ಕೆ.ದೊರೈರಾಜು, ಪ್ರಾಧ್ಯಾಪಕ ಡಾ. ಓ.ನಾಗರಾಜು, ಪುಟ್ಟರಾಜು, ಶೈಲಾ ನಾಗರಾಜು ಇದ್ದರು. ದಿಬ್ಬೂರು ಮಂಜುನಾಥ್ ತಂಡದವರು ಡಾ.ರಾಜಕುಮಾರ್ ಗೀತೆಗಳನ್ನು ಪ್ರಸ್ತುತಪಡಿಸಿದರು. ಡಾ.ನಾಗಭೂಣ ಬಗ್ಗನಡು ನಿರೂಪಿಸಿದರು. ಮಲ್ಲಿಕಾ ಬಸವರಾಜು ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT