ತುಮಕೂರು: ‘ನಾವು ದುಡಿದು ತಿನ್ನುವರು, ಮಗನನ್ನು ಚೆನ್ನಾಗಿ ಓದಿಸಬೇಕು ಅಂತ ಶಾಲೆಗೆ ಕಳುಹಿಸಿದ್ದೆವು. ಆಡಲು ಹೋದವನು ಮತ್ತೆ ಬರಲಿಲ್ಲ. ಕೊನೆಗೆ ಅವನ ಮುಖ ಸಹ ನೋಡಲು ಆಗಲಿಲ್ಲ....’
ಶಿರಾ ತಾಲ್ಲೂಕಿನ ಹುಯಿಲ್‌ದೊರೆ ಕಾವಲ್ ಗ್ರಾಮದ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ವಿದ್ಯಾರ್ಥಿ ಹೇಮಂತ್ (8) ತಾಯಿ ಜಯಲಕ್ಷ್ಮಿ ಅವರು ಪುತ್ರನ ನೆನೆದು ಕಣ್ಣೀರಾದರು.
‘ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಗನ ಸಾವಾಗಿದೆ. ಬೇರೆ ಯಾರಿಗೂ ಇಂತಹ ಪರಿಸ್ಥಿತಿ ಬರಬಾರದು. ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಜಿಲ್ಲಾ ಆಸ್ಪತ್ರೆಯ ಶವಾಗಾರದ ಮುಂದೆ ಶುಕ್ರವಾರ ಹುಯಿಲ್‌ದೊರೆ ಕಾವಲ್ ಗ್ರಾಮಸ್ಥರ ಜತೆ ಪ್ರತಿಭಟನೆ ನಡೆಸಿದರು.
‘ಘಟನೆ ನಂತರ ಶಿರಾ ಠಾಣೆಗೆ ದೂರು ಕೊಡಲು ಹೋದರೆ ಪೊಲೀಸರು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲು ಮುಂದಾದರು. ಅಲ್ಲಿ ಪ್ರತಿಭಟನೆ ನಡೆಸಿದ ನಂತರ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಠಾಣೆಯಲ್ಲೂ ಸೂಕ್ತ ರೀತಿಯಲ್ಲಿ ಸ್ಪಂದಿಸಲಿಲ್ಲ. ಬಾಲಕ ಸಾವನ್ನಪ್ಪಿದ ನಂತರವೂ ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ. ತಪ್ಪಿತಸ್ಥರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ಹೇಮಂತ್ ಪೋಷಕರು ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ಸುರಿದ ಮಳೆಗೆ ಮನೆ ನೆಲಸಮವಾಗಿದೆ. ಬೇರೆಯವರ ಜಾಗದಲ್ಲಿ ಗುಡಿಸಲು ಹಾಕಿಕೊಂಡು ಜೀವನ ನಡೆಸುತ್ತಿದ್ದಾರೆ. ತಂದೆಗೆ ಮಾತು ಬರುವುದಿಲ್ಲ. ತಾಯಿ ಇಡೀ ಕುಟುಂಬದ ನಿರ್ವಹಣೆ ಹೊತ್ತಿದ್ದರು. ಹಿರಿಯ ಮಗ ಪಿಯುಸಿ ಓದುತ್ತಿದ್ದಾನೆ. ಕಷ್ಟದ ಕಾಲದಲ್ಲಿ ಮಕ್ಕಳು ನೆರವಾಗುತ್ತಾರೆ ಎಂಬ ಪೋಷಕರ ಕನಸು ನುಚ್ಚುನೂರಾಗಿದೆ ಎಂದರು.
ಶಾಸಕರ ಕಾಲಿಗೆ ಬಿದ್ದ ತಾಯಿ: ಮಗನ ಸಾವಿಗೆ ನ್ಯಾಯ ಕೊಡಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಜಯಲಕ್ಷ್ಮಿ ಶಾಸಕ ಸಿ.ಬಿ.ಸುರೇಶ್‌ಬಾಬು ಕಾಲಿಗೆ ಬಿದ್ದು ಬೇಡಿಕೊಂಡರು. ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಸಕರ ಬಳಿ ತಮ್ಮ ಅಳಲು ತೋಡಿಕೊಂಡರು.
‘ಘಟನೆಯನ್ನು ಯಾರೂ ಮರೆ ಮಾಚುವುದಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಆಗಲಿದೆ. ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮಾಹಿತಿ ನೀಡಲಾಗಿದೆ. ಬೆಸ್ಕಾಂ ನಿರ್ಲಕ್ಷ್ಯ, ಬೇಜವಾಬ್ದಾರಿಯಿಂದ ಸಾವಾಗಿದೆ. ಸರ್ಕಾರದಿಂದ ಪರಿಹಾರ ಕೊಡಿಸಲು ಕ್ರಮಕೈಗೊಳ್ಳಲಾಗುವುದು. ಯಾವ ಅಧಿಕಾರಿಯೂ ದರ್ಪದಿಂದ ನಡೆದುಕೊಳ್ಳಬಾರದು. ಎಲ್ಲರು ಎಚ್ಚರಿಕೆಯಿಂದ ಕೆಲಸ ಮಾಡಬೇಕು’ ಎಂದು ಸುರೇಶ್‌ಬಾಬು ತಿಳಿಸಿದರು.
ಎಇಇ ಎಸ್‌ಒ ವಿರುದ್ಧ ಪ್ರಕರಣ
ಬೆಸ್ಕಾಂ ಬುಕ್ಕಾಪಟ್ಟಣ ಶಾಖಾಧಿಕಾರಿ ಅಂಜಿನಪ್ಪ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗೋವಿಂದರಾಜು ವಿರುದ್ಧ ಶಿರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಗ್ರಾಮಸ್ಥರು ಹಲವು ಬಾರಿ ಮನವಿ ಸಲ್ಲಿಸಿದರೂ ಸ್ಥಳಕ್ಕೆ ಬಾರದ ಸಮಸ್ಯೆ ಸರಿಪಡಿಸದೆ ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮಕೈಗೊಳ್ಳುವಂತೆ’ ಹೇಮಂತ್ ತಾಯಿ ಜಯಲಕ್ಷ್ಮಿ ದೂರು ನೀಡಿದ್ದು ಇದರ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.