ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದು ರೈತರ ‘ಕೂಗು’

Last Updated 10 ಮೇ 2018, 19:30 IST
ಅಕ್ಷರ ಗಾತ್ರ

‘ಕೂಗು ಅಂದರೆ ಆರ್ತನಾದ. ದೇಶದ ತಳಪಾಯ ಆಗಿರುವ ರೈತನ ಕೂಗು ಇದರಲ್ಲಿ ಇದೆ. ಎಲ್ಲ ದೇಶ, ಎಲ್ಲ ಕಾಲಗಳಲ್ಲಿಯೂ ಬಹಳ ತೊಂದರೆಗೆ ಸಿಲುಕಿಕೊಂಡವ ರೈತ...’ ಎನ್ನುತ್ತ ತಮ್ಮ ಸಿನಿಮಾ ಬಗ್ಗೆ ಹೇಳಿದರು ಸೋಸಲೆ ಗಂಗಾಧರ್.

ಕೆ. ಪದ್ಮನಾಭನ್ ನಿರ್ಮಾಣದ, ರಂಗನಾಥ ನಿರ್ದೇಶನದ ‘ಕೂಗು’ ಚಿತ್ರಕ್ಕೆ ಗಂಗಾಧರ್ ಅವರು ಸಂಭಾಷಣೆ ಬರೆದಿದ್ದಾರೆ. ಚಿತ್ರದ ಹಾಡುಗಳನ್ನು ಬಿಡುಗಡೆ ಮಾಡಿ, ಚಿತ್ರದ ಬಗ್ಗೆ ಒಂದಿಷ್ಟು ಮಾಹಿತಿ ನೀಡಲು ಪದ್ಮನಾಭನ್, ರಂಗನಾಥ ಅವರು ಇಡೀ ಚಿತ್ರತಂಡದ ಜೊತೆಯಾಗಿ ಒಂದು ಕಾರ್ಯಕ್ರಮ ಆಯೋಜಿಸಿದ್ದರು. ‘ನಮಗೆ ರೈತ ಬೆಳೆದಿದ್ದೆಲ್ಲವೂ ಬೇಕು. ಆದರೆ ರೈತನಿಗೆ ಮಾತ್ರ ತನ್ನ ಬೆಳೆಗೆ ಸೂಕ್ತ ಬೆಲೆ ಸಿಗುವುದೇ ಇಲ್ಲ. ನಾನು, ಪದ್ಮನಾಭನ್, ರಂಗನಾಥ ಮತ್ತು ರವೀಶ್ (ಸಂಗೀತ ನಿರ್ದೇಶಕ ಎ.ಟಿ. ರವೀಶ್) ಒಟ್ಟಾಗಿ ಸೇರಿ ರೈತನ ಬದುಕಿನ ಬಗ್ಗೆ ಇರುವ ಈ ಸಿನಿಮಾದ ಪರಿಕಲ್ಪನೆಯನ್ನು ಸಿದ್ಧಪಡಿಸಿದೆವು’ ಎಂದರು ಗಂಗಾಧರ್.

ಈ ಚಿತ್ರದಲ್ಲಿ ಇರುವುದು ರೈತನ ಕಥೆ. ಆತ ಆತ್ಮಹತ್ಯೆ ಮಾಡಿಕೊಳ್ಳಬಾರದು ಎನ್ನುವುದು ಈ ಚಿತ್ರ ಹೇಳುವ ಸಂದೇಶ ಎಂದರು ಪದ್ಮನಾಭನ್. ಹಳ್ಳಿ, ಮತದಾನ, ನವಿರು ಪ್ರೇಮ ಕುರಿತ ಹಾಡುಗಳು ಈ ಚಿತ್ರದಲ್ಲಿ ಇವೆಯಂತೆ.

ದತ್ತ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನಿಭಾಯಿಸಿದ್ದಾರೆ. ‘ನನ್ನದು ಇದರಲ್ಲಿ ಸಾಫ್ಟ್‌ವೇರ್‌ ತಂತ್ರಜ್ಞನ ಪಾತ್ರ. ನಾನು ನನ್ನ ಸಂಬಂಧಿಕರೊಬ್ಬರನ್ನು ಕಾಣಲು ಹಳ್ಳಿಗೆ ಬಂದಿರುತ್ತೇನೆ. ಆಗ, ರೈತರ ಸಮಸ್ಯೆಗಳನ್ನು ಕಂಡು, ರೈತರ ಜೊತೆ ನನ್ನನ್ನು ಗುರುತಿಸಿಕೊಳ್ಳುತ್ತೇನೆ’ ಎಂದರು ದತ್ತ.

ವರ್ಷಾ ಅವರು ಈ ಚಿತ್ರದ ನಾಯಕಿ. ಅವರು ಇದರಲ್ಲಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಪತ್ರಕರ್ತೆ, ಸಾಫ್ಟ್‌ವೇರ್‌ ತಂತ್ರಜ್ಞ ಮತ್ತು ರೈತ ಈ ಚಿತ್ರದ ಪ್ರಮುಖ ಪಾತ್ರಗಳು’ ಎಂದರು ವರ್ಷಾ. ಪತ್ರಿಕಾಗೋಷ್ಠಿಯ ಕೊನೆಯಲ್ಲಿ ಮಾತನಾಡಿದ ರಂಗನಾಥ, ‘ಇದೊಂದು ಕಮರ್ಷಿಯಲ್ ಆಯಾಮ ಕೂಡ ಇರುವ ಸಿನಿಮಾ’ ಎಂದು ವಿವರಿಸಿದರು.

ಹರೀಶ್‌ ನಾಗರಾಜ್ ಅವರು ಈ ಚಿತ್ರದ ಸಹ ನಿರ್ಮಾಪಕರು. ಚಂದ್ರಣ್ಣ ಛಾಯಾಗ್ರಹಣ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT