ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿರವಿದ್ದೂ ದೂರ ನಿಲ್ಲುವೆವು...

Last Updated 9 ಮೇ 2018, 19:30 IST
ಅಕ್ಷರ ಗಾತ್ರ

ತರಕಾರಿ ಪಲ್ಯವನ್ನು ಚಟ್ನಿ-ಸಾಂಬರ್‌ನಂತೆ ಭ್ರಮಿಸಿ ತುಂಡು ಮಾಡಿದ್ದ ಚಪಾತಿ ಚೂರನ್ನು ಅದಕ್ಕೆ ತಾಗಿಸಿ ಇನ್ನೇನು ದಂತಪಂಕ್ತಿಗಳ ಮಧ್ಯೆ ಸಿಲುಕಿಸಬೇಕು... ಕೀಲಿಕೊಟ್ಟ ಗೊಂಬೆ ತಟಕ್ಕನೆ ನಿಂತಂತೆ ಆಕೆಯ ತೆರೆದ ಬಾಯಿ, ಕೈ ಚಲನೆ ಇದ್ದಕ್ಕಿದ್ದಂತೆ ಸ್ತಬ್ಧ! ಅರೆಕ್ಷಣದಲ್ಲೇ ಮಂದಹಾಸ, ಕಣ್ಣಲ್ಲಿ ಹೊಳಪು ಮಿಂಚಿ ಮರೆಯಾಯಿತು. ಅರೆ, ಆಕೆಯ ತಲೆ ಬಾಗುತ್ತಿದೆ...

ಅವಳನ್ನು ಸೆಳೆಯುತ್ತಿರುವುದು ತಟ್ಟೆಯ ಪಕ್ಕದಲ್ಲಿನ ಐದು ಇಂಚಿಗೂ ದೊಡ್ಡ ಪರದೆಯ ನೆಚ್ಚಿನ ಸ್ಮಾರ್ಟ್‌ಫೋನ್. ಇದ್ದಕ್ಕಿದ್ದಂತೆ ಏನು ಸೆಳೆಯಿತು ಆಕೆಯನ್ನು? ಅದರಲ್ಲಿನ ವ್ಯಾಟ್ಸ್ ಆ್ಯಪ್‌... ಇಲ್ಲ ಫೇಸ್‍ಬುಕ್... ಟ್ವಿಟರ್?

ಊಂ ಹು... ಬಹುಶಃ ಇನ್‍ಸ್ಟಾಗ್ರಾಂ ಇರಬಹುದು. ಕ್ಯಾಂಟೀನ್‍ಗೆ ನನಗಿಂತಲೂ ಸರಸರನೆ ಬಂದು ಅಗತ್ಯಕ್ಕಿಂತ ಹೆಚ್ಚೇ ತಟ್ಟೆಯಲ್ಲಿ ತುಂಬಿ ಕುಳಿತ ಆಕೆ ಆಸ್ವಾದಿಸುತ್ತಿರುವುದು ಸ್ಮಾರ್ಟ್‌ಫೋನ್ ಉಣಬಡಿಸುತ್ತಿರುವ ಥರಾವರಿ ಭಾವದ ಸಂದೇಶ ಹಾಗೂ ಪ್ರಕಟಣೆಗಳನ್ನು. ಊಟ ಮುಗಿಯಲು ಡಾಟಾ ಸಂಪರ್ಕ ಕಡಿತಗೊಳ್ಳಬೇಕು, ಇಲ್ಲವೇ ಬ್ಯಾಟರಿ ಚಾರ್ಜ್ ಕಳೆದುಕೊಳ್ಳಬೇಕು ಅಥವಾ ಕ್ಯಾಂಟಿನ್ ಸಮಯ ಮುಗಿಯಬೇಕು.

ಮಾನವ ಸಹಜ ಸಂಬಂಧಗಳನ್ನು ಈ ತಂತ್ರಜ್ಞಾನ ಕಸಿಯುತ್ತಿದೆಯೇ ಅಥವಾ ನಾವೇ ತಂತ್ರಜ್ಞಾನಕ್ಕೆ ಶರಣಾಗಿ ನಮ್ಮತನವನ್ನು ಒತ್ತೆಯಿಟ್ಟಿದ್ದೇವಾ?

ಮನೆಯಲ್ಲಿ ತಂದೆ-ತಾಯಿ ಹೇಳುವುದಕ್ಕೆಲ್ಲ ‘ಹೂಂ...’ ಗುಡುವ ಮಕ್ಕಳ ಲಕ್ಷ್ಯ ಪೂರ್ಣ ಕೈಲಿರುವ ಸ್ಮಾರ್ಟ್‌ಫೋನ್ ಮೇಲೆಯೇ. ಮನೆ, ಆಫೀಸು, ಬಸ್, ಮೆಟ್ರೊ, ಕಾಲೇಜು, ರಸ್ತೆ, ಅಂಗಡಿ,...ಬಹುತೇಕ ಎಲ್ಲ ಕಡೆಯೂ ಇಂಥ ಹತ್ತಾರು ಉದಾಹರಣೆಗಳು ನಮಗೆ ಎದುರಾಗುತ್ತಲೇ ಇರುತ್ತವೆ. ಅತ್ಯಂತ ಮುಖ್ಯ ವಿಚಾರ ಪ್ರಸ್ತಾಪಿಸುವಾಗಲೂ ಮುಂದುವರಿಯುವ ಈ ಚಾಳಿ ಮನಸ್ತಾಪವನ್ನು ಗುಡ್ಡ ಮಾಡುತ್ತಿದೆ.

‌ ಬೌದ್ಧಿಕತೆಯ ಹೈಜಾಕ್ 
‘ತಂತ್ರಜ್ಞಾನ ಇಡೀ ಜಗತ್ತನ್ನು ಪುಟ್ಟ ಹಳ್ಳಿಯಾಗಿಸುತ್ತಿದೆ’- ಅಂತರ್ಜಾಲ, ಕಂಪ್ಯೂಟರ್ ಹಾಗೂ ಸ್ಮಾರ್ಟ್‌ಫೋನ್‌ಗಳ ಕ್ರಾಂತಿಕಾರಕ ಬೆಳೆವಣಿಗೆಯಿಂದ ಈ ಮಾತು ನಿಜವಾಯಿತು. ನಾಗಮಂಗಲದಿಂದ ನ್ಯೂಯಾರ್ಕ್, ಸಿಡ್ನಿಯಿಂದ ಸಂತೆಪೇಟೆ, ಪಿರಿಯಾಪಟ್ಟಣದಿಂದ ಪ್ಯಾರಿಸ್‌ಗೆ ಇರುವ ಸಾವಿರಾರು ಕಿ.ಮೀ. ಅಂತರವನ್ನು ತಂತ್ರಜ್ಞಾನ ಬೆರಳಂಚಿನ ಒಂದು ಕ್ಲಿಕ್‍ನಷ್ಟು ಕಿರಿದಾಗಿಸಿದೆ. ಎಲ್ಲಿಂದೆಲ್ಲಿಗೆ, ಯಾರು ಯಾರನ್ನು ಬೇಕಾದರೂ ಸಂಪರ್ಕಿಸಬಹುದಾದ ವ್ಯವಸ್ಥೆ ಸಮೀಪದ ಮನುಷ್ಯನನ್ನೇ ದೂರಾಗಿಸುತ್ತಿದೆ. ಇಡೀ ಜಗತ್ತು ಹೆಚ್ಚೆಚ್ಚು ಹತ್ತಿರವಾಗುತ್ತಿದ್ದಂತೆ ಮಾನವ ಸಂಬಂಧಗಳು ದೂರಾಗುತ್ತಿವೆ.

‘....ಹತ್ತಿರವಿದ್ದೂ ದೂರ ನಿಲ್ಲುವೆವು

ನಮ್ಮ ಅಹಮ್ಮಿನ ಕೋಟೆಯಲಿ....’

ಜಿ.ಎಸ್.ಶಿವರುದ್ರಪ್ಪನವರ ಈ ಸಾಲುಗಳು ಆಧುನಿಕ ತಂತ್ರಜ್ಞಾನ ಯುಗದಲ್ಲಿ ನಮ್ಮ-ನಮ್ಮವರ ನಡುವಿನ ಸಂಬಂಧಗಳನ್ನು ಧ್ವನಿಸಿದಂತೆ ಕೇಳಿಸುತ್ತಿವೆ. ಹೊಸತನ್ನು ನೀಡುತ್ತಿರುವ ತಂತ್ರಜ್ಞಾನದ ಅಭಿವೃದ್ಧಿ ನಮ್ಮೊಳಗೆ ಹೊಸ ಜಗತ್ತನ್ನು ಕಟ್ಟುತ್ತಿದೆ. ಆ ಡಿಜಿಟಲ್ ಲೋಕದಲ್ಲಿ ತೇಲುತ್ತ ವಾಸ್ತವದಿಂದ, ನೈಜತೆಯಿಂದ ದೂರ ಉಳಿಯುತ್ತಿದ್ದೇವೆ.

ಹೆಸರು, ಫೋಟೊ ಸೇರಿದ ಮಾಹಿತಿಯೊಂದಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಜಾಗತಿಕವಾಗಿ ಸೇರಿ ಹೋಗಿರುವ ಮನುಷ್ಯ, ಕ್ಷಿಪ್ರ ತಂತ್ರಜ್ಞಾನದ ಸಂದರ್ಭದಲ್ಲಿ ಬೌದ್ಧಿಕವಾಗಿ ಬೆಸೆಯುವುದು ಸಾಧ್ಯವಾಗಿದೆಯೇ? ಮನುಷ್ಯನ ಮನಸ್ಸಿನಲ್ಲಿ ಏಳುವ ಭಾವನೆ, ಸಂವೇದನೆಗಳ ಪರಿವರ್ತನೆ ಸಾಧ್ಯವಾಗುವುದು ಆಪ್ತ ಸಮಾಲೋಚನೆಯಿಂದ. ಆದರೆ, ಬಂಡವಾಳ, ಜಾಹೀರಾತು, ಮಾರುಕಟ್ಟೆ ಹಾಗೂ ಗಳಿಕೆಯ ನೆಲೆಯ ಮೇಲೆ ಆಗುತ್ತಿರುವ ತಂತ್ರಜ್ಞಾನದ ಸುಧಾರಣೆ ಬೌದ್ಧಿಕತೆಯನ್ನು ಹೈಜಾಕ್ ಮಾಡಿದೆ. ಮಾನವೀಯತೆ ಕಳೆದುಕೊಂಡ ‘ವಿಶ್ವಮಾನವ’ ತಂತ್ರಜ್ಞಾನದಲ್ಲಿ ಬಂಧಿಯಾಗುತ್ತಿದ್ದಾನೆ. ಈಗಂತೂ ವೈಯಕ್ತಿಕ ಮಾಹಿತಿಯೇ ಅಂತರ್ಜಾಲ ಮಾರುಕಟ್ಟೆಗೆ ದೊಡ್ಡ ಸರಕು.

ಬದಲಾವಣೆ ಈ ಪರಿ
ಕೈಲಿದ್ದ ಮೊಬೈಲ್‍ಗಳು ಸ್ಮಾರ್ಟ್ ಆಗಿ ವಾಟ್ಸ್‌ ಆ್ಯಪ್, ಫೇಸ್‍ಬುಕ್ ಮೆಸೆಂಜರ್‌ಗಳು ಪಿಸುಗುಡುವ ತನಕ ‘ಎಸ್‍ಎಂಎಸ್’ ಸಕಲರ ಪಾಲಿಗೆ ಸಂದೇಶ ಮುಟ್ಟಿಸುವ ದೇವಧೂತನಂತಿದ್ದ. ಈಗಂತೂ ನಿತ್ಯ ಸಿಗುವ ಒಂದು ಜಿ.ಬಿ. ಮೊಬೈಲ್ ಡಾಟಾ ಖಾಲಿ ಆದಾಗ, ಇಲ್ಲವೇ ನೆಟ್‌ವರ್ಕ್‌ ಸಿಗದಾಗ ಅಥವಾ ಮತ್ತೊಬ್ಬರ ಜತೆಗೆ ಮೀಟಿಂಗ್-ಚಾಟಿಂಗ್‍ನಲ್ಲಿ ಬ್ಯುಸಿಯಾಗಿರುವಾಗ ಬರುವ ಕರೆಗಳಿಗೆ ತಕ್ಷಣ ‘ಐಮ್ ಇನ್ ಮೀಟಿಂಗ್’, ‘ಕಾಲ್ ಯು ಲೇಟರ್’ ಎಂಬುದನ್ನು ತಲುಪಿಸಲು, ಇಲ್ಲವೇ ಬ್ಯಾಂಕ್ ಬ್ಯಾಲೆನ್ಸ್ ಕಡಿತಗೊಂಡ ಮೊತ್ತ, ಪಾವತಿಸಬೇಕಾದ ಬಿಲ್‍ಗಳ ಬಗ್ಗೆ ನೆನಪಿಸುವ ಸಂದೇಶಗಳಿಗಾಗಿ ಮಾತ್ರ ಎಸ್‍ಎಂಎಸ್ ಬಳಕೆಯಾಗುತ್ತಿದೆ.

ಹದಿನೈದು ವರ್ಷಗಳ ಹಿಂದೆ...
ಮೊಬೈಲ್‍ಗೆ ಸ್ಥಳೀಯ ಒಳಕರೆ (ಇನ್‍ಕಮಿಂಗ್ ಕಾಲ್) ಬಂದರೂ ಬಿಲ್ ಆಗುತ್ತಿದ್ದ ಕಾಲದಲ್ಲಿ ರಿಲಯನ್ಸ್ ಕಂಪನಿ ಮಧ್ಯಮ ವರ್ಗದವರಿಗೂ ಕೈಗೆಟುಕುವ ಬೆಲೆಯಲ್ಲಿ ಮೊಬೈಲ್ ಸೆಟ್ ಬಿಡುಗಡೆ ಮಾಡಿತ್ತು. ಇದರೊಂದಿಗೆ ಉಚಿತ ಒಳಕರೆಗಳು ಹಾಗೂ ಆಕರ್ಷಕ ಕಿರುಸಂದೇಶ (ಎಸ್‍ಎಂಎಸ್) ಪ್ಯಾಕೇಜ್ ಕೂಡ ನೀಡಿತ್ತು. ಅಲ್ಲಿಂದ ಮುಂದೆ ‘ಕರೆ ದರ’ ಸಮರ ಹಾಗೂ ಹೊಸ ದೂರ ಸಂಪರ್ಕ ಸೇವಾಧಾರ ಸಂಸ್ಥೆಗಳ ಪ್ರವೇಶದಿಂದ ದರ ಇಳಿಕೆಯಾಯಿತು.

ಆದರೆ, ಯುವಜನತೆ ಆಕರ್ಷಿತರಾಗಿದ್ದು ಅಧಿಕ ಉಚಿತ ಎಸ್‍ಎಂಎಸ್ ಆಯ್ಕೆ ನೀಡುವ ಕಂಪನಿಗಳತ್ತ. ಅನೇಕರ ನಿದ್ದೆಗೆಡಿಸುವಷ್ಟು ಚಟವಾಗಿ ಆವರಿಸಿಕೊಂಡ ಎಸ್‍ಎಂಎಸ್ ಮೊದಲ ಬಾರಿಗೆ ರವಾನೆಯಾಗಿದ್ದು 25 ವರ್ಷಗಳ ಹಿಂದೆ ಕ್ರಿಸ್‍ಮಸ್ ಶುಭಾಶಯಗಳೊಂದಿಗೆ.

ಮೊದಲ ಸಂದೇಶ: ಸಾಫ್ಟ್‌ವೇರ್ ಪ್ರೋಗ್ರಾಮರ್ ಆಗಿದ್ದ 22 ವರ್ಷದ ನೀಲ್ ಪಾಪ್‍ವರ್ಥ್ 1992ರ ಡಿಸೆಂಬರ್ 3ರಂದು ತನ್ನ ಸಹೋದ್ಯೋಗಿಗೆ ‘ಮೆರಿ ಕ್ರಿಸ್‍ಮಸ್’ ಎಂಬ ಎರಡು ಪದಗಳ ಸಂದೇಶ ಕಳುಹಿಸಿದರು. ವೊಡಾಫೋನ್‍ಗಾಗಿ ಕಿರು ಸಂದೇಶ ರೂಪಿಸುತ್ತಿದ್ದ ನೀಲ್ ತನ್ನ ಕಂಪ್ಯೂಟರ್ ಮೂಲಕ ರಿಚರ್ಡ್ ಜಾರ್ವಿಸ್‍ಗೆ ಮೊದಲ ಎಸ್‍ಎಂಎಸ್ ರವಾನಿಸಿದ್ದರು.

ಇದಾಗಿ ಒಂದು ವರ್ಷದ ಬಳಿಕ ‘ನೋಕಿಯಾ’ ಮೊಬೈಲ್‍ನಲ್ಲಿ ಎಸ್‍ಎಂಎಸ್ ಆಯ್ಕೆ ಪ್ರಾರಂಭಿಸಿತು. ಸಂದೇಶ ಬರುವುದನ್ನು ಗಮನಿಸಲು ಬೀಪ್ ಶಬ್ದ ಅಳವಡಿಸಲಾಗಿತ್ತು. ಆಗಿನ ಕಿರುಸಂದೇಶ ಮಿತಿ 160 ಅಕ್ಷರಗಳು. ಕಡಿಮೆ ಅಕ್ಷರಗಳ ಮೂಲಕ ಹೆಚ್ಚು ವಿಷಯ ಮುಟ್ಟಿಸಲು ‘ಕಿರು ನುಡಿ’ಗಳನ್ನು ಕಂಡುಕೊಳ್ಳ
ಲಾಯಿತು. Please ಬದಲು pls, Thanks ಬದಲು Tq, laughing out loud ಬದಲು LOL, Girl friend ಪದಕ್ಕೆ GF, MU ಎಂದರೆ I miss you, HAND ಎಂದರೆ Have a nice day, ನಗುವಿನ ಬದಲು :–) ಹೀಗೆ ಅನಿವಾರ್ಯತೆಯಲ್ಲಿ ಸಿಲುಕಿದ್ದ ಯುವ ಮನಸುಗಳಿಂದ ಹೊಸದೊಂದು ಭಾಷೆಯೇ ಸೃಷ್ಟಿಯಾಯಿತು. ಇದೇ ಭಾಷೆ ಕಾಲೇಜು ಪರೀಕ್ಷೆಗಳಲ್ಲಿಯೂ ವಿದ್ಯಾರ್ಥಿಗಳು ಬಳಸುತ್ತಿರುವುದು ಪ್ರಾಧ್ಯಾಪಕರಿಗೆ ಇಂದಿಗೂ ತಲೆನೋವು ತರಿಸುತ್ತಿದೆ.

ಮೊದಲ ಸಂದೇಶ ಕಳುಹಿಸಿ ಏಳು ವರ್ಷಗಳ ಬಳಿಕ 1999ರಲ್ಲಿ ಬೇರೆ ಬೇರೆ ನೆಟ್‍ವರ್ಕ್‍ಗಳ ಮೂಲಕ ಸಂದೇಶ ಪಡೆಯುವುದು, ಕಳುಹಿಸುವುದು ಸಾಧ್ಯವಾಯಿತು. 25 ವರ್ಷದ ಎಸ್‍ಎಂಎಸ್‍ಗೆ ಇಂದಿನ ನವಯುಗದಲ್ಲಿ ಅಪರೂಪದ ಅತಿಥಿಯ ಸ್ಥಾನ.
ನೀನಿಲ್ಲದೆ ನನಗೇನಿದೆ...

ಒಂದು ದಿನ, ಒಂದೆರಡು ಗಂಟೆ, ನಿಮಿಷ ಕೂಡ ಬಿಟ್ಟಿರಲಾರದ ಬಂಧ-ಬಂಧನ ವಾಟ್ಸ್‌ ಆ್ಯಪ್‌ನೊಂದಿಗೆ ಗಟ್ಟಿಯಾಗಿದೆ. ಕಳೆದ ವರ್ಷದ ಕೊನೇ ದಿನ ತಾಂತ್ರಿಕ ಕಾರಣಗಳಿಂದಾಗಿ ಭಾರತ ಸೇರಿ ಜಗತ್ತಿನ ಹಲವು ಭಾಗಗಗಳಲ್ಲಿ ಒಂದು ಗಂಟೆ ವಾಟ್ಸ್‌ ಆ್ಯಪ್‌ ಕಾರ್ಯಾಚರಣೆ ಸ್ಥಗಿತಗೊಂಡಿತ್ತು. ಹೊಸ ವರ್ಷದ ಸಂದೇಶ ಕಳಿಸಬೇಕು, ವರ್ಷದ ಚೊಚ್ಚಲ ಫೋಟೊ ಕಳಿಸಬೇಕು ಎಂದೆಲ್ಲ ಕಾದಿದ್ದವರು ಚಡಪಡಿಸುವಂತಾಯಿತು.

ಡಾಟಾ ಆಫ್-ಆನ್, ಒಮ್ಮೆ ಏರೋಪ್ಲೇನ್ ಮೋಡ್, ಸ್ವಿಚ್ಡ್‌ ಆಫ್ ಮಾಡಿ ಬ್ಯಾಟರಿ ತೆಗೆದು, ಸಿಮ್ ತೆಗೆದು, ಮೊಬೈಲ್ ತಟ್ಟಿ-ಕುಟ್ಟಿ ಏನೆಲ್ಲ ಮಾಡಿದರೂ ವಾಟ್ಸ್‌ಆ್ಯಪ್‌ ಗೆರೆಗಳು ಮೂಡಲೇ ಇಲ್ಲ. ತಾಳ್ಮೆ ಕಳೆದುಕೊಂಡವರು, ಗೊಂದಲದಲ್ಲಿದ್ದವರು ಒಟ್ಟಾರೆ ವಾಟ್ಸ್‌ ಆ್ಯಪ್‌ ಬಳಕೆದಾರರು ಟ್ವಿಟರ್ ಪ್ರವೇಶಿಸಿ ‘#ವಾಟ್ಸ್‌ ಆ್ಯಪ್‌ ಸ್ಲೋಡೌನ್’ ಹ್ಯಾಷ್‍ಟ್ಯಾಗ್ ಮೂಲಕ ಟೀಕೆ, ಟ್ರೋಲ್‍ಗಳನ್ನು ಸೃಷ್ಟಿಸಿದರು.
ಯಾಹೂ ಕಂಪನಿಯಿಂದ ಹೊರ ಬಂದು ಕೆಲಸಕ್ಕೆ ಬ್ರೇಕ್ ತೆಗೆದು ಕೊಂಡಿದ್ದ ಜಾನ್ ಕೋಮ್ ಮತ್ತು ಬ್ರಿಯಾನ್ ಆ್ಯಕ್ಟನ್ 2009ರಲ್ಲಿ ಸಂದೇಶ ರವಾನಿಸುವ ಹೊಸ ಅಪ್ಲಿಕೇಷನ್ ಆಗಿ ವಾಟ್ಸ್‌ ಆ್ಯಪ್‌ ಬಿಡುಗಡೆ ಮಾಡಿದರು. ಪ್ರಾರಂಭದಲ್ಲಿ ಐಫೋನ್‍ಗಳಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಈ ಅಪ್ಲಿಕೇಷನ್ ಆ್ಯಂಡ್ರಾಯ್ಡ್ ಮೊಬೈಲ್‍ಗಳಲ್ಲಿಯೂ ಬಿಡುಗಡೆಯಾಗುತ್ತಿದ್ದಂತೆ ಬಳಕೆದಾರರ ಸಂಖ್ಯೆಯೂ ಹೆಚ್ಚಿತು. ಜಗತ್ತಿನಾದ್ಯಂತ ಈ ಆ್ಯಪ್‌ ಹೆಚ್ಚು ಜನರನ್ನು ಸೆಳೆಯುತ್ತಿದ್ದಂತೆ ಫೇಸ್‍ಬುಕ್ ತನ್ನ ತೆಕ್ಕೆಗೆ ತೆಗೆದುಕೊಂಡಿತು.

ಮೂರನೇ ವ್ಯಕ್ತಿಗೆ ದತ್ತಾಂಶ ಸೋರಿಕೆಯಾಗದಂತೆ 2014ರ ನವೆಂಬರ್‌ನಿಂದಲೇ ವಾಟ್ಸ್‌ ಆ್ಯಪ್‌ ಪಠ್ಯ ಸಂದೇಶಗಳಿಗೆ ಗೂಢಲಿಪಿ ತಂತ್ರಜ್ಞಾನ ಬಳಸುತ್ತಿದೆ. ಈಗ ಬಹುಮಾಧ್ಯಮ ಸಂದೇಶಗಳಿಗೂ ಅದನ್ನು ವಿಸ್ತರಿಸಲಾಗಿದೆ. ಇದೀಗ ವಾಟ್ಸ್‌ ಆ್ಯಪ್‌ ಬ್ಯುಸಿನೆಸ್ ಅಪ್ಲಿಕೇಷನ್ ಕೂಡ ಬಳಕೆಗೆ ಬಂದಿದೆ.

ಇದರೊಂದಿಗೆ ಟೆಲಿಗ್ರಾಂ, ಸ್ಕೈಪ್, ಫೇಸ್‍ಬುಕ್ ಮೆಸೆಂಜರ್, ವಿಚ್ಯಾಟ್ ಹಾಗೂ ಐಎಂಒ (ಇಮೊ) ಸೇರಿ ಇನ್ನು ಅನೇಕ ಆ್ಯಪ್‍ಗಳು ಜಗತ್ತಿನಾದ್ಯಂತ ಸಂದೇಶ ರವಾನೆ, ವಿಡಿಯೊ ಚಾಟಿಂಗ್‍ಗಾಗಿ ಬಳಕೆಯಲ್ಲಿವೆ. ಹೊಸ ತಂತ್ರಜ್ಞಾನ ಬಂದಂತೆಲ್ಲ ನಾವು ಹತ್ತಿರವಿದ್ದೂ ಇನ್ನಷ್ಟು–ಮತ್ತಷ್ಟು ದೂರವಾಗುತ್ತಲೇ ಇದ್ದೇವೆ.

(ಅಂಕಿ–ಅಂಶ: ಸ್ಮಾರ್ಟ್‌ಫೋನ್ ಬಳಕೆ ಕುರಿತ ಹ್ಯಾಕರ್ಸ್‍ನೂನ್.ಕಾಂ ಅಧ್ಯಯನಗಳ ವರದಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT