ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಸೋಹ ಭವನ ನಿರ್ಮಾಣ: ಬನ್ನಿರಾಯಸ್ವಾಮಿ ದೇಗುಲಕ್ಕೆ ಬಿಎಸ್‌ವೈ ₹25 ಲಕ್ಷ ನೆರವು

Last Updated 30 ಮಾರ್ಚ್ 2022, 4:08 IST
ಅಕ್ಷರ ಗಾತ್ರ

ತುಮಕೂರು: ತಿಗಳ ಸಮುದಾಯದ ಆರಾಧ್ಯ ದೈವ ಅಗ್ನಿ ಬನ್ನಿರಾಯಸ್ವಾಮಿ ದೇವಾಲಯ, ದಾಸೋಹ ಭವನ ನಿರ್ಮಾಣಕ್ಕೆ ವೈಯಕ್ತಿಕವಾಗಿ ₹25 ಲಕ್ಷ ನೀಡುವುದಾಗಿ ಶಾಸಕ ಬಿ.ಎಸ್.ಯಡಿಯೂರಪ್ಪ ಸೋಮವಾರ ಪ್ರಕಟಿಸಿದರು.

ಕರ್ನಾಟಕ ಅಗ್ನಿ ಬನ್ನಿರಾಯ ತಿಗಳ ಮಹಾಸಭಾ ಸೋಮವಾರ ಹಮ್ಮಿಕೊಂಡಿದ್ದ ತಿಗಳ ಸಮುದಾಯದ ಮೂಲಪುರುಷ ಅಗ್ನಿ ಬನ್ನಿರಾಯಸ್ವಾಮಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಅಗ್ನಿ ಬನ್ನಿರಾಯಸ್ವಾಮಿ ದೇವಾಲಯ ಹಾಗೂ ಸಮುದಾಯ ಭವನ ನಿರ್ಮಾಣಕ್ಕೆ ತಾಲ್ಲೂಕಿನ ಕುಂದೂರು ಬಳಿ 1 ಎಕರೆ 9 ಗುಂಟೆ ಸರ್ಕಾರಿ ಜಾಗ ಮಂಜೂರು ಮಾಡಿಕೊಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಲಾಗುವುದು. ಜಮೀನು ಮಂಜೂರು ಮಾಡಿಸಿಕೊಡಲು ಪೂರ್ಣ ಪ್ರಮಾಣದಲ್ಲಿ ಸಹಕಾರ ಕೊಡುತ್ತೇನೆ. ಮುಖ್ಯಮಂತ್ರಿಯನ್ನು ಒಪ್ಪಿಸಿ ಜಾಗ ಮಂಜೂರು ಮಾಡಿಸಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ತಿಗಳರ ಅಭಿವೃದ್ಧಿ ನಿಗಮ ಸ್ಥಾಪಿಸಿ, ₹100 ಕೋಟಿ ಅನುದಾನ ಕೊಡಿಸಬೇಕು, ಅಗ್ನಿ ಬನ್ನಿರಾಯಸ್ವಾಮಿ ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಣೆ ಮಾಡಬೇಕು ಎಂಬ ಬೇಡಿಕೆಗೆ ಸ್ಪಂದಿಸಿದ ಅವರು, ಇಂದೇ ಮುಖ್ಯಮಂತ್ರಿ ಜತೆಗೆ ಮಾತನಾಡಿ, ನಿಗಮ ಸ್ಥಾಪಿಸುವಂತೆ ಒತ್ತಾಯಿಸಲಾಗುವುದು. ಜಯಂತಿ ಆಚರಣೆಗೂ ಕ್ರಮ ವಹಿಸುವಂತೆ ಕೋರಲಾಗುವುದು ಎಂದು ಹೇಳಿದರು.

ಸಂಸತ್ ಸದಸ್ಯ ಜಿ.ಎಸ್.ಬಸವರಾಜು, ಬಿಜೆಪಿ ಮುಖಂಡ ಬಿ.ಸುರೇಶ್‌ಗೌಡ,ಶಾಸಕ ಜ್ಯೋತಿಗಣೇಶ್, ರಾಜ್ಯ ತಿಗಳ ಮಹಾಸಭಾ ಅಧ್ಯಕ್ಷ ಸುಬ್ಬಣ್ಣ ವೇದಿಕೆಯಲ್ಲಿದ್ದರು.

ಪ್ರವರ್ಗ–1ಕ್ಕೆ ಸೇರ್ಪಡೆ: ಭರವಸೆ

ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿರುವ ತಿಗಳ ಸಮುದಾಯವನ್ನು ಪ್ರವರ್ಗ-1ಕ್ಕೆ ಸೇರಿಸಬೇಕೆಂಬ ಬೇಡಿಕೆಯನ್ನು ಮುಖ್ಯಮಂತ್ರಿ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಗಮನಕ್ಕೆ ತಂದು, ಸೂಕ್ತ ನ್ಯಾಯ ಕೊಡಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭರವಸೆ ನೀಡಿದರು.

‘ಅಗ್ನಿ ಬನ್ನಿರಾಯರ ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು. ಸಮುದಾಯದ ಬಗ್ಗೆ ಹಾಡುವ ಸಿ.ಡಿ ಬಿಡುಗಡೆ ಮಾಡಿ, ಅಗ್ನಿ ಬನ್ನಿರಾಯಸ್ವಾಮಿ ಭಾವಚಿತ್ರ ಅನಾವರಣಗೊಳಿಸಿದರು.

ಮೆರವಣಿಗೆ ಜಯಂತ್ಯುತ್ಸವದ ಪ್ರಯುಕ್ತ ಅಗ್ನಿ

ಬನ್ನಿರಾಯಸ್ವಾಮಿ ಮೆರವಣಿಗೆಗೆ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾಸ್ವಾಮಿ ಚಾಲನೆ ನೀಡಿದರು. ಶಾಸಕ ಡಿ.ಸಿ.ಗೌರಿಶಂಕರ್ ಇತರರು ಇದ್ದರು. ಇಡೀ ತಿಗಳ ಸಮುದಾಯದ ಸಾವಿರಾರು ಜನರು ಭಾಗವಹಿಸಿದ್ದರು. ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT