ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವನಕ್ಕೆ ಬುದ್ಧ ಮಾರ್ಗವೇ ದಾರಿ: ನಟರಾಜ ಬೂದಾಳು

ಜಿ.ವಿ.ಆನಂದಮೂರ್ತಿ ಅವರ ‘ಬುದ್ದನ ಕಥೆಗಳು’ ಕೃತಿ ಬಿಡುಗಡೆ
Last Updated 20 ಸೆಪ್ಟೆಂಬರ್ 2021, 9:01 IST
ಅಕ್ಷರ ಗಾತ್ರ

ತುಮಕೂರು: ‘ಬುದ್ಧ ಮಾರ್ಗದಲ್ಲಿ ಬದುಕುವುದೇ ಸರಿಯಾದ ದಾರಿಯಲ್ಲಿ ಸಾಗುವುದಾಗಿದೆ. ತಪ್ಪಾಗಿ ಬದುಕದಿರುವುದೇ ಬುದ್ದ ಮಾರ್ಗ’ ಎಂದು ಲೇಖಕ ನಟರಾಜ ಬೂದಾಳು ಇಲ್ಲಿ ಭಾನುವಾರ ಅಭಿಪ್ರಾಯಪಟ್ಟರು.

ಬೋಧಿ ಮಂಡಲ, ಪ್ರೀತಿ ಪುಸ್ತಕ ಪ್ರಕಾಶನ ಹೊರ ತಂದಿರುವ ಕಥೆಗಾರ ಜಿ.ವಿ.ಆನಂದಮೂರ್ತಿ ಅವರ ‘ಬುದ್ದನ ಕಥೆಗಳು’ ಕೃತಿ ಬಿಡುಗಡೆಮಾಡಿ ಮಾತನಾಡಿದರು.

ವಿಜ್ಞಾನದ ಯಾವುದೇ ಶೋಧನೆಗೂ ಕೊನೆ ಎಂಬುದಿಲ್ಲ. ಅದೇ ರೀತಿಯಲ್ಲಿ ಬೌದ್ಧ ತಾತ್ವಿಕತೆಗೂ ಕೊನೆ ಇಲ್ಲ. ಬೌದ್ದ ತತ್ವಗಳು, ದರ್ಶನಗಳು, ಮಾರ್ಗಗಳನ್ನು ಮುಂದುವರಿಸಿಕೊಂಡು ಹೋಗಬಹುದು. ಬೌದ್ಧ ತಾತ್ವಿಕತೆ, ಬುದ್ಧ ಮಾರ್ಗವೆಂದರೆ ಬಿತ್ತಿ, ಬೆಳೆಯುವುದಾಗಿದೆ. ಸನ್ಮಾರ್ಗದಲ್ಲಿ ನಡೆಯುವುದೇ ಆಗಿದೆ ಎಂದು ಅವರು ಹೇಳಿದರು.

ಬೌದ್ಧ, ಜೈನ ಧರ್ಮದ ಕಥಾಕೋಶ ಸಾಕಷ್ಟು ವಿಸ್ತಾರವಾಗಿದ್ದು, ಜೀವನಪೂರ್ತಿ ಓದಿದರೂ ಓದಿ ಮುಗಿಸಲು ಸಾಧ್ಯವಿಲ್ಲ. ಕಥೆ, ಸಂಗೀತ, ಸಾಹಿತ್ಯ, ಧರ್ಮ ಒಂದು ಹಂತಕ್ಕೆ ಮೈಮರೆಸುತ್ತದೆ. ಆದರೆ ಕಥೆಗಳು ತತ್ವಗಳಾಗಿ ಪರಿವರ್ತನೆ ಆಗದಿದ್ದರೆ ವ್ಯರ್ಥವಾಗುತ್ತವೆ. ಕಥೆ ಯಾವ ತತ್ವ, ವಿಚಾರಗಳನ್ನು ನಮ್ಮ ಮುಂದಿಡುತ್ತದೆ ಎಂಬುದೂ ಮುಖ್ಯವಾಗುತ್ತದೆ. ಬುದ್ಧನ ಕಥೆಗಳು ನಿರ್ದಿಷ್ಟ ತಾತ್ವಿಕ ವಿಚಾರಗಳನ್ನು ತೆರೆದಿಡುತ್ತದೆ ಎಂದು ತಿಳಿಸಿದರು.

ಬುದ್ಧನ ತಾತ್ವಿಕತೆ, ವಿಚಾರಗಳನ್ನು ಕಸುಬಿನ ಮೂಲಕ ತಿಳಿದುಕೊಳ್ಳುವುದೇ ಆಗಿದೆ. ರೈತ ಅನ್ನ ಬೆಳೆದುಕೊಡುವುದೇ ‘ಅನ್ನ ಮಾರ್ಗ’ವಾಗಿದೆ. ಬುದ್ಧನ ಅರ್ಥಮಾಡಿಕೊಳ್ಳಲು, ವಿಚಾರ ತಿಳಿದುಕೊಳ್ಳಲು ಮುಕ್ತ, ತೆರೆದ ಮನಸ್ಸು ಬೇಕು ಎಂದರು.

ಬುದ್ಧನ ಕೊನೆ ಮಾತು ‘ನಿನ್ನೊಳಗಿರುವ ದೀಪವನ್ನು ಹಚ್ಚಿಕೊ’ ಎಂಬುದಾಗಿತ್ತು. ಜಿ.ವಿ.ಆನಂದಮೂರ್ತಿ ಅವರ ಬುದ್ಧನ ಕಥೆಗಳು ಪುಸ್ತಕದಲ್ಲಿರುವ 20 ಕಥೆಗಳು ಜೀವನದ ದೀಪ ಹಚ್ಚಿಕೊಳ್ಳಲು ಬೇಕಾದ ಕಿಡಿಯನ್ನು ನೀಡುತ್ತದೆ ಎಂದು ಕೃತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಲೇಖಕ ಜಿ.ವಿ.ಆನಂದಮೂರ್ತಿ ಮಾತನಾಡಿ, ‘ಬುದ್ಧನ ಮಾತುಗಳು ಒಂದು ಭಾಷೆ, ದೇಶ, ಧರ್ಮಕ್ಕೆ ಸೀಮಿತವಲ್ಲ. ಇಡೀ ಜಗತ್ತಿಗೆ ಬೆಳಕು ನೀಡುತ್ತವೆ. ಬುದ್ಧನ ವಿಚಾರಗಳು ಚಿಂತನೆಗಳಾಗಿದ್ದಾಗ ಸುಮ್ಮನಿರುತ್ತಾರೆ. ಜಾರಿಗೆ ಬಂದಾಗ, ಕ್ರಿಯಾ ರೂಪ ಪಡೆದುಕೊಂಡಾಗ ದೃಷ್ಟ ಶಕ್ತಿಗಳು ಹೊರಗೆ ಬರುತ್ತವೆ. ಅನುಷ್ಠಾನ ಸಮಯದಲ್ಲಿ ಗೋವುಗಳು ವ್ಯಗ್ರಗಳಾಗುವುದನ್ನು ಚರಿತ್ರೆಯಲ್ಲಿ ಕಾಣಬಹುದು’ ಎಂದು ಹೇಳಿದರು.

ಬೌದ್ಧ ಚಿಂತನೆಗಳು ಹಾಗೂ ವಚನಕಾರರು ದಾಳಿಗೆ ಒಳಗಾಗಿದ್ದಾರೆ. ಸಾಕಷ್ಟು ವಿರೋಧಗಳನ್ನು ಎದುರಿಸಿದ್ದಾರೆ. ಹಿಂದೆಯೂ ನಡೆದಿವೆ, ಈಗಲೂ ದಾಳಿಗಳು ನಡೆಯುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಚಿಂತಕರಾದ ಚೇತನಾ ಬಾಲಕೃಷ್ಣ, ‘ಬುದ್ಧ ತನ್ನ ಚಿಂತನೆಗಳನ್ನು ಹೇಳುತ್ತಾ ಹೋಗುತ್ತಾರೆ. ಆ ಮಾರ್ಗದಲ್ಲಿ ಸಾಗಬೇಕು ಎಂದು ಹೇಳುವುದಿಲ್ಲ. ಅದೇ ಅವರ ತತ್ವಗಳ ವಿಶೇಷತೆ. ಅದೇ ನಮಗೂ ಹೆಚ್ಚು ಇಷ್ಟವಾಗುವುದು. ಜಿ.ವಿ.ಆನಂದಮೂರ್ತಿ ಅವರ ಪುಸ್ತಕದಲ್ಲಿ ಇರುವ ಕಥೆಗಳು ಒಂದಕ್ಕಿಂತ ಒಂದು ಚೆನ್ನಾಗಿವೆ, ವಿಭಿನ್ನವಾಗಿವೆ’ ಎಂದು ಅಭಿಪ್ರಾಯಪಟ್ಟರು.

‘ನಾನು ಕೆಳಹಂತದ ಹುದ್ದೆಯಲ್ಲಿ ಇದ್ದಾಗ ಸಮಸ್ಯೆಗಳು ಇರಲಿಲ್ಲ. ಅಧಿಕಾರದಂತಹ ಹುದ್ದೆಗೆ ಬಂದ ಮೇಲೆ ಭ್ರಷ್ಟಾಚಾರ ಮಾಡದೆ ಕೆಲಸ ಮಾಡುವುದು ಕಷ್ಟಕರವಾಗಿದೆ. ಇದರಿಂದ ದೂರ ಉಳಿದಾಗ ಸಮಸ್ಯೆಗಳನ್ನೂ ಎದುರಿಸಿದ್ದೇನೆ. ಆದರೆ ಅದು ನನ್ನ ಮಾರ್ಗವಲ್ಲ ಎಂಬುದನ್ನು ಕಂಡುಕೊಂಡದ್ದೇನೆ. ಬುದ್ಧ ಮಾರ್ಗ ದಾರಿ ತೋರಿಸಿದೆ’ ಎಂದರು.

ಚಿಂತಕ ಪ್ರೊ.ಎಚ್.ಎಂ.ರುದ್ರಸ್ವಾಮಿ, ಪ್ರಕಾಶಕ ದೊಡ್ಡಹುಲ್ಲೂರು ರುಕ್ಕೋಜಿ,ಬೋಧಿ ಮಂಡಲದ ಡಾ.ಬಸವರಾಜು, ಗುರುಪ್ರಸಾದ್ ಕಂಟಲಗೆರೆ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT