ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೆಕ್ಕ ಬರದಿದ್ದಕ್ಕೆ ಬಾಲಕನಿಗೆ ಶಿಕ್ಷಕನಿಂದ ಥಳಿತ

ಬೆಳ್ಳಾವಿ ಹೋಬಳಿ ಮಷಣಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪ್ರಕರಣ
Last Updated 15 ಸೆಪ್ಟೆಂಬರ್ 2019, 15:33 IST
ಅಕ್ಷರ ಗಾತ್ರ

ತುಮಕೂರು: ಲೆಕ್ಕ ಬರದಿದ್ದಕ್ಕೆ ಮುಖ್ಯ ಶಿಕ್ಷಕ 6ನೇ ತರಗತಿ ವಿದ್ಯಾರ್ಥಿಯೊಬ್ಬನಿಗೆ ಭುಜದ ಮೇಲೆ ಬಾಸುಂಡೆ ಬರುವ ರೀತಿ ಥಳಿಸಿದ ಪ್ರಕರಣ ತಾಲ್ಲೂಕಿನ ಬೆಳ್ಳಾವಿ ಹೋಬಳಿ ಮಷಣಾಪುರ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಬಾಲಕನಿಗೆ ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪೋಷಕರು ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.

ಪ್ರಕರಣ ಕುರಿತು ಶಾಲೆಗೆ ಭೇಟಿ ನೀಡಿ ಪೋಷಕರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರಿಂದ ಮಾಹಿತಿ ಪಡೆಯಲಾಗಿದೆ. ಶಾಲೆಯಲ್ಲಿ ಹತ್ತು ವರ್ಷದಿಂದ ಶಿಕ್ಷಕರಾಗಿರುವ ಅಶ್ವತ್ಥಪ್ಪ ಎಂಬುವರು ಈಗ ಮುಖ್ಯ ಶಿಕ್ಷಕರಾಗಿದ್ದಾರೆ. 6ನೇ ತರಗತಿ ಬಾಲಕನಿಗೆ ಪಾಠ ಹೇಳುವಾಗ ಹೊಡೆದಿದ್ದಾಗಿ ಶಿಕ್ಷಕರು ಹೇಳಿದ್ದಾರೆ ಎಂದು ಬೆಳ್ಳಾವಿ ಠಾಣೆ ಸಬ್‌ ಇನ್‌ಸ್ಪೆಕ್ಟರ್ ಹೇಳಿದ್ದಾರೆ.

ಆದರೆ, ಬಾಲಕನ ಪೋಷಕರು, ಎಸ್‌ಡಿಎಂಸಿ ಸದಸ್ಯರು ದೂರು ನೀಡಲು ಮುಂದಾಗಿಲ್ಲ. ಪಾಠ ಹೇಳುವಾಗ ಶಿಕ್ಷಕರು ಹೊಡೆದಿರಬಹುದು. ದೂರು ಕೊಡುವುದಿಲ್ಲ ಎಂದು ಹೇಳಿದರು. ಹೀಗಾಗಿ ಯಾವುದೇ ದೂರುಗಳು ದಾಖಲಾಗಿಲ್ಲ ಎಂದು ತಿಳಿಸಿದರು.

ಡಿಡಿಪಿಐ ಹೇಳಿಕೆ: ಈ ವಿಚಾರ ಮಾಧ್ಯಮಗಳ ಮೂಲಕ ಗಮನಕ್ಕೆ ಬಂದಿದೆ. ಸೋಮವಾರ ಶಾಲೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಭೇಟಿ ನೀಡಿ ವಿಚಾರಣೆ ನಡೆಸಲಾಗುವುದು ಎಂದು ಡಿಡಿಪಿಐ ಆರ್.ಕಾಮಾಕ್ಷಿ ’ಪ್ರಜಾವಾಣಿ’ಗೆ ತಿಳಿಸಿದರು.

’ಪಾಠ ಹೇಳುವಾಗ ಬಾಲಕನಿಗೆ ಹೊಡೆದಿದ್ದೇನೆ. ಆದರೆ, ಬಾಸುಂಡೆ ಬರುವ ರೀತಿ, ಮಗುವಿಗೆ ಘಾಸಿಯಾಗುವ ರೀತಿ ಹೊಡೆದಿಲ್ಲ ಎಂದು ಶಿಕ್ಷಕರು ಹೇಳಿದ್ದಾರೆ’ ಎಂದರು.

’ಮಗುವಿನ ಪೋಷಕರು ಈ ಬಗ್ಗೆ ಶಿಕ್ಷಣಾಧಿಕಾರಿಗೆ, ಪೊಲೀಸರಿಗೆ ದೂರು ನೀಡಿಲ್ಲ. ಮಗುವಿನ ಸಂಬಂಧಿಕರೆನ್ನಲಾದ ವ್ಯಕ್ತಿಯೊಬ್ಬರು ದೂರು ನೀಡಲು ಹೋಗಿದ್ದರಂತೆ. ಈಗ ಆ ವ್ಯಕ್ತಿ ಸಂಪರ್ಕಕ್ಕೆ ಸಿಗುತ್ತಿಲ್ಲ. ದುರುದ್ದೇಶದಿಂದ ಮಗುವಿಗೆ ಯಾರಾದರೂ ಹೊಡೆದು ಪ್ರಕರಣಕ್ಕೆ ಬೇರೆ ಬಣ್ಣ ಕಟ್ಟುವ ಪ್ರಯತ್ನ ನಡೆದಿರುವ ಅನುಮಾನ ಕಂಡು ಬರುತ್ತಿದೆ. ಪರಿಶೀಲನೆ ವೇಳೆ ಕೂಲಂಕಷವಾಗಿ ಮಾಹಿತಿ ಪಡೆಯಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT