ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿಗಳ ಸಂಕಟಕ್ಕಿಂತ ಹಸುವಿನ ರಾಜಕಾರಣವೇ ಮುಖ್ಯ

ಡಾ.ಓ.ನಾಗರಾಜು ಅವರ ‘ಹಟ್ಟಿ ಅರಳಿ ಹೂವಾಗಿ’ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಪ್ರೊ.ಬರಗೂರು ಕಳವಳ
Last Updated 23 ಡಿಸೆಂಬರ್ 2018, 16:43 IST
ಅಕ್ಷರ ಗಾತ್ರ

ತುಮಕೂರು: ‘ಹಟ್ಟಿ’ಗಳು ಇವತ್ತಿಗೂ ಸಂಕಟದಲ್ಲಿವೆ. ಈ ಜನರ ಹಸಿವಿನ ಬಗ್ಗೆ ಕಾಳಜಿವಹಿಸಬೇಕಾದವರು ಹಸುವಿನ ರಾಜಕಾರಣ ಮಾಡುತ್ತಿದ್ದಾರೆ. ಸಂವಿಧಾನ ಸುಡುತ್ತಿದ್ದಾರೆ’ ಎಂದು ಹಿರಿಯ ಸಾಹಿತಿ ಡಾ.ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.

ಭಾನುವಾರ ನಗರದ ಕನ್ನಡ ಭವನದಲ್ಲಿ ಬಂಡಾಯ ಸಾಹಿತ್ಯ ಸಂಘಟನೆ ಮತ್ತು ಶಶಾಂಕ ಪ್ರಕಾಶನ ಸಹಯೋಗದಲ್ಲಿ ಡಾ. ಓ.ನಾಗರಾಜು ಅವರು ಬರೆದ ‘ಹಟ್ಟಿ ಅರಳಿ ಹೂವಾಗಿ’ ಕಾದಂಬರಿ ಬಿಡುಗಡೆ ಮಾಡಿ ಮಾತನಾಡಿದರು.

70ರ ದಶಕದ ಪಲ್ಲಟಗಳು, ಅಭಿವೃದ್ಧಿಯ ಹೊಸದಾದ ಅಂಶಗಳು, ಜನಪರ ಚಳವಳಿಯ ಪ್ರೇರಣೆ ಈ ಕೃತಿಕಾರರಿಗೆ ಪ್ರೇರಣೆಯಾಗಿವೆ. ಚಳವಳಿಯ ಹಿನ್ನೆಲೆಯಿಂದ ಬಂದ ನಾಗರಾಜು ಅವರು ಶೋಷಿತರ ಸಂಕಟಗಳನ್ನು ಕಂಡವರು. ಅವರಲ್ಲಿನ ಬರವಣಿಗೆಯ ಸೃಜನಶೀಲತೆ ಈ ಕೃತಿಯನ್ನು ಕಟ್ಟಿಕೊಟ್ಟಿದೆ ಎಂದು ವಿವರಿಸಿದರು.

‘ಹಟ್ಟಿ ಅರಳಿ ಹೂವಾಗಿ’ ಎಂದು ಬರೆಯಬಹುದು. ಹಟ್ಟಿ ಅರಳಿ ನೋವಾಗಿ ಎಂದೂ ಕೂಡಾ ಬರೆಯಬಹುದು. ಆದರೆ, ಲೇಖಕರು ಹಟ್ಟಿಗಳು ಹೂವಾಗಲಿ ಎಂಬ ಆಶಯದೊಂದಿದೆ ರಚಿಸಿದ್ದಾರೆ. ಕಾದಂಬರಿ ವಾಸ್ತವಕ್ಕಿಂತ ಕನಸು ಇದೆ. ಅವರ ಕನಸು ನಿಜವಾಗಲಿ. ಅವರ ಕನಸು ಸಕಾರಾತ್ಮಕವಾದುದು. ಸಾಮರಸ್ಯದ ಸಂದೇಶ ಸಾರುವ ಲೋಕೋಪಕಾರಿಯ ಆಶಯ ಅಡಗಿದೆ’ ಎಂದರು.

ಕೃತಿ ಕುರಿತು ಮಾತನಾಡಿದ ಕವಿ ಡಾ.ಆರನಕಟ್ಟೆ ರಂಗನಾಥ್, ‘ಹಳ್ಳಿಗಳೆಂದರೆ ನಾರು, ದಾರಿದ್ರ್ಯದಿಂದ ಕೂಡಿದ, ಬಡ ಜನರು, ನಿರ್ಗತಿಕರೇ ವಾಸಿಸುವ ಪ್ರದೇಶಗಳು ಎಂಬ ಒಟ್ಟು ಮನೋಭಾವ ಸಮಾಜದಲ್ಲಿ ಬೇರೂರಿದೆ. ಆದರೆ, ಕಾದಂಬರಿಕಾರರು ಇಂತಹ ಹಟ್ಟಿಗಳಿಗೆ ಅವುಗಳದ್ದೇ ಆದ ಸಂಸ್ಕೃತಿ ಇದೆ. ಎಲ್ಲ ಸಮುದಾಯದ ಜನರು ಒಟ್ಟಿಗೆ ಜೀವಿಸುವ ಕೇಂದ್ರಗಳ ಮಹತ್ವವನ್ನು ಕಾದಂಬರಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದರು.

ಕಾದಂಬರಿಯ ಮತ್ತೊಂದು ವಿಶೇಷ ಎಂದರೆ ಕಾದಂಬರಿಯಲ್ಲಿ ಬರುವ ಎಲ್ಲರೂ ಒಳ್ಳೆಯವರೇ. ಸಂಬಂಧ ಬೆಸೆಯುವ ಪಾತ್ರಗಳೇ ಆಗಿವೆ. ಮಾದಿಗರು, ದಕ್ಕಲಿಗರು, ಹೊಲೆಯರು ಎಲ್ಲ ಸಮುದಾಯಗಳೂ ಕಬಡ್ಡಿ ಆಟದ ಮೂಲಕ ಒಂದಾಗುತ್ತವೆ. ಪ್ರೇಮದ ಪ್ರಕರಣ ಮೂಲಕ ಸ್ಥಳೀಯ ಪ್ರಜ್ಞೆ ಮೂಡಿಸುವ ಮತ್ತು ಇತಿಹಾಸ ಮರು ನಿರೂಪಿಸುವ ಪ್ರಯತ್ನವನ್ನು ಮಾಡಿದ್ದಾರೆ. ‘ರಾಜ’ ಎಂಬ ಪಾತ್ರವೇ ಕಾದಂಬರಿಯ ಕೇಂದ್ರ ಬಿಂದು ಎಂದು ವಿವರಿಸಿದರು.

ಮುಖ್ಯ ಅತಿಥಿ ಬಿ.ರಾಜಶೇಖರಮೂರ್ತಿ ಮಾತನಾಡಿ, ‘ಚಳವಳಿಗಳ ಜೊತೆಗೆ ಸಂಪರ್ಕದಲ್ಲಿದ್ದವರು ವಾಸ್ತವಿಕ ನೆಲೆಗಟ್ಟಿನಲ್ಲಿ ಇಂತಹ ಕೃತಿ ಕಟ್ಟಿಕೊಡಲು ಸಾಧ್ಯವಿದೆ. ಸ್ವಜನಪಕ್ಷಪಾತ, ಸಹಿತಾಸಕ್ತಿಯೇ ವಿಜೃಂಭಿಸುತ್ತಿರುವ ಈಗಿನ ಕಾಲಘಟ್ಟದಲ್ಲಿ ಸಮುದಾಯದ ಸಾಮರಸ್ಯ, ಎಲ್ಲರೂ ಒಳ್ಳೆಯ ರೀತಿ ಬದುಕಬೇಕು ಎಂಬ ಆಶಯ ಕೃತಿಯಲ್ಲಿ ಲೇಖಕರು ವ್ಯಕ್ತಪಡಿಸಿರುವುದು ಗಮನಾರ್ಹ’ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷ ಡಾ.ಟಿ.ಎಂ. ಮಂಜುನಾಥ್ ಮಾತನಾಡಿ, ‘ ಬಂಡಾಯ ಎಂಬುದು ಗಟ್ಟಿ ಧ್ವನಿಯ ಪ್ರತೀಕ. ಇಂತಹ ಚಳವಳಿಯ ನೆಲೆಗಟ್ಟಿನಲ್ಲಿ ಬಂದ ಕಾದಂಬರಿಕಾರರು ಇನ್ನಷ್ಟು ಕೃತಿಗಳನ್ನು ಈ ರೀತಿ ರಚಿಸಲಿ ಎಂದು ಆಶಯ ವ್ಯಕ್ತಪಡಿಸಿದರು.

ಕೃತಿಕಾರರಾದ ಡಾ.ಓ ನಾಗರಾಜು ಮಾತನಾಡಿದರು. ಅಧ್ಯಕ್ಷತೆಯನ್ನು ನಿವೃತ್ತ ಪ್ರಾಂಶುಪಾಲ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ವಹಿಸಿದ್ದರು.ಶ್ವೇತಾರಾಣಿ ಸ್ವಾಗತಿಸಿದರು. ನಾಗಭೂಷಣ ಬಗ್ಗನಡು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT