ಬುಧವಾರ, ಆಗಸ್ಟ್ 4, 2021
20 °C

ಬಸ್ ಪಾಸ್‌ ರಿಯಾಯಿತಿ ಕಡಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್‌ಅನ್ನು ಹಿಂದಿನ ವರ್ಷಗಳಂತೆ ನೀಡಬೇಕು ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‍ಒ) ಒತ್ತಾಯಿಸಿದೆ.

ಪ್ರಸಕ್ತ ಸಾಲಿನಲ್ಲಿ ಶಾಲಾ, ಕಾಲೇಜುಗಳನ್ನು ತೆರೆದರೆ ಬಸ್‌ ಪಾಸ್ ರಿಯಾಯಿತಿ ವೆಚ್ಚವನ್ನು ಸರ್ಕಾರ ಭರಿಸುವುದಿಲ್ಲ ಎಂದು ನಿರ್ಧಾರ ಕೈಗೊಂಡಿರುವುದು ವಿದ್ಯಾರ್ಥಿ ಹಾಗೂ ಪ್ರಜಾಪ್ರಭುತ್ವ ವಿರೋಧಿ
ನೀತಿಯಾಗಿದೆ ಎಂದು ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಟಿ.ಇ.ಅಶ್ವಿನಿ ಖಂಡಿಸಿದ್ದಾರೆ.

ಈಗಾಗಲೇ ಕೋವಿಡ್‌ನಿಂದ ಜನಸಾಮಾನ್ಯರು ತತ್ತರಿಸಿದ್ದು, ಆರ್ಥಿಕ ಸಮಸ್ಯೆಗಳಿಂದ ನಲುಗಿದ್ದಾರೆ. ಅದೆಷ್ಟೋ ಕುಟುಂಬಗಳಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟಕರವಾಗಿದೆ. ಉದ್ಯೋಗವಿಲ್ಲದೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮಾನಸಿಕ ಒತ್ತಡ ಸೃಷ್ಟಿಸುವಂತಹ ಹಾಗೂ ಅವೈಜ್ಞಾನಿಕವಾಗಿ ‘ಒಂದು ತಿಂಗಳಿನಲ್ಲಿ ಎರಡು ಸೆಮಿಸ್ಟರ್ ಪರೀಕ್ಷೆ' ನಡೆಸಲು ಸರ್ಕಾರ ಮುಂದಾಗಿದೆ. ಅದರ ಜತೆಗೆ ಈಗ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವುದಿಲ್ಲ. ಪೂರ್ಣ ಹಣ ಭರಿಸಬೇಕು ಎಂದು ಹೇಳುತ್ತಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶಿಕ್ಷಣ, ವೈದ್ಯಕೀಯ, ಸಾರಿಗೆ– ಇವು ಸೇವಾ ಕ್ಷೇತ್ರಗಳು. ಇಲ್ಲಿ ರಿಯಾಯಿತಿ ದರದ ಬಸ್ ಪಾಸ್ ವೆಚ್ಚವನ್ನು ಭರಿಸುವುದು ಸರ್ಕಾರದ ಜವಾಬ್ದಾರಿ. ಆದರೆ ಈ ವೆಚ್ಚವನ್ನು ಸಾರಿಗೆ ನಿಗಮ ಮತ್ತು ವಿದ್ಯಾರ್ಥಿಗಳ ಮೇಲೆ ಹೊರಿಸುವುದು ಅತ್ಯಂತ ಬೇಜವಾಬ್ದಾರಿ ಧೋರಣೆಯಾಗಿದೆ. ಸಾರಿಗೆ ನಿಗಮಗಳು ಈ ಹೊರೆಯನ್ನು ಬಡ ವಿದ್ಯಾರ್ಥಿಗಳು, ಪೋಷಕರಿಗೆ ವರ್ಗಾಯಿಸುತ್ತಿವೆ. ಸಾರಿಗೆ ನಿಗಮ ಮತ್ತು ವಿದ್ಯಾರ್ಥಿಗಳ ನಡುವೆ ಒಡಕು ತಂದು, ಸರ್ಕಾರ ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪಿತೂರಿ ನಡೆಸಿದೆ ಎಂದು ಆರೋಪಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.