ಶನಿವಾರ, ನವೆಂಬರ್ 16, 2019
22 °C
ಗಣೇಶೋತ್ಸವ ಬಂಟಿಂಗ್ಸ್‌ ತೆರವಿನ ವೇಳೆ ಪೌರಕಾರ್ಮಿಕ ಸಾವು ಪ್ರಕರಣ

ಸಿದ್ಧಿ ವಿನಾಯಕ ಮಂಡಳಿಗೆ ನೋಟಿಸ್‌?

Published:
Updated:
Prajavani

ತುಮಕೂರು: ಪೌರಕಾರ್ಮಿಕರೊಬ್ಬರ ಸಾವಿಗೆ ಕಾರಣವಾದ ನಗರದಲ್ಲಿನ ಬಂಟಿಂಗ್ಸ್‌ (ಬಣ್ಣದ ಬಟ್ಟೆಯ ತೋರಣ) ತೆರವು ಮಾಡುವ ಹೊಣೆಯನ್ನು, ಅವುಗಳನ್ನು ಅಳವಡಿಸಿದವರ ಮೇಲೆಯೇ ಹೊರೆಸಲು ತುಮಕೂರು ಮಹಾನಗರ ಪಾಲಿಕೆ ತಯಾರಾಗಿದೆ.

ಗಣೇಶ ಉತ್ಸವದ ಪ್ರಯುಕ್ತ ನಗರದಲ್ಲಿ ನಡೆದ ಅದ್ಧೂರಿ ಮೆರವಣಿಗೆಗಾಗಿ ಸಿದ್ಧಿ ವಿನಾಯಕ ಸೇವಾ ಮಂಡಳಿಯು ನಗರದ ಪ್ರಮುಖ ವೃತ್ತ ಮತ್ತು ರಸ್ತೆಗಳಲ್ಲಿ ಕೇಸರಿ ಬಣ್ಣದ ಬಂಟಿಂಗ್ಸ್‌ಗಳನ್ನು ಅಳವಡಿಸಿತ್ತು. ಉತ್ಸವ ಮುಗಿದ ಬಳಿಕ ಅ.10ರಂದು ಈ ಬಂಟಿಂಗ್ಸ್‌ಗಳನ್ನು ತೆರವು ಮಾಡುತ್ತಿದ್ದ ಪೌರಕಾರ್ಮಿಕ ನರಸಿಂಹಮೂರ್ತಿ ಅವರು ವಿದ್ಯುತ್‌ ತಗುಲಿ ಮೃತಪಟ್ಟಿದ್ದರು.

ಈಗ ಪಾಲಿಕೆ ಅನಧಿಕೃತವಾಗಿ ಬಂಟಿಂಗ್ಸ್‌ ಕಟ್ಟಿದ್ದ ಸಿದ್ಧಿ ವಿನಾಯಕ ಸೇವಾ ಮಂಡಳಿಗೆ ನೋಟಿಸ್‌ ನೀಡಲು ನಿರ್ಧರಿಸಿದೆ. ಮಂಡಳಿಯಿಂದಲೇ ಕಾರ್ಮಿಕರನ್ನು ನಿಯೋಜಿಸಿ, ಬಂಟಿಂಗ್ಸ್‌ ತೆರವು ಮಾಡಿಸಲು ನಿರ್ಣಯ ತಳೆದಿದೆ.

ಆ ಬಂಟಿಂಗ್ಸ್‌ಗಳನ್ನು ಕಟ್ಟಲು ಪಾಲಿಕೆಯಿಂದ ಅಧಿಕೃತವಾಗಿ ಅನುಮತಿಯನ್ನೆ ಪಡೆದಿರಲಿಲ್ಲ. ಅದನ್ನು ಪ್ರಶ್ನಿಸಿದಾಗ ಸ್ಥಳೀಯ ಜನಪ್ರತಿನಿಧಿಗಳೇ ನಮ್ಮ ಬಾಯಿ ಮುಚ್ಚಿಸಿದರು ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.

ನಗರದ ಸ್ವಚ್ಛತೆ ಮತ್ತು ಸೌಂದರ್ಯಕ್ಕೆ ಧಕ್ಕೆಯಾಗುವ ಎಲ್ಲ ಚಟುವಟಿಕೆಗಳನ್ನು ನಿಯಂತ್ರಿಸಲು ಪಾಲಿಕೆಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಅನಧಿಕೃತ ಬ್ಯಾನರ್‌, ಬಂಟಿಂಗ್ಸ್‌ಗಳನ್ನು ಹಾಕಿದ್ದರೂ, ಅಂಥವರ ವಿರುದ್ಧ ಕ್ರಮ ಜರುಗಿಸಲು ಜನಪ್ರತಿನಿಧಿಗಳೇ ಅಡ್ಡಗಾಲು ಹಾಕುತ್ತಿದ್ದಾರೆ. ನಾವು ನಿಸ್ಸಾಯಕರಾಗಿದ್ದೇವೆ ಎಂದು ಅವರು ಅಳಲು ಹೇಳಿಕೊಂಡರು.

ತೆರವಿಗೆ ಪೊಲೀಸ್‌ ಪ್ರಸ್ತಾವನೆ: ಹಬ್ಬ–ಹರಿದಿನ, ರಾಜಕಾರಣಿಗಳ ಜನ್ಮದಿನದಂದು ನಗರದಲ್ಲಿ ಶುಭಕೋರುವ ಬ್ಯಾನರ್‌ಗಳ ಹಾವಳಿ ಹೆಚ್ಚುತ್ತದೆ. ಒಂದು ಪಕ್ಷ, ಧರ್ಮ, ಸಮುದಾಯದವರಿಗೆ ಪ್ರತಿಸ್ಪರ್ಧಿಯಂತೆ ಬೇರೆಯವರು ಸಹ ಬ್ಯಾನರ್‌ಗಳನ್ನು ಕಟ್ಟುತ್ತಾರೆ. ಈ ರೀತಿಯ ಅನಾರೋಗ್ಯಕರ ಸ್ಪರ್ಧೆಯಿಂದ ಗಲಾಟೆಗಳು ಆಗಲುಬಹುದು. ಹಾಗಾಗಿ ಬ್ಯಾನರ್‌ಗಳನ್ನು ಆಗಾಗ್ಗೆ ತೆರವು ಮಾಡುವಂತೆ ಮಹಾನಗರ ಪಾಲಿಕೆಗೆ ನಾವು ಪತ್ರ ಬರೆದಿದ್ದೇವೆ ಎಂದು ತಿಲಕ್‌ ಪಾರ್ಕ್‌ ಠಾಣೆಯ ಇನ್‌ಸ್ಪೆಕ್ಟರ್‌ ಎಸ್‌.ಪಾರ್ವತಮ್ಮ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೊಲೀಸ್‌ ಇಲಾಖೆಯಿಂದ ಬಂದಿದ್ದ ಪತ್ರದ ಅನುಸಾರ ನಾವು ಬಂಟಿಂಗ್ಸ್‌ಗಳನ್ನು ತೆರವು ಮಾಡಲು ಪೌರಕಾರ್ಮಿಕರನ್ನು ನಿಯೋಜಿಸಿದ್ದೆವು ಎಂದು ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದರು.
*

ಬಂಟಿಂಗ್ಸ್‌ಗಳನ್ನು ನಿರ್ದಿಷ್ಟ ದಿನಗಳ ಒಳಗೆ ಸಿದ್ಧಿ ವಿನಾಯಕ ಮಂಡಳಿಯೇ ತೆರವು ಮಾಡಬೇಕು. ಆ ಕುರಿತು ಮಂಡಳಿಗೆ ನೋಟಿಸ್‌ ಕೊಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
-ಲಲಿತಾ ರವೀಶ್‌, ಮೇಯರ್‌

ಪ್ರತಿಕ್ರಿಯಿಸಿ (+)