ಪಾವಗಡ: ತಾಲ್ಲೂಕಿನ ವದನಕಲ್ಲು-ಲಿಂಗದಹಳ್ಳಿ ಮಾರ್ಗದಲ್ಲಿರುವ ಖಾಸಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮಂಗಳವಾರ ಇಟ್ಟಿಗೆ ಕೆಲಸ ಮಾಡಿಸುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಸಮವಸ್ತ್ರದಲ್ಲಿದ್ದ ಬಾಲಕಿಯರು ಸೇರಿದಂತೆ 1ರಿಂದ 7ನೇ ತರಗತಿಯ ವಿದ್ಯಾರ್ಥಿಗಳು ಇಟ್ಟಿಗೆ ಜೋಡಿಸುವ ಕೆಲಸದಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಕೆಲವರು ವಿಡಿಯೊ ಮಾಡಿ ಅಧಿಕಾರಿಗಳಿಗೆ ಕಳುಹಿಸಿದ್ದಾರೆ. ಇಟ್ಟಿಗೆ ಕೆಲಸ ಸೇರಿದಂತೆ ಅಪಾಯಕಾರಿ ಕೆಲಸ ಮಾಡಬಾರದು ಎಂದು ಶಿಕ್ಷಣ ಇಲಾಖೆ ನಿರ್ದೇಶನ ನೀಡಿದೆ. ಆದರೆ ನಿಯಮಾವಳಿ ಗಾಳಿಗೆ ತೂರಿ ಮಕ್ಕಳಿಂದ ಅಪಾಯಕಾರಿ ಕೆಲಸ ಮಾಡಿಸಲಾಗುತ್ತಿದೆ. ಶಾಲೆಯ ವಿರುದ್ಧ ಇಲಾಖೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.
‘ಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಶಾಲೆ ಬಳಿ ಇಟ್ಟಿಗೆ ಹಾಕಿಸಲಾಗಿದೆ. ಶಾಲೆಯ ಮಧ್ಯಂತರ ಅವಧಿಯಲ್ಲಿ ಮಕ್ಕಳು ಇಟ್ಟಿಗೆ ಮೇಲೆ ಹತ್ತಿ ಆಡುತ್ತಿದ್ದರು. ಇದನ್ನೇ ಕೆಲವರು ವಿಡಿಯೊ ಮಾಡಿದ್ದಾರೆ. ಶಾಲಾ ಮಕ್ಕಳಿಂದ ಕೆಲಸ ಮಾಡಿಸಿಲ್ಲ’ ಎಂದು ನಿಸರ್ಗ ಶಾಲೆಯ ಮುಖ್ಯಸ್ಥ ತಿಪ್ಪೇಸ್ವಾಮಿ ಸ್ಪಷ್ಟಪಡಿಸಿದ್ದಾರೆ.
‘ಖಾಸಗಿ ಅನುದಾನ ರಹಿತ ಶಾಲೆ ಬಳಿ ವಿದ್ಯಾರ್ಥಿಗಳಿಂದ ಇಟ್ಟಿಗೆ ಕೆಲಸ ಮಾಡಿಸುತ್ತಿರುವ ಬಗ್ಗೆ ದೂರು ಬಂದಿದೆ. ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗುವುದು. ಆಡಳಿತ ಮಂಡಳಿಗೆ ನೋಟಿಸ್ ನೀಡಿಲಾಗುವುದು’ ಎಂದು ಶಿಕ್ಷಣಾಧಿಕಾರಿ ಅಶ್ವತ್ಥನಾರಾಯಣ ಪ್ರತಿಕ್ರಿಯಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.