ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಟಗಾರಿಕಾ ಇಲಾಖೆ: ವಿವಿಧ ಸಹಾಯಧನಕ್ಕೆ ಅರ್ಜಿ

Last Updated 13 ಮೇ 2019, 13:36 IST
ಅಕ್ಷರ ಗಾತ್ರ

ತುಮಕೂರು: ತೋಟಗಾರಿಕೆ ಇಲಾಖೆಯು 2019-20ನೇ ಸಾಲಿನ ವಿವಿಧ ಯೋಜನೆಗಳಡಿ ಸಹಾಯಧನ ನೀಡಲು ಅರ್ಹ ರೈತರಿಂದ ಅರ್ಜಿ ಆಹ್ವಾನಿಸಿದೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ್, ಸಮಗ್ರ ತೋಟಗಾರಿಕೆ ಅಭಿವೃದ್ಧಿ, ಕೃಷಿಭಾಗ್ಯ, ಗ್ರಾಮೀಣ ಉದ್ಯೋಗ ಖಾತರಿ, ಗೇರು ಅಭಿವೃದ್ಧಿ, ನೀರಿನ ಟ್ಯಾಂಕರ್ ಖರೀದಿ, ಮಧುವನ/ಜೇನು ಸಾಕಣೆ ಯೋಜನೆಗಳಡಿ ಸಹಾಯಧನ ನೀಡಲಾಗುವುದು.

ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಗರಿಷ್ಠ 5 ಹೆಕ್ಟೇರ್‌ವರೆಗೆ ಸಹಾಯಧನ ನೀಡಲಾಗುತ್ತದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್: ಯೋಜನೆಯಡಿ ತೋಟಗಾರಿಕೆ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, ರೋಗ ಮತ್ತು ಕೀಟ ನಿಯಂತ್ರಣ, ನೀರು ಸಂಗ್ರಹಣಾ ಘಟಕ, ಪ್ಯಾಕ್‌ಹೌಸ್, ಜೇನುಕೃಷಿ, ಸಂರಕ್ಷಿತ ಬೇಸಾಯ ಹಾಗೂ ಸಂಸ್ಕರಣ ಘಟಕ, ಶೈತ್ಯಾಗಾರ ಮತ್ತು ಹಣ್ಣು ಮಾಗಿಸುವ ಘಟಕಗಳಿಗೆ ಸಹಾಯಧನ ನೀಡಲಾಗುವುದು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ತೋಟಗಾರಿಕೆ ಬೆಳೆಗಳ ಕೊಯ್ಲೋತ್ತರ ನಿರ್ವಹಣೆಗಾಗಿ ಪ್ಯಾಕ್‌ಹೌಸ್ ನಿರ್ಮಾಣ ಹಾಗೂ ಯಂತ್ರೋಪಕರಣ ಖರೀದಿಸಲು ಸಹಾಯಧನ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆಯಡಿ ಗುಚ್ಛ ಮಾದರಿಯಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಪ್ರದೇಶ ವಿಸ್ತರಣೆ, ನೀರು ಸಂಗ್ರಹಣಾ ಘಟಕ, ಪ್ಯಾಕ್‌ಹೌಸ್ ನಿರ್ಮಾಣಕ್ಕೆ ಪ್ರೋತ್ಸಾಹಧನ ನೀಡಲಾಗುವುದು.

ಕೃಷಿಭಾಗ್ಯ ಯೋಜನೆಯಡಿ ಸಂರಕ್ಷಿತ ಬೇಸಾಯಕ್ಕಾಗಿ ಪಾಲಿಹೌಸ್, ನೆರಳುಪರದೆ ಘಟಕ ಹಾಗೂ ಕೃಷಿ ಹೊಂಡ ಚಟುವಟಿಕೆಗೆ ಸಹಾಯಧನ ಪಡೆಯಬಹುದು. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ರೈತರ ಜಮೀನಿನಲ್ಲಿ ತೆಂಗು, ಮಾವು, ಸಪೋಟ, ಬಾಳೆ, ಕಾಳು ಮೆಣಸು, ನುಗ್ಗೆ, ಪಪ್ಪಾಯ, ಗೇರು ಬೆಳೆ ಹಾಗೂ ವಿವಿಧ ತೋಟಗಾರಿಕಾ ಬೆಳೆಗಳ ಪ್ರದೇಶ ವಿಸ್ತರಣೆ ಹಾಗೂ ತೆಂಗು/ಮಾವು ಪುನಶ್ಚೇತನ, ಕೊಳವೆ ಬಾವಿ ಮರು ಪೂರಣ, ಮಣ್ಣು ಮತ್ತು ನೀರು ಸಂರಕ್ಷಣೆ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗುತ್ತದೆ.

ಗೇರು ಅಭಿವೃದ್ಧಿ ಯೋಜನೆಯಡಿ ಗೇರು ಬೆಳೆಯ ಪ್ರದೇಶ ವಿಸ್ತರಣೆಗೆ ಸಹಾಯಧನ, ನೀರು ಸರಬರಾಜಿಗೆ ಟ್ಯಾಂಕರ್ ಖರೀದಿಗೆ ಸಹಾಯಧನ, ಮಧುವನ ಮತ್ತು ಜೇನು ಸಾಕಣೆಯನ್ನು ಉತ್ತೇಜಿಸಲು ಖಾಸಗಿ ಮಧುವನ ಸ್ಥಾಪನೆಗಾಗಿ ಸಹಾಯಧನ ಒದಗಿಸಲಾಗುವುದು.

ಆಸಕ್ತ ರೈತರು ಸಂಬಂಧಿಸಿದ ತಾಲ್ಲೂಕು ತೋಟಗಾರಿಕಾ ಕಚೇರಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಿ ಮೇ 30ರ ಒಳಗೆ ಅರ್ಜಿ ಸಲ್ಲಿಸಿ ಯೋಜನೆಗಳ ಸದ್ಬಳಕೆ ಪಡೆಯಬಹುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಪಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT